ADVERTISEMENT

ತಿರುಮಲ: 346 ಕೊಠಡಿ ಫೆಬ್ರುವರಿಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:39 IST
Last Updated 12 ಜುಲೈ 2022, 19:39 IST
ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಎಸ್‌.ಆರ್. ವಿಶ್ವನಾಥ್‌. ಬಿಜೆಪಿ ಮಾಧ್ಯಮ ಪ್ರಮುಖ ಕರುಣಾಕರ ಖಾಸಲೆ ಮತ್ತಿತರರು ಇದ್ದರು
ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಎಸ್‌.ಆರ್. ವಿಶ್ವನಾಥ್‌. ಬಿಜೆಪಿ ಮಾಧ್ಯಮ ಪ್ರಮುಖ ಕರುಣಾಕರ ಖಾಸಲೆ ಮತ್ತಿತರರು ಇದ್ದರು   

ಬೆಂಗಳೂರು: ಕರ್ನಾಟಕ ಸರ್ಕಾರ ತಿರುಪತಿ ತಿರುಮಲದಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತ ಕರ್ನಾಟಕ ಭವನದ ಕಾಮಗಾರಿ ಬಿರುಸಿನಿಂದ ಸಾಗಿದ್ದು, 2023ರ ಫೆಬ್ರುವರಿಯಲ್ಲಿ ಭಕ್ತರ ಬಳಕೆಗೆ ಲಭ್ಯವಾಗಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ನ ಸದಸ್ಯರಾಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್‌ ಹೇಳಿದರು.

ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ’ಒಟ್ಟು 346 ಕೊಠಡಿಗಳು ಮುಂದಿನ ವರ್ಷಾರಂಭಕ್ಕೆ ಭಕ್ತರ ಬಳಕೆಗೆ ಸಿಗಬೇಕು ಎಂಬುದು ಕರ್ನಾಟಕದ ಸರ್ಕಾರದ ಅಪೇಕ್ಷೆ. 3 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಸಂಪಿಗೆ, ಸೇವಂತಿಕೆ, ತಾವರೆ ಮತ್ತು ಮಲ್ಲಿಗೆ ಹೆಸರಿನ ನಾಲ್ಕು ಕಟ್ಟಡಗಳು ಈ ಭವನದಲ್ಲಿ ಇರಲಿವೆ‘ ಎಂದು ವಿವರಿಸಿದರು.

ತಿರುಮಲ ಬೆಟ್ಟದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ ಸುಮಾರು 7 ಎಕರೆ ಜಾಗವಿದೆ. ಇಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಬೇರೆ ಯಾವುದೇ ರಾಜ್ಯವು ಇಷ್ಟು ಬೃಹತ್ ಪ್ರಮಾಣದ ಕಟ್ಟಡವನ್ನು ನಿರ್ಮಿಸುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜತೆಯಾಗಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ADVERTISEMENT

ಬೆಟ್ಟದ ಕೆಳಗೆ ತಿರುಪತಿಯಲ್ಲಿಯೂ ಕರ್ನಾಟಕದ ಜಮೀನಿದೆ. ಅಲ್ಲಿಯೂ ಅತಿಥಿಗೃಹ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.