ADVERTISEMENT

ಸಂಚಾರ ಪೊಲೀಸರಿಂದ ‘ಟೋಯಿಂಗ್‌’ ಅಸ್ತ್ರ | ‘ಟೈಗರ್’ ಗರ್ಜನೆ – ಮಾಲೀಕರ ವೇದನೆ!

ನೋ ಪಾರ್ಕಿಂಗ್‌ ಪ್ರದೇಶದ ವಾಹನಗಳ ಎತ್ತಂಗಡಿ

ರಾಜೇಶ್ ರೈ ಚಟ್ಲ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
   

ಬೆಂಗಳೂರು: ನಗರ ಬೆಳೆದಂತೆ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ವಿಸ್ತಾರಗೊಂಡ ರಸ್ತೆಯ ಇಕ್ಕೆಲಗಳಲ್ಲಿ, ಫುಟ್‌ಪಾತ್‌ಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಲ್ಲುತ್ತಿವೆ. ಹೀಗೆ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುವ ವಾಹನಗಳನ್ನು ಎತ್ತಂಗಂಡಿ ಮಾಡಿ, ಮಾಲೀಕರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರು ‘ಟೋಯಿಂಗ್‌’ ಅಸ್ತ್ರ ಬಳಸುತ್ತಾರೆ.

ಅಸ್ತವ್ಯಸ್ತ ಹಾಗೂ ಅಸಮರ್ಪಕವಾಗಿ, ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟುಮಾಡುವ ವಾಹನಗಳನ್ನು ಟೊ (ಎಳೆದೊಯ್ದು) ಮಾಡಿದ ಶುಲ್ಕ ಸೇರಿಸಿ, ನೋ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ‘ಟೈಗರ್’ಗಳ (ಟೋಯಿಂಗ್‌ ವಾಹನ) ಗರ್ಜನೆ, ವಾಹನ ಮಾಲೀಕರ ವೇದನೆಗೆ ಕಾರಣವಾಗುತ್ತಿದೆ. ಈ ಪ್ರಕ್ರಿಯೆಯ ಬಗ್ಗೆ ಆರೋಪಗಳು– ದೂರುಗಳು ಸಾಮಾನ್ಯವಾಗಿದೆ.

ಟೋಯಿಂಗ್‌ ಮಾಡಲು ಖಾಸಗಿ ಟೋಯಿಂಗ್‌ ವಾಹನಗಳನ್ನು ಟೆಂಡರ್‌ ಮೂಲಕ ಬಾಡಿಗೆ ಆಧಾರದಲ್ಲಿ ಪಡೆದು ನಿರ್ವಹಿಸಲಾಗುತ್ತಿದೆ. ನಗರದಲ್ಲಿ 87 ಟೋಯಿಂಗ್‌ ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ಟೊ ಮಾಡಲಾಗುವ ವಾಹನಗಳ ಮಾಲೀಕರಿಗೆ ಪಾವತಿಸಬೇಕಾದ ಬಾಡಿಗೆ ಮೊತ್ತವನ್ನು 2008ರ ಮೇ 19ರಂದು ನಿಗದಿಪಡಿಸಲಾಗಿತ್ತು. ದ್ವಿಚಕ್ರ ವಾಹನಗಳಿಗೆ ₹ 200, ತ್ರಿಚಕ್ರ ವಾಹನಗಳು, ಕಾರುಗಳಿಗೆ ₹ 300 ಟೋಯಿಂಗ್‌ ಶುಲ್ಕ ವಿಧಿಸಲಾಗಿತ್ತು. ಈ ಶುಲ್ಕವನ್ನು 2016ರಲ್ಲಿ ಪರಿಷ್ಕರಿಸಲಾಗಿದೆ.

ADVERTISEMENT

ನಿಯಮದ ಪ್ರಕಾರ ನಿಗದಿತ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಸಮೀಪ ಹಾಗೂ ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಂದ ದಟ್ಟಣೆ ಉಂಟಾಗುವಂತಿದ್ದರೆ ಅವುಗಳನ್ನು ತೆರವು ಮಾಡಬಹುದಾಗಿದೆ. ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟೋಯಿಂಗ್‌ ಪ್ರಕ್ರಿಯೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಬೇಕು ಎನ್ನುವುದು ಸಂಚಾರ ಪೊಲೀಸರ ವಾದ.

ಆದರೆ, ಟೋಯಿಂಗ್‌ ಸಂದರ್ಭದಲ್ಲಿ ವಾಹನಗಳಿಗೆ ಹಾನಿಯಾಗುತ್ತಿದೆ. ಸಂಚಾರ ಪೊಲೀಸರು ಮತ್ತು ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂಬುದು ವಾಹನಗಳ ಮಾಲೀಕರ ಅಳಲು. ಗುತ್ತಿಗೆ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ವಾಹನ ಕೊಂಡೊಯ್ಯಲಾಗುತ್ತಿದೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ, ಯಾವುದೇ ವಾಹನವನ್ನು ಕೊಂಡೊಯ್ಯುವ ಮೊದಲು ಆ ವಾಹನದ ಸಂಖ್ಯೆಯನ್ನು ಮೂರು ಬಾರಿ ಮೈಕ್‌ನಲ್ಲಿ ಕೂಗುವ ಮೂಲಕ ಅದರ ಮಾಲೀಕರಿಗೆ ಎಚ್ಚರಿಕೆ ಕೊಡಬೇಕು ಎಂದು ಪೊಲೀಸ್‌ ಕಮಿಷನರ್‌ಗಳಾಗಿದ್ದ ಪ್ರವೀಣ್‌ ಸೂದ್‌ ಮತ್ತು ಸುನಿಲ್‌ಕುಮಾರ್‌ ಸೂಚಿಸಿದ್ದರು. ಹೆಚ್ಚುವರಿ ಕಮಿಷನರ್‌ ಆಗಿದ್ದ (ಸಂಚಾರ ವಿಭಾಗ) ಆರ್‌. ಹಿತೇಂದ್ರ ಮತ್ತು ಪಿ. ಹರಿಶೇಖರನ್‌ ಕೂಡಾ ಹೇಳಿದ್ದರು. ಮಾಲೀಕರು ಸ್ಥಳಕ್ಕೆ ಕೂಡಲೇ ಬಂದರೆ ಅಂಥ ವಾಹನಗಳನ್ನು ಟೋಯಿಂಗ್‌ ಮಾಡುವಂತಿಲ್ಲ. ನಿಲುಗಡೆ ನಿಷೇಧಿತ ಪ್ರದೇಶದಲ್ಲಿ (ನೋ ‍ಪಾರ್ಕಿಂಗ್‌) ವಾಹನ ನಿಲ್ಲಿಸಿದ್ದಕ್ಕೆ ದಂಡ ವಸೂಲು ಮಾಡಬಹುದು.

ಮೆಜೆಸ್ಟಿಕ್‌, ಕೆ.ಆರ್. ಮಾರುಕಟ್ಟೆಯಿಂದ ಪುರಭವನದ ವರೆಗಿನ ರಸ್ತೆ, ಮಲ್ಲೇಶ್ವರದ ವಾಣಿಜ್ಯ ಮಳಿಗೆಗಳಿರುವ ಒಳರಸ್ತೆಗಳು, ಎಸ್‌.ಪಿ. ರಸ್ತೆ, ಕಲಾಸಿಪಾಳ್ಯ, ಜೆ.ಸಿ ರಸ್ತೆಯ ಗಲ್ಲಿಗಳು, ಇಂದಿರಾನಗರದ ಇಕ್ಕಟ್ಟಿನ ರಸ್ತೆ ಪ್ರದೇಶಗಳಲ್ಲಿ ಟೋಯಿಂಗ್‌ ನಡೆಯುತ್ತಲೇ ಇರುತ್ತದೆ. ಆದರೆ, ಶಿವಾಜಿನಗರ, ನೀಲಸಂದ್ರ, ಕೆ.ಆರ್‌. ಮಾರುಕಟ್ಟೆಯ ಆಯ್ದ ಕೆಲವು ಭಾಗಗಳು, ಚಿಕ್ಕಪೇಟೆಯ ಕೆಲವು ಆಯ್ದ ಭಾಗಗಳಿಗೆ ಟೋಯಿಂಗ್‌ ವಾಹನಗಳು ಹೋಗುವುದೇ ಇಲ್ಲ. ನಗರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದಾಗ ಟೋಯಿಂಗ್‌ದಾರರಿಗೆ ಸಂಭ್ರಮ. ಅಲ್ಲೆಲ್ಲ ಟೋಯಿಂಗ್ ವಾಹನಗಳು ಸಂಚರಿಸಿ ‘ವಿಶೇಷ ಕಾರ್ಯಾಚರಣೆ’ ನಡೆಸುತ್ತವೆ.

ಎತ್ತಿ ಎಸೆಯುತ್ತಾರೆ, ನಿಂದಿಸುತ್ತಾರೆ!

‘ಕೆಲವು ಕಡೆ ಪಾರ್ಕಿಂಗ್‌ ನಿಷೇಧಿತ ಪ್ರದೇಶವೆಂಬ ಫಲಕಗಳೇ ಇರುವುದಿಲ್ಲ. ಅಂಥ ಕಡೆ ನಿಲ್ಲಿಸಿದ ವಾಹನಗಳನ್ನೂ ಟೋಯಿಂಗ್‌ ಸಿಬ್ಬಂದಿ ತಮ್ಮ ವಾಹನಕ್ಕೆ ಎತ್ತಿ ಹಾಕುತ್ತಾರೆ. ಕೆಲವೊಮ್ಮೆ ಎಸೆಯುತ್ತಾರೆ. ಟೋಯಿಂಗ್ ವಾಹನದಲ್ಲಿ ಮೈಕ್ ಇದ್ದರೂ ವಾಹನ ತೆರವು ಮಾಡುವ ಬಗ್ಗೆ ‘ಧ್ವನಿ’ ಇಲ್ಲ. ಅದರ ಬದಲು ವಾಹನ ನಿಲ್ಲಿಸಿದವರನ್ನು ನಿಂದಿಸಲು ಬಳಸುತ್ತಾರೆ’ ಎನ್ನುವುದು ವಾಹನ ಮಾಲೀಕರ ಆರೋಪ. ಯಾವುದಾದರೂ ಭಾಗಕ್ಕೆ ಹಾನಿಯಾಗದೆ ವಾಹನ ಸಿಕ್ಕಿದರೆ ಅದೃಷ್ಟ. ಟೊ ಮಾಡುತ್ತಾರೆ ಎನ್ನುವುದು ಗೊತ್ತಾಗಿ ತಕ್ಷಣವೇ ಸ್ಥಳಕ್ಕೆ ಧಾವಿಸಿದರೂ ಪೊಲೀಸರು ಮತ್ತು ಸಿಬ್ಬಂದಿ, ‘ಗಾಡಿ ಹಾಕಿರುವ ಸ್ಥಳಕ್ಕೇ ಬನ್ನಿ’ ಎಂದು ವಾಹನ ಎಳೆದುಕೊಂಡು ಹೋಗುತ್ತಾರೆ. ಶುಲ್ಕ ವಿಧಿಸುವ ಕೆಲಸವನ್ನೂ ಆ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನಾಕ್ರೋಶ ವ್ಯಕ್ತವಾಗಿದೆ.

‘ನಗರದ ಬಹುತೇಕ ಕಡೆಗಳಲ್ಲಿ ಕಟ್ಟಡದ ಪಾರ್ಕಿಂಗ್‌ ಪ್ರದೇಶಗಳನ್ನೇ ಬಳಸಿ ಅಂಗಡಿ, ಮಳಿಗೆ, ರೆಸ್ಟೋರೆಂಟ್‌ ಮಾಡಿಕೊಂಡಿದ್ದಾರೆ. ಪಾರ್ಕಿಂಗ್‌ಗೆ ತಕ್ಕ ಜಾಗ ಕಲ್ಪಿಸುವ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ಮಾಡದೇ ಸಂಚಾರ ಪೊಲೀಸರು ಭಾರಿ ದಂಡ ವಿಧಿಸುವ, ವಾಹನಗಳನ್ನು ಟೋಯಿಂಗ್‌ ಮಾಡುವ ಕೆಲಸದಲ್ಲಿ ನಿರತರಾಗಿರುವುದು ಸರಿಯಲ್ಲ’ ಎನ್ನುವುದು ವಾಹನ ಮಾಲೀಕ ರಮೇಶ ಹೇಳುತ್ತಾರೆ.

‘ಬಹುತೇಕ ಕಡೆ ನೋ ಪಾರ್ಕಿಂಗ್ ಫಲಕವೇ ಇಲ್ಲ. ಸಂಚಾರ ಪೊಲೀಸರು ಸೇರಿ ಇನ್ನಷ್ಟು ಪಾರ್ಕಿಂಗ್‌ ಪ್ರದೇಶಗಳನ್ನು ಗುರುತಿಸಬೇಕು. ಮಾಲ್‌, ಖಾಲಿ ಜಾಗಗಳಲ್ಲಿ ಪಾರ್ಕಿಂಗ್‌ ಶುಲ್ಕ ಗಣನೀಯ ಕಡಿಮೆ ಮಾಡಬೇಕು. ಏಕರೂಪದ ಕನಿಷ್ಠ ಪಾರ್ಕಿಂಗ್‌ ಶುಲ್ಕ ನಿಗದಿಪಡಿಸಬೇಕು. ವೃತ್ತಿಪರ ತರಬೇತಿ ಬೇಕು. ವಾಹನ ಎತ್ತುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಟೋಯಿಂಗ್‌ ಸಿಬ್ಬಂದಿಗೆ ತರಬೇತಿ ನೀಡಬೇಕು. ಎಚ್ಚರಿಕೆ ನೀಡಿದ ಬಳಿಕವೂ ವಾಹನ ತೆರವು ಮಾಡದಿದ್ದರೆ ಟೋಯಿಂಗ್‌ ಮಾಡಬಹುದು’ ಎಂದೂ ಅವರು ಹೇಳಿದರು.

ಮಾತಿನ ಚಕಮಕಿ, ತಳ್ಳಾಟ!

ವಾಹನ ಎತ್ತೊಯ್ಯುವ ವೇಳೆ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನಡೆದ ಹಲವು ನಿದರ್ಶನಗಳಿವೆ. ‘ಟೋಯಿಂಗ್ ವಾಹನದ ಚಾಲಕ ಮದ್ಯ ಸೇವಿಸಿದ್ದಾನೆ’ ಎಂದು ಆರೋಪಿಸಿ ಕೆಲವರು ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ರಾಜಾಜಿನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಆದರೆ, ಆಲ್ಕೋ ಮೀಟರ್‌ನಲ್ಲಿ ತಪಾಸಣೆ ನಡೆಸಿದಾಗ ಚಾಲಕ ಮದ್ಯ ಸೇವಿಸಿರಲಿಲ್ಲ ಎನ್ನುವುದು ದೃಢಪಟ್ಟಿತ್ತು.

‘ಸಂಚಾರ ನಿಯಮ ಉಲ್ಲಂಘಿಸುವ ಸಾರ್ವಜನಿಕರ ವಾಹನಗಳನ್ನು ಸಾಗಿಸಲು ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಂದ ‘ಟೈಗರ್’ ವಾಹನಗಳನ್ನು ಪಡೆಯಲಾಗುತ್ತಿದೆ. ಆದರೆ, ಗುತ್ತಿಗೆದಾರರು ತಮ್ಮ ಕೆಲಸವನ್ನು ಬೇರೊಬ್ಬರಿಗೆ ಉಪಗುತ್ತಿಗೆ ನೀಡಿರುವ ನಿದರ್ಶನವೂ ಇದೆ. ಗುತ್ತಿಗೆ ನೀಡುವ ವೇಳೆ ಮಾಡಿಕೊಂಡ ಒಪ್ಪಂದದಂತೆ ಮುಂದುವರಿಯಬೇಕು. ಬೇಕಾಬಿಟ್ಟಿಯಾಗಿ ವರ್ತಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಬಾರದೆಂದು ಹಿರಿಯ ಅಧಿಕಾರಿಗಳು ಫರ್ಮಾನು ಹೊರಡಿಸಿದರೂ ಸುಧಾರಣೆ ಆಗಿಲ್ಲ. ಈ ವ್ಯವಸ್ಥೆಗೆ ಪಾರದರ್ಶಕತೆ ತರಬೇಕು’ ಎಂಬುದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಬಿ.ಆರ್‌. ರವೀಕಾಂತೇಗೌಡ ಅವರ ಇಂಗಿತ.

ಯಾರಿಗೆ ಟೋಯಿಂಗ್‌ ಅಧಿಕಾರ?

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಶ್ರೇಣಿ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳು ವಾಹನಗಳನ್ನು ಟೊ ಮಾಡಿಸಲು ಮತ್ತು ಮಾಲೀಕರಿಗೆ ಟೋಯಿಂಗ್‌ ಶುಲ್ಕ ವಿಧಿಸುವ ಅಧಿಕಾರ ನೀಡಲಾಗಿದೆ.

‘ಟೋಯಿಂಗ್‌ ವಾಹನಗಳಿಗೆ ಜಿಪಿಎಸ್‌, ಸಿಸಿಟಿವಿ ಕ್ಯಾಮೆರಾ’

‘ಯಾವುದೇ ಆರೋಪ– ಅಪವಾದಗಳಿಗೆ ಅವಕಾಶ ನೀಡಬಾರದು ಮತ್ತು ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು ಎಂಬ ಉದ್ದೇಶದಿಂದ ಟೈಗರ್ ವಾಹನಗಳಿಗೆ ಜಿಪಿಎಸ್‌ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಪೊಲೀಸ್‌ ಕಮಿಷನರ್ ಕೂಡಾ ಇದಕ್ಕೆ ಒಪ್ಪಿದ್ದಾರೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌. ರವಿಕಾಂತೇಗೌಡ ಹೇಳಿದರು.

‘ಟೋಯಿಂಗ್‌ ವೇಳೆಯಲ್ಲಿ ಸಿಬ್ಬಂದಿ ಸಮವಸ್ತ್ರ ಧರಿಸಬೇಕು. ಪೊಲೀಸ್‌ ಅಧಿಕಾರಿ ಜೊತೆಗಿರುತ್ತಾರೆ. ಮೂರು

ಬಿ.ಆರ್‌. ರವಿಕಾಂತೇಗೌಡ

ವರ್ಷದ ಹಿಂದೆ ನೀಡಿದ್ದ ಟೆಂಡರ್‌ ಮುಗಿಯಲು ಎರಡು ತಿಂಗಳು ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಹೊಸದಾಗಿ ಟೆಂಡರ್‌ ಕರೆಯಲಾಗುವುದು. ಜಿಪಿಎಸ್‌ ಮತ್ತು ಸಿಸಿಟಿವಿ ಕ್ಯಾಮೆರಾ ಇರಬೇಕೆಂಬ ಷರತ್ತು ವಿಧಿಸಲಾಗುವುದು. ಆ ಮೂಲಕ, ಸಂಚಾರ ನಿಯಂತ್ರಣ ಕೇಂದ್ರದಿಂದಲೇ ಈ ಪ್ರಕ್ರಿಯೆಯನ್ನು ನಿರ್ವಹಿಸಲಾಗುವುದು. ವಾಹನ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವೂ ಇದೆ’ ಎಂದು ವಿವರಿಸಿದರು.

‘ಟೊ ಮಾಡುವ ಸಿಬ್ಬಂದಿಯೇ ಶುಲ್ಕ ವಸೂಲು ಮಾಡುತ್ತಾರೆ ಎಂಬ ಆರೋಪವೂ ಇದೆ. ಟೋ ಮಾಡಿದ ಬಳಿಕ ಹಣವನ್ನು ಸರ್ಕಾರಕ್ಕೆ ಪಾವತಿಸದೆ ಸಿಬ್ಬಂದಿಯೇ ಹಂಚಿಕೊಳ್ಳುತ್ತಾರೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಟೋಯಿಂಗ್‌ ವೇಳೆ ವಾಹನಗಳಿಗೆ ಹಾನಿ ಉಂಟಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಈ ಕಾರಣಕ್ಕೆ ಹೈಡ್ರೋಲಿಕ್‌ ಲಿಫ್ಟ್‌ ವ್ಯವಸ್ಥೆಯಲ್ಲೇ ವಾಹನಗಳನ್ನು ಟೋಯಿಂಗ್‌ ವಾಹನಕ್ಕೆ ಹತ್ತಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು. ಹಾಗೆಂದು, ಟೋಯಿಂಗ್‌ ಮೂಲಕ ಮೈಕಿನಲ್ಲಿ ಕೂಗಿ ಹೇಳಲೇಬೇಕೆಂಬ ನಿಯಮವೇನೂ ಇಲ್ಲ. ಈ ರೀತಿ ಕೂಗಿ ಹೇಳಿದರೆ, ಸಮೀಪದಲ್ಲೇ ಇರುವ ಮಾಲೀಕರೇ ಬಂದು ತಮ್ಮ ವಾಹನ ತೆರವುಗೊಳಿಸಲು ಅನುಕೂಲವಾಗುತ್ತದೆ ಅಷ್ಟೆ’ ಎಂದರು.

‘ಪೊಲೀಸರೂ ತಪ್ಪೇ ಮಾಡುವುದಿಲ್ಲ ಎಂದಲ್ಲ. ರಸ್ತೆ ಬಳಕೆದಾರರು ಮತ್ತು ಸಂಚಾರ ಪೊಲೀಸರ ನಡುವಿನ ಸಂಘರ್ಷ ಸಹಜ–ಸಾಮಾನ್ಯ. ಇಬ್ಬರೂ ಹೊಣೆಯರಿತು ವರ್ತಿಸಿದರೆ ಎಲ್ಲ ಸರಿ ಹೋಗುತ್ತದೆ’ ಎಂದರು.

ಓದುಗರು ಪ್ರತಿಕ್ರಿಯಿಸಿ: ವಾಟ್ಸಪ್‌ ಸಂಖ್ಯೆ– 95133 22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.