ADVERTISEMENT

ಉಪನಗರ ರೈಲು ಯೋಜನೆಗೆ ಶೀಘ್ರ ಅನುಮೋದನೆ: ಸಚಿವ ಸುರೇಶ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 20:08 IST
Last Updated 16 ಅಕ್ಟೋಬರ್ 2019, 20:08 IST
ರೈಲು ಗಾಲಿ ತಯಾರಿಕಾ ಕಾರ್ಖಾನೆಗೆ ಸುರೇಶ್ ಅಂಗಡಿ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಸದ ಪಿ.ಸಿ. ಮೋಹನ್ ಇದ್ದರು
ರೈಲು ಗಾಲಿ ತಯಾರಿಕಾ ಕಾರ್ಖಾನೆಗೆ ಸುರೇಶ್ ಅಂಗಡಿ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಸದ ಪಿ.ಸಿ. ಮೋಹನ್ ಇದ್ದರು   

ಬೆಂಗಳೂರು: ‌‘ಉಪನಗರ ರೈಲು ಯೋಜನೆಯ ಪರಿಷ್ಕೃತ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಮುಂದಿನ ತಿಂಗಳಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ದೊರೆಯಲಿದೆ’ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಉಪನಗರ ರೈಲು ಯೋಜನೆ ಸಂಬಂಧ ಸಂಸದ ಪಿ.ಸಿ. ಮೋಹನ್ ಅವರ ಜತೆ ಬುಧವಾರ ಚರ್ಚೆ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಉಪನಗರ ರೈಲು ಯೋಜನೆ ಚುರುಕುಗೊಂಡಿದೆ. ಬೆಂಗಳೂರಿನ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ ಎಂದರು.

ADVERTISEMENT

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಕೆ ರೈಡ್‌–ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್) ರಾಜ್ಯದಲ್ಲಿ ರೈಲು ಯೋಜನೆಗಳ ಅನುಷ್ಠಾನದ ವಿಶೇಷ ಉದ್ದೇಶದ ಘಟಕವನ್ನಾಗಿ (ಎಸ್‌ಪಿವಿ) ನಿಯೋಜಿಸಲಾಗಿದೆ. ಇದಕ್ಕೊಬ್ಬರು ಮುಖ್ಯಸ್ಥರನ್ನೂ ನೇಮಿಸಲಾಗಿದ್ದು, ಅಗತ್ಯ ಇರುವ ಸಿಬ್ಬಂದಿಯನ್ನು ನೇಮಿಸಿಕೊಂಡು ಕಾಮಗಾರಿ ಆರಂಭಿಸುವುದು ಅವರ ಕೆಲಸ. ಅದನ್ನು ಅವರು ಮಾಡುತ್ತಿದ್ದಾರೆ ಎಂದರು.

‘ಯೋಜನೆ ಪೂರ್ಣಗೊಳಿಸಲು 5 ವರ್ಷಗಳ ಕಾಲಾವಕಾಶ ಬೇಕು ಎಂಬುದೇನೂ ಇಲ್ಲ. ಒಂದು ವರ್ಷದಲ್ಲೇ ಕಾಮಗಾರಿ ಮುಗಿಸುವ ಸಾಮರ್ಥ್ಯ ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಇದೆ. ಅವರಿಗೆ ಚುರುಕು ಮುಟ್ಟಿಸುವ ಕೆಲಸ ಆಗಬೇಕಷ್ಟೆ. ಅದನ್ನು ಮಾಡುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಇದಕ್ಕೂ ಮುನ್ನ ಸಚಿವರೊಂದಿಗೆ ಮಾತನಾಡಿದ ಪಿ.ಸಿ. ಮೋಹನ್, ಉಪನಗರ ರೈಲು ಯೋಜನೆಗೆ ಶೀಘ್ರವೇ ಅನುಮೋದನೆ ಕೊಡಿಸುವಂತೆ ಮನವಿ ಮಾಡಿದರು.

ನಿಲ್ದಾಣಗಳಲ್ಲಿ ಸ್ಥಳೀಯ ಆಹಾರ
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸ್ಥಳೀಯ ಆಹಾರ ಸಿಗುವಂತೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸುರೇಶ್ ಅಂಗಡಿ ಹೇಳಿದರು.

ಪ್ರತಿ 100 ಕಿಲೋ ಮೀಟರ್‌ಗೂ ಅಹಾರ ಪದ್ಧತಿ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಸ್ಥಳೀಯ ಆಹಾರ ಸಿಕ್ಕರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದರು.

ಪ್ರವಾಸಿ ತಾಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋಲ್ಡನ್ ಚಾರಿಟಿ ರಥ ರೈಲು ಸಂಚಾರವನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ವಿದೇಶಗಳಿಗೆ ಗಾಲಿ
ಯಲಹಂಕದಲ್ಲಿನ ರೈಲು ಗಾಲಿ ಕಾರ್ಖಾನೆಯಿಂದ ವಿದೇಶಗಳಿಗೆ ರೈಲು ಗಾಲಿಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಸುರೇಶ್ ಅಂಗಡಿ ಹೇಳಿದರು.

‘ನಮ್ಮ ಅಗತ್ಯಕ್ಕಿಂತ ವಾರ್ಷಿಕ 10 ಸಾವಿರ ಹೆಚ್ಚುವರಿ ಗಾಲಿಗಳು ತಯಾರಾಗುತ್ತಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗುತ್ತಿದೆ’ ಎಂದರು.

‘ನವೆಂಬರ್‌ನಲ್ಲಿ ನೀತಿ ಆಯೋಗದ ಒಪ್ಪಿಗೆ’
ಉಪನಗರ ರೈಲು ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ನೀತಿ ಆಯೋಗ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ನವೆಂಬರ್‌ನಲ್ಲಿ ಸಿಗಲಿದೆ ಎಂದು ರೈಲ್ವೆ ಇಲಾಖೆಯೂ ಸ್ಪಷ್ಟಪಡಿಸಿದೆ.

‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಸೋಮವಾರ ಪ್ರಕಟವಾದ ‘ಉಪನಗರ: ಹಳಿ ಇಲ್ಲದ ರೈಲು’ ವರದಿಗೆ ನೈರುತ್ಯ ರೈಲ್ವೆ ಪ್ರತಿಕ್ರಿಯೆ ನೀಡಿದೆ.

ರಾಜ್ಯ ಸರ್ಕಾರದ ಜತೆ ಸಮನ್ವಯ ನಡೆಸಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಪಿಂಕ್ ಪುಸ್ತಕದಲ್ಲಿ ಕೇಂದ್ರ ಸರ್ಕಾರ ನೀಡಿದ ಪ್ರಾಥಮಿಕ ಅನುದಾನವನ್ನಷ್ಟೇ ದಾಖಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಯೋಜನೆಗೆ ಅಗತ್ಯ ಇರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಲಿವೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.