ADVERTISEMENT

ಬಂಗಲೆ ನಿರ್ಮಾಣಕ್ಕೆ ಅಕ್ರಮದ ಹಣ ಬಳಕೆ

ಡಿಡಿಯುಟಿಟಿಎಲ್‌ನಲ್ಲಿ ಅಕ್ರಮ: ಜೈಲು ಸೇರಿದ ಡಿ.ಎಸ್.ವೀರಯ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 14:50 IST
Last Updated 16 ಜುಲೈ 2024, 14:50 IST
ಡಿ.ಎಸ್.ವೀರಯ್ಯ 
ಡಿ.ಎಸ್.ವೀರಯ್ಯ    

ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿರುವ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ, ಅಕ್ರಮದಿಂದ ಬಂದ ಹಣವನ್ನು ಆರೋಪಿಗಳು ಮನೆ ನಿರ್ಮಾಣ ಹಾಗೂ ನಿವೇಶನ ಖರೀದಿಗೆ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಿದೆ.

₹47.10 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನಿಯಮಿತದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ.ಎಸ್‌.ವೀರಯ್ಯ ಅವರನ್ನು ಸಿಐಡಿ ಪೊಲೀಸರು, ಜುಲೈ 12ರಂದು ಬಂಧಿಸಿ ಹೆಚ್ಚಿನ ವಿಚಾರಣೆಗೆ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಕಸ್ಟಡಿ ಅವಧಿಯಲ್ಲಿ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ವೀರಯ್ಯ ಅವರಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ.

‘ವೀರಯ್ಯ ಅವರ ಬ್ಯಾಂಕ್‌ ಖಾತೆಗೆ ಗುತ್ತಿಗೆದಾರರಿಂದ ₹3 ಕೋಟಿ ಸಂದಾಯ ಆಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಆ ಹಣವೂ ಸೇರಿದಂತೆ ಅಕ್ರಮದಿಂದ ಬಂದ ಹಣದಲ್ಲಿ ವೀರಯ್ಯ ಅವರು ನಾಗರಬಾವಿಯ ಉತ್ಕಾರ್‌ ಬಡಾವಣೆಯಲ್ಲಿ ಬೃಹತ್‌ ಬಂಗಲೆ ನಿರ್ಮಿಸುತ್ತಿರುವುದು ಪತ್ತೆಯಾಗಿದೆ.  ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದ ತನಿಖಾಧಿಕಾರಿಗಳು ಮಹಜರು ನಡೆಸಿದ್ದಾರೆ. ಮನೆಯು ನಿರ್ಮಾಣ ಹಂತದಲ್ಲಿದೆ. ಅಲ್ಲದೇ ಸಂಬಂಧಿಕರೊಬ್ಬರ ಹೆಸರಿನಲ್ಲಿ ಕೆಂಗೇರಿಯ ವ್ಯಾಪ್ತಿಯ ಉಲ್ಲಾಳದಲ್ಲಿ ನಿವೇಶನ ಖರೀದಿಸಿರುವುದೂ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಯಾರಿಗೆ ಎಷ್ಟು ಪಾಲು?

‘ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಅಕ್ರಮದಿಂದ ಬಂದ ಹಣದಲ್ಲಿ ಹಲವರು ಪಾಲು ಪಡೆದಿದ್ದಾರೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವೀರಯ್ಯ ಅವರ ಸಿಐಡಿ ಕಸ್ಟಡಿ ಮಂಗಳವಾರಕ್ಕೆ ಅಂತ್ಯವಾದ ಕಾರಣದಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಯನ್ನು ಜುಲೈ 30ರ ವರೆಗೆ ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿತು. ನ್ಯಾಯಾಲಯದ ಆದೇಶದಂತೆ ತನಿಖಾ ತಂಡವು, ವೀರಯ್ಯ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಿದೆ.

2023ರ ಸೆಪ್ಟೆಂಬರ್ 23ರಂದು ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಡಿಡಿಯುಟಿಟಿಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಶಂಕರಪ್ಪ ಅವರನ್ನೂ ಈ ಹಿಂದೆ ಸಿಐಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.