ADVERTISEMENT

ಕಡಿಮೆಯಾಗುತ್ತಿಲ್ಲ ಕ್ಷಯ– ಹೆಚ್ಚುತ್ತಿರುವ ರೋಗಿಗಳು

ಭಾರತದಲ್ಲಿ 27 ಲಕ್ಷ ಮಂದಿ ಬಾದಿತರು, ವಿಶ್ವದಲ್ಲಿ ದಿನವೊಂದಕ್ಕೆ 4,500 ಸಾವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:05 IST
Last Updated 24 ಮಾರ್ಚ್ 2019, 20:05 IST
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರು ಕ್ಷಯರೋಗ ರಾಕ್ಷಸನ ಪ್ರತಿಕೃತಿಗೆ ಪಿಸ್ತೂಲಿನ ಮಾದರಿಯಿಂದ ಗುಂಡು ಹಾರಿಸುವಂತೆ ನಟಿಸಿದರು–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರು ಕ್ಷಯರೋಗ ರಾಕ್ಷಸನ ಪ್ರತಿಕೃತಿಗೆ ಪಿಸ್ತೂಲಿನ ಮಾದರಿಯಿಂದ ಗುಂಡು ಹಾರಿಸುವಂತೆ ನಟಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ಷಯರೋಗ ನಿಯಂತ್ರಣಕ್ಕೆ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಈ ರೋಗದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ರಾಜ್ಯದಲ್ಲಿ 2017ರಲ್ಲಿ 78,090 ಮಂದಿಗೆ ಕ್ಷಯ ರೋಗವಿರುವುದು ಪತ್ತೆಯಾಗಿತ್ತು. 2018ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 83,707 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಈ ರೋಗ ನಿರ್ಮೂಲನೆಗೆ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳೂ ಕೈಜೋಡಿಸಿವೆ. ಆದರೂ ರೋಗವನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಜಗತ್ತಿನಲ್ಲಿ ಒಟ್ಟು 1ಕೋಟಿ ಕ್ಷಯರೋಗಿಗಳ ಪೈಕಿ ಬರೋಬ್ಬರಿ 27 ಲಕ್ಷ ಮಂದಿಭಾರತದಲ್ಲೇ ಇದ್ದಾರೆ ಎನ್ನುತ್ತದೆ 2018ರ ವಿಶ್ವ ಆರೋಗ್ಯ ಸಂಸ್ಥೆ ವರದಿ. ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ವಿಶ್ವದಲ್ಲಿ ದಿನವೊಂದಕ್ಕೆ 4,500 ಮಂದಿ ಈ ರೋಗದಿಂದ ಕೊನೆಯುಸಿರೆಳೆಯುತ್ತಿದ್ದಾರೆ ಎಂದೂ ವರದಿ ಹೇಳಿದೆ.

ADVERTISEMENT

ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈ ರೋಗದ ಪ್ರಮಾಣ ಹೆಚ್ಚು ಇದೆ. ಬಡತನ, ಅಪೌಷ್ಟಿಕತೆ, ಅಸಮರ್ಪಕ ವಸತಿ, ಅಸ್ವಚ್ಛತೆ ಹಾಗೂ ಧೂಮಪಾನ, ಮದ್ಯಪಾನದಂತಹ ದುರಭ್ಯಾಸಗಳು ಜನರನ್ನು ಕಾಯಿಲೆಯ ದವಡೆಗೆ ನೂಕುತ್ತಿವೆ. ಆದ್ದರಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗ ಇಂದಿಗೂ ಹೆಚ್ಚಾಗಿಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ತಜ್ಞರು.

‘ತಪಾಸಣೆಯಿಂದ ಕಾಯಿಲೆಧೃಡಪಟ್ಟ ನಂತರ ಸುಮಾರು 6 ತಿಂಗಳು ಚಿಕಿತ್ಸೆಯನ್ನು ಪಡೆಯಬೇಕು. ಕಾರಣಾಂತರಗಳಿಂದ ರೋಗಿಯು ಅರ್ಧದಲ್ಲಿ ಚಿಕಿತ್ಸೆ ನಿಲ್ಲಿಸುವ ಸಾಧ್ಯತೆಗಳಿರುತ್ತವೆ. ಹಾಗಾಗದಂತೆ ವೈದ್ಯರು ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತರು ಎಚ್ಚರ ವಹಿಸಬೇಕು’ ಎಂದು ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ನಿರ್ದೇಶಕ ಡಾ.ಸೋಮಶೇಖರ ತಿಳಿಸಿದರು.

‘ಎಚ್‌ಐವಿ ಸೋಂಕಿತರು, ಮಧುಮೇಹಿಗಳು, ಕ್ಯಾನ್ಸರ್‌ ಪೀಡಿತರಲ್ಲಿ ಕ್ಷಯರೋಗ ಹೆಚ್ಚಾಗಿ ಕಂಡು ಬರುತ್ತದೆ. ಇವರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿರುತ್ತದೆ. ಇದು ಕ್ಷಯರೋಗದ ಸೂಕ್ಷ್ಮಾಣು ಜೀವಿಯ ಬೆಳವಣಿಗೆಗೆ ಪೂರಕ’ ಎಂದುಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬಹುಔಷಧ ನಿರೋಧ ಕ್ಷಯರೋಗಿಗಳ ಪತ್ತೆಗೆ ಬೆಂಗಳೂರಿನ ಐ.ಆರ್‌.ಎಲ್‌ ಆಸ್ಪತ್ರೆ, ರಾಯಚೂರಿನ ರಿಮ್ಸ್‌ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ರಾಜ್ಯದ 6 ಜಿಲ್ಲಾ ಕೇಂದ್ರಗಳಲ್ಲಿ ನೋಡಲ್‌ ಡಿ.ಆರ್‌.ಟಿ.ಸಿ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಡಿ.ಆರ್‌.ಟಿ.ಟಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಅವರು ಹೇಳಿದರು.

ನಗರದಲ್ಲಿ ಭಾನುವಾರ ಆರೋಗ್ಯ ಇಲಾಖೆ ವತಿಯಿಂದ‘ಇದು ಸಮಯ: ಕ್ಷಯ ಮುಕ್ತ ವಿಶ್ವ ನಿರ್ಮಾಣಕ್ಕಾಗಿ’ ಎಂಬ ಧ್ಯೇಯದೊಂದಿಗೆ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಯಿತು.

2025ರ ಹೊತ್ತಿಗೆ ಕ್ಷಯರೋಗ ನಿರ್ಮೂಲನೆ ಮಾಡುವ ಪಣ ತೊಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

ರಾಜ್ಯದಲ್ಲಿ ಕ್ಷಯರೋಗ ಪತ್ತೆ ಪ್ರಮಾಣ (2018ರ ಅಂಕಿ–ಅಂಶ)

ಒಟ್ಟು ಪ್ರಕರಣಗಳು;ಮಕ್ಕಳು;ಗಂಡಸರು;ಹೆಂಗಸರು;ತೃತಿಯ ಲಿಂಗಿಗಳು

83707;4493;55391;28168;67

ಜಿಲ್ಲಾವಾರು ಕ್ಷಯರೋಗ ಪತ್ತೆ ಮಾಹಿತಿ

ಬಿಬಿಎಂಪಿ;ಬೆಂಗಳೂರು ನಗರ;ಬೆಳಗಾವಿ;ರಾಯಚೂರು;ಮೈಸೂರು;ಬಳ್ಳಾರಿ

9000;5000;5200;4800;4600;4500

ಸೌಲಭ್ಯ

ಟಿಬಿ ತರಬೇತಿ ಕೇಂದ್ರ; ಜಿಲ್ಲಾ ಟಿಬಿ ಕೇಂದ್ರಗಳು;ಸೂಕ್ಷ್ಮದರ್ಶಕ ಕೇಂದ್ರಗಳು;ಪ್ರಯೋಗಾಲಯಗಳು

1;31;699;4

ಕ್ಷಯರೋಗದ ಲಕ್ಷಣಗಳು

ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕೆಮ್ಮಿನಲ್ಲಿ ಕಫ

ಜ್ವರ

ಕಫದಲ್ಲಿ ರಕ್ತ

ಹಸಿವಾಗದಿರುವುದು

ತೂಕ ಕಳೆದುಕೊಳ್ಳುವಿಕೆ

ಸುಸ್ತು, ನಿರಾಸಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.