ADVERTISEMENT

ರಜತ್‌ಗೆ 14 ದಿನ ನ್ಯಾಯಾಂಗ ಬಂಧನ: ವಿನಯ್‌ ಗೌಡಗೆ ₹ 500 ದಂಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:32 IST
Last Updated 16 ಏಪ್ರಿಲ್ 2025, 15:32 IST
ವಿನಯ್‌ಗೌಡ ಹಾಗೂ ರಜತ್ 
ವಿನಯ್‌ಗೌಡ ಹಾಗೂ ರಜತ್    

ಬೆಂಗಳೂರು: ಜಾಮೀನು ಷರತ್ತು ಉಲ್ಲಂಘಿಸಿದ ಆರೋಪದಡಿ ಕಿರುತೆರೆಯ ನಟ ರಜತ್ ಕಿಶನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಗರದ 24ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಮತ್ತೊಬ್ಬ ಆರೋಪಿ, ಕಿರುತೆರೆ ನಟ ವಿನಯ್ ಗೌಡ ಅವರಿಗೆ ನ್ಯಾಯಾಲಯ ₹500 ದಂಡ ವಿಧಿಸಿದೆ.

ಇದೇ ವೇಳೆ, ಜಾಮೀನು ಕೋರಿ ರಜತ್ ಕಿಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶರು ಆದೇಶ ಪ್ರಕಟಣೆಯನ್ನು ಗುರುವಾರಕ್ಕೆ ಕಾಯ್ದಿರಿಸಿದ್ದಾರೆ.

ADVERTISEMENT

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಹೆಸರಿನ ಖಾತೆಯಲ್ಲಿ ಹಾಕಿದ್ದ ಇಬ್ಬರನ್ನು ಮಾರ್ಚ್ 25ರಂದು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಿರುವಂತೆ ಷರತ್ತು ವಿಧಿಸಿತ್ತು.

ಆದರೆ, ನ್ಯಾಯಾಲಯದ ವಿಚಾರಣೆಗೆ ರಜತ್ ಕಿಶನ್ ಹಾಜರಾಗಿರಲಿಲ್ಲ. ಹಾಜರಾತಿಯಿಂದ ವಿನಾಯಿತಿ ಕೋರಿ ಸೂಕ್ತ ಕಾರಣ ನೀಡಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಹಾಗಾಗಿ ರಜತ್ ವಿರುದ್ಧ ನ್ಯಾಯಾಲಯ ವಾರಂಟ್‌ ಜಾರಿಗೊಳಿಸಿತ್ತು. ವಾರಂಟ್‌ನ ಅನ್ವಯ ರಜತ್ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ರಜತ್ ಬಂಧನ ವಿಚಾರ ತಿಳಿದು ವಿನಯ್ ಗೌಡ ನ್ಯಾಯಾಲಯಕ್ಕೆ ಹಾಜರಾದರು.

ಕೋರ್ಟ್‌ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ರಜತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೊಂದೆಡೆ, ವಿನಯ್ ಗೌಡ ವಿನಾಯಿತಿ‌ ಕೋರಿದ್ದರಿಂದ ನ್ಯಾಯಾಲಯ ದಂಡ ವಿಧಿಸಿದೆ. ಪೊಲೀಸರು, ರಜತ್‌ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. 

ವಿನಯ್ ಗೌಡ ಮಾತನಾಡಿ, ‘ಕಣ್ಣಿನ ಸಮಸ್ಯೆಯ ಕಾರಣಕ್ಕೆ ಮೊದಲ ಬಾರಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪ್ರತಿ 15 ದಿನಕ್ಕೊಮ್ಮೆ ಪೊಲೀಸ್‌ ಠಾಣೆಗೆ ತೆರಳಿ ಸಹಿ ಮಾಡುತ್ತಿದ್ದೇನೆ. ನನ್ನ ಸಮಸ್ಯೆಯನ್ನು ಕೋರ್ಟ್‌ಗೆ ತಿಳಿಸಿದ್ದೇನೆ. ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗುತ್ತೇನೆ. ರಜತ್ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ನಾನು ದಂಡ ಕಟ್ಟಿ, ನ್ಯಾಯಾಲಕ್ಕೆ ಮನವಿ ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.