ADVERTISEMENT

18 ಟಿ.ವಿ ಕದ್ದಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 16:21 IST
Last Updated 3 ಡಿಸೆಂಬರ್ 2022, 16:21 IST

ಬೆಂಗಳೂರು: ಕೋರಮಂಗಲ ಠಾಣೆ ವ್ಯಾಪ್ತಿಯ ಹೋಟೆಲೊಂದಕ್ಕೆ ನುಗ್ಗಿ ಟಿ.ವಿ.ಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಮಂಗಮ್ಮನಪಾಳ್ಯದ ಮೊಹಮ್ಮದ್ ತೌಹಿದ್ (20) ಹಾಗೂ ಅಬೂಬಕರ್ (20) ಬಂಧಿತರು. ಇವರಿಂದ ₹ 3 ಲಕ್ಷ ಮೌಲ್ಯದ 32 ಇಂಚಿನ 18 ಟಿ.ವಿ.ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಎರಡು ತಿಂಗಳ ಹಿಂದೆಯಷ್ಟೇ ಹೋಟೆಲ್ ಬಂದ್ ಮಾಡಲಾಗಿತ್ತು. ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿತ್ತು. ಟಿ.ವಿ ಹಾಗೂ ಪೀಠೋಪಕರಣ ಕೊಠಡಿಯಲ್ಲೇ ಇದ್ದವು. ಇತ್ತೀಚೆಗೆ ಹೋಟೆಲ್‌ಗೆ ನುಗ್ಗಿದ್ದ ಆರೋಪಿಗಳು, ಕೊಠಡಿಯಲ್ಲಿದ್ದ ಟಿ.ವಿ.ಗಳನ್ನು ಒಂದೊಂದಾಗಿ ಹೊತ್ತೊಯ್ದಿದ್ದರು. ಅದೇ ಟಿ.ವಿ.ಗಳನ್ನು ಮಾರಲು ಪ್ರಯತ್ನಿಸುತ್ತಿದ್ದರು.’

ADVERTISEMENT

‘ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು. ದುಶ್ಚಟಗಳಿಗೆ ಹಣ ಹೊಂದಿಸಲು ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.