ADVERTISEMENT

ಬೆಂಗಳೂರು | ಟ್ವಿಟರ್ ಮೇಲ್ಮನವಿ: ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 16:21 IST
Last Updated 10 ಆಗಸ್ಟ್ 2023, 16:21 IST
ಎಕ್ಸ್‌ ಕಾರ್ಪ್‌
ಎಕ್ಸ್‌ ಕಾರ್ಪ್‌   

ಬೆಂಗಳೂರು: ಕೇಂದ್ರ ಸರ್ಕಾರ 2021-2022ರ ಅವಧಿಯಲ್ಲಿ ಆಯ್ದ ಟ್ವಿಟರ್‌ ಖಾತೆಗಳ ಮೇಲೆ ವಿಧಿಸಿದ್ದ ನಿರ್ಬಂಧ ಆದೇಶ ಪ್ರಶ್ನಿಸಿದ ಅರ್ಜಿಗೆ‌ ಸಂಬಂಧಿಸಿದಂತೆ ಟ್ವಿಟರ್‌ಗೆ (ಈಗ ಎಕ್ಸ್‌ ಕಾರ್ಪ್) ರಾಜ್ಯ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ವಿಧಿಸಿದ್ದ ₹ 50 ಲಕ್ಷ ದಂಡದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಎಕ್ಸ್‌ ಕಾರ್ಪ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಮೇಲ್ಮನವಿದಾರರು ಒಂದು ವಾರದಲ್ಲಿ ₹ 25 ಲಕ್ಷ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು’ ಎಂದು ಮುಂದಿನ ವಿಚಾರಣೆವರೆಗೆ ತಡೆ ನೀಡಿ ಆದೇಶಿಸಿತು.

ADVERTISEMENT

‘ಮೇಲ್ಮನವಿದಾರ ಟ್ವಿಟರ್‌ಗೆ‌ ದಂಡದ ಮೊತ್ತದ ಪೈಕಿ ₹ 25 ಲಕ್ಷವನ್ನು ಠೇವಣಿ ಇಡುವಂತೆ ಆದೇಶ ಮಾಡಿರುವುದನ್ನು ಟ್ವಿಟರ್‌ ಪರವಾಗಿ ನ್ಯಾಯವಿದೆ ಎಂದು ಅರ್ಥೈಸಬಾರದು’ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ಇದೇ 30ಕ್ಕೆ ವಿಚಾರಣೆ ಮುಂದೂಡಿದೆ.

ಏಕಸದಸ್ಯ ನ್ಯಾಯಪೀಠವು, ಇದೇ 14ರ ಒಳಗೆ ₹ 50 ಲಕ್ಷ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದಲ್ಲಿ ಪ್ರತಿದಿನ ಹೆಚ್ಚುವರಿಯಾಗಿ ₹ 5,000 ಪಾವತಿಸಬೇಕು ಎಂದು ಆದೇಶಿಸಿತ್ತು.

ಎಕ್ಸ್‌ ಕಾರ್ಪ್‌ ಪರ ವಕೀಲ ಮನು ಕುಲಕರ್ಣಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.