ಬೆಂಗಳೂರು: ಖಾಸಗಿ ಬಳಕೆಯ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ಯಾವುದೇ ನಿಯಂತ್ರಣ ಬಿದ್ದಿಲ್ಲ. ಸಾರಿಗೆ ಇಲಾಖೆಗೆ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ, ವಾಣಿಜ್ಯ ವಾಹನಗಳಿಗೂ ನಷ್ಟವಾಗುತ್ತಿದೆ.
‘ಚಲನಚಿತ್ರ ವಾಹನ ಚಾಲಕರ ಸಂಘ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮತ್ತು ಕ್ಯಾಂಪರ್ ವ್ಯಾನ್ ಸಂಸ್ಥೆಗಳು ರಾಜಾರೋಷವಾಗಿಯೇ ಖಾಸಗಿ ಬಳಕೆಯ ವಾಹನಗಳನ್ನು ವಾಣಿಜ್ಯ ಬಳಕೆ ಮಾಡುತ್ತಿವೆ. ಆರ್‌ಟಿಒ ಅಧಿಕಾರಿಗಳಿಗೆ ವಾಹನಗಳ ಮಾಹಿತಿಯನ್ನು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರೂ, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ (ಕೆಟಿಡಿಟಿಯು) ಅಧ್ಯಕ್ಷ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನ್ಯಾಯಯುತವಾಗಿ ತೆರಿಗೆ ಪಾವತಿಸಿ ಬಾಡಿಗೆ ನಡೆಸುವ ಮಾಲೀಕರು ಮತ್ತು ಚಾಲಕರ ಬದುಕು ಬೀದಿಗೆ ಬೀಳುವಂತಾಗಿದೆ. ವಾಣಿಜ್ಯ ಸಂಚಾರಕ್ಕೆ ಬಳಸುವ ಖಾಸಗಿ ಬಳಕೆಯ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದು ಆ ಪತ್ರದಲ್ಲಿ ಎಚ್ಚರಿಸಿದ್ದಾರೆ.
‘ಕದ್ದುಮುಚ್ಚಿ ಕೆಲವು ವಾಹನಗಳ ಮಾಲೀಕರು ವಾಣಿಜ್ಯ ಸಂಚಾರ ನಡೆಸುತ್ತಿದ್ದಾರೆ. ಚಲನಚಿತ್ರ ವಾಹನ ಚಾಲಕರ ಸಂಘದಲ್ಲಿ ಇರುವ 80ಕ್ಕೂ ಅಧಿಕ ವಾಹನಗಳಲ್ಲಿ ಐದಾರು ವಾಹನಗಳಷ್ಟೇ ಹಳದಿ ನಂಬರ್ ಪ್ಲೇಟ್ ಹೊಂದಿವೆ. ಉಳಿದೆಲ್ಲವೂ ಖಾಸಗಿ ವಾಹನಗಳು. ನಾವು ದೂರು ಕೊಟ್ಟಾಗ ಒಮ್ಮೆ ಒಂದೆರಡು ವಾಹನಗಳಿಗೆ ದಂಡ ವಿಧಿಸುತ್ತಾರೆ. ಆನಂತರ ಸಂಚಾರ ಹಾಗೇ ಮುಂದುವರಿಯುತ್ತಿದೆ. ಅವುಗಳ ಪರ್ಮಿಟ್ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಸದಸ್ಯ ರಮೇಶ್ ಸಿ. ಒತ್ತಾಯಿಸಿದ್ದಾರೆ.
ಲಾಂಗ್ ಡ್ರೈವ್, ಝೂಮ್ ಕಾರ‍್ಸ್, ಆನ್‌ರೋಡ್ ಕಾರ್ ರೆಂಟಲ್, ಫಿಲಿಯೊ ಕಾರ‍್ಸ್, ಗುಜರಾಲ್ ಕಾರ್ ರೆಂಟಲ್ಸ್ ಮುಂತಾದ ಕಂಪನಿಗಳ ವೈಟ್‌ಬೋರ್ಡ್ ವಾಹನಗಳು ವಾಣಿಜ್ಯ ಸಂಚಾರ ನಡೆಸುತ್ತಿದ್ದಾಗ, ಅವುಗಳನ್ನು ಹಿಡಿದು ಆರ್‌ಟಿಒ ಅಧಿಕಾರಿಗಳಿಗೆ ಒಪ್ಪಿಸಿದರೂ ಕ್ರಮ ಕೈಗೊಂಡಿಲ್ಲ. ಆ್ಯಪ್ ಆಧಾರಿತವಾಗಿ ಖಾಸಗಿ ಬಳಕೆ ವಾಹನಗಳಲ್ಲಿ ಬಾಡಿಗೆ ಮಾಡುವುದನ್ನೂ ನಿಷೇಧಿಸಬೇಕು ಎಂದು ಕೆಟಿಡಿಟಿಯು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ವಾಣಿಜ್ಯ ವಾಹನಗಳು ಹಳದಿ ನಂಬರ್ ಪ್ಲೇಟ್ ಹೊಂದಿರುತ್ತವೆ. ಈ ವಾಹನಗಳಿಗೆ ತೆರಿಗೆಯೂ ಅಧಿಕ ಇರುತ್ತದೆ. ಸ್ವಂತಕ್ಕೆ ಬಳಸುವ ವಾಹನಗಳು ಬಿಳಿ ನಂಬರ್ ಪ್ಲೇಟ್ ಹೊಂದಿರುತ್ತವೆ ಮತ್ತು ತೆರಿಗೆ ಕೂಡ ಕಡಿಮೆ ಇರುತ್ತದೆ. ಅಧಿಕ ತೆರಿಗೆ ತಪ್ಪಿಸಲು ಸ್ವಂತ ಬಳಕೆಯ ವಾಹನಗಳನ್ನೇ ವಾಣಿಜ್ಯ ವಾಹನಗಳಂತೆ ಬಳಸುತ್ತಿರುವುದು ಸಮಸ್ಯೆಯ ಮೂಲವಾಗಿದೆ. ವಾಣಿಜ್ಯ ಸಂಚಾರದ ವಾಹನಗಳನ್ನೇ ನಂಬಿದವರ ಹೊಟ್ಟೆ ಮೇಲೆ ಹೊಡೆಯುವ ಇಂಥ ವಾಹನಗಳ ಮೇಲೆ ಸಾರಿಗೆ ಸಚಿವರು, ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ವೈಟ್‌ಬೋರ್ಡ್ ವಾಹನಗಳು ವಾಣಿಜ್ಯ ಸಂಚಾರ ನಡೆಸುವಂತಿಲ್ಲ. ಅಂಥ ವಾಹನಗಳ ಮಾಲೀಕರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
‘ಸಮಯ ಕೇಳಿದ್ದೇವೆ’
ಚಲನಚಿತ್ರ ವಾಹನ ಚಾಲಕರ ಸಂಘವು ಹಲವು ದಶಕಗಳಿಂದ ಇದೆ. ಸಿನಿಮಾ ನಟ ನಟಿಯರನ್ನು ಸಹಕಲಾವಿದರನ್ನು ಸಿನಿಮಾಕ್ಕೆ ಸಂಬಂಧಪಟ್ಟವರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದೆ. ಹೊರಗೆ ಯಾವುದೇ ವಾಣಿಜ್ಯ ಸಂಚಾರ ಮಾಡುತ್ತಿಲ್ಲ. 60 ವರ್ಷಗಳಿಂದ ಇಲ್ಲದ ಸಮಸ್ಯೆಯನ್ನು ಕೆಲವರು ಒಂದು ವರ್ಷದಿಂದ ಹುಟ್ಟುಹಾಕಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಕೆ. ಮಹಾಬಲ ತಿಳಿಸಿದ್ದಾರೆ. ‘ಸರ್ಕಾರಕ್ಕೆ ನಷ್ಟ ಉಂಟುಮಾಡುವ ಉದ್ದೇಶ ನಮಗಿಲ್ಲ. ಸಾರಿಗೆ ಸಚಿವರನ್ನು ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. 6 ತಿಂಗಳ ಕಾಲಾವಕಾಶವನ್ನು ಕೇಳಿದ್ದೇವೆ. ದೊಡ್ಡ ಕಲಾವಿದರು ಹಳದಿ ಫಲಕಗಳ ವಾಹನಗಳಲ್ಲಿ ಬರಲು ಹಿಂಜರಿಯುತ್ತಿದ್ದಾರೆ. ಕಲಾವಿದರನ್ನು ಚಲನಚಿತ್ರ ಮಂಡಳಿಯವರನ್ನು ಒಪ್ಪಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.