ಬೆಂಗಳೂರು: ಅಡಿಕೆ ಹಾಳೆ ಉತ್ಪನ್ನಗಳ ರಫ್ತಿಗೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಭಾರತದಿಂದ ರಫ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್‌ಕಾರಕ ಎಂದು ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (ಎಫ್‌ಡಿಎ) ಮೇ 8ರಂದು ನಿರ್ಬಂಧ ಹೇರಿದೆ. ಭಾರತದ ವಸ್ತುಗಳಿಗೆ ಸುಂಕ ವಿಧಿಸುತ್ತಿರುವ ಅಮೆರಿಕ ಬೇರೆ ಬೇರೆ ನೆಪಗಳನ್ನು ಒಡ್ಡುತ್ತಾ ಭಾರತದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಸಂಘದ ಅಧ್ಯಕ್ಷ ಯು. ಬಸವರಾಜ, ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ದೂರಿದ್ದಾರೆ.
ಅಡಿಕೆ ಹಾಳೆಗಳಿಂದ ತಯಾರಿಸುವ ಊಟದ ಪರಿಕರ ವಹಿವಾಟು ಜಾಗತಿಕವಾಗಿ ₹3,500 ಕೋಟಿ ಇದ್ದು, ಅದರಲ್ಲಿ ಕರ್ನಾಟಕದ ಕೊಡುಗೆಯೇ ₹2,500 ಕೋಟಿಯಾಗಿದೆ. ಅಮೆರಿಕದ ಈ ನಿರ್ಬಂಧವು ಅಡಿಕೆ ಹಾಳೆ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಭಾರತದ ವಸ್ತುಗಳು ಅಮೆರಿಕಕ್ಕೆ ಬಾರದಂತೆ ತಡೆಯೊಡ್ಡುತ್ತಿದೆ. ಮಾವು ಬೆಳೆಯನ್ನು ಇಂತಹದ್ದೇ ನೆಪ ಒಡ್ಡಿ ತಿರಸ್ಕರಿಸಿತ್ತು. ರೈತರಿಗೆ ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಂದರ್ಭವನ್ನು ಕೂಡ ದುರುಪಯೋಗ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಈ ಕ್ರಮಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಂಡಿಸುತ್ತಿಲ್ಲ. ರೈತರ ಹಿತ ಕಾಪಾಡುವ ಕೆಲಸ ಮಾಡುತ್ತಿಲ್ಲ. ಟ್ರಂಪ್‌ನ ಅಡಿಯಾಳಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.