ADVERTISEMENT

ಅಡುಗೆ, ಕುಡಿಯಲು ನೀರು ಬಳಸಿ: ಜಲಮಂಡಳಿ ಮನವಿ

ಬೆಂಗಳೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 22:32 IST
Last Updated 5 ಸೆಪ್ಟೆಂಬರ್ 2022, 22:32 IST
ಮಳವಳ್ಳಿ ತಾಲ್ಲೂಕಿನ ಟಿ.ಕೆ. ಹಳ್ಳಿ ಪಂಪ್‌ ಹೌಸ್‌ ಜಲಾವೃತಗೊಂಡಿರುವುದು.
ಮಳವಳ್ಳಿ ತಾಲ್ಲೂಕಿನ ಟಿ.ಕೆ. ಹಳ್ಳಿ ಪಂಪ್‌ ಹೌಸ್‌ ಜಲಾವೃತಗೊಂಡಿರುವುದು.   

ಬೆಂಗಳೂರು: ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಲಭ್ಯ ಇರುವ ನೀರನ್ನು ಅಡುಗೆ ಮತ್ತು ಕುಡಿಯಲು ಮಾತ್ರ ಬಳಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕೋರಿದೆ.

ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ (ಟಿ.ಕೆ. ಹಳ್ಳಿ) ಪಂಪ್‌ ಹೌಸ್‌ ಬಳಿಯ ಭೀಮೇಶ್ವರ ನದಿ ಹಾಗೂ ಕೆರೆ ತುಂಬಿ ಜಲಮಂಡಳಿಯ ಎರಡು ಪಂಪ್ ಹೌಸ್‌ಗೆ ನುಗ್ಗಿ ಅ‍‍ಪಾರ ಹಾನಿಯಾಗಿದೆ.

ಇದರಿಂದ, ಕಾವೇರಿ ನೀರು ಸರಬರಾಜು ಯೋಜನೆಯ ಮೂರನೇ ಹಂತ ಹಾಗೂ ನಾಲ್ಕನೇ ಹಂತದ ಎರಡನೇ ಘಟ್ಟದಿಂದ ನೀರು ಸರಬ ರಾಜು ಮಾಡುವ ಯಂತ್ರಾಗಾರವು ನೀರಿನಲ್ಲಿ ಮುಳುಗಡೆಯಾಗಿವೆ. ಈ ಯಂತ್ರಗಳನ್ನು ದುರಸ್ತಿಗೊಳಿಸಲು ಸಾಕಷ್ಟು ಕಾಲಾವಕಾಶ ಬೇಕಾಗಿದೆ. ಹೀಗಾಗಿ, ಬೆಂಗಳೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ADVERTISEMENT

ಸಾರ್ವಜನಿಕರು ಪ್ರಸ್ತುತ ತಮ್ಮ ಮನೆಗಳಲ್ಲಿ ಲಭ್ಯವಿರುವ ನೀರನ್ನು ದಿನನಿತ್ಯ ಬಳಕೆಗಳಾದ ಅಡುಗೆ ಹಾಗೂ ಕುಡಿಯಲು ಮಾತ್ರ ಬಳಸಿ ಕೊಳ್ಳ ಬೇಕು. ಇನ್ನಿತರ ಅವಶ್ಯಕತೆ ಗಳಿಗೆ ಅನುಕೂಲವಾಗುವ ಇತರೆ ಮೂಲ ಗಳಿಂದ ವ್ಯವಸ್ಥೆ ಮಾಡಿ ಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ನೀರಿನ ಅವಶ್ಯಕತೆಯನ್ನು ಪೂರೈಸಲು ಮಂಡಳಿಯು ಸಾರ್ವಜನಿಕರಿಗೆ ಸಮೀಪದ ಸೇವಾ ಠಾಣೆಗಳಿಂದ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲು ಸರ್ವಸನ್ನದ್ಧವಾಗಿದೆ ಎಂದು ತಿಳಿಸಿದೆ.

ಟಿ.ಕೆ. ಹಳ್ಳಿಯಲ್ಲಿ ಐದು ಘಟಕ ಗಳಿವೆ. ಇದರಲ್ಲಿನ ಎರಡು ಪಂಪ್‌ಹೌಸ್‌ಗಳಿಗೆ ನೀರು ನುಗ್ಗಿದ್ದು,ಹಾನಿಯಾಗಿರುವಯಂತ್ರಗಾರದ ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಜಲಮಂಡಳಿ ಕೈಗೊಂಡಿದೆ.‌

‘3 ದಿನಗಳಲ್ಲಿ ಸಮರ್ಪಕ ನೀರು’

ಹಲಗೂರು (ಮಂಡ್ಯ): ‘ಮಳೆಯಿಂದ ಹಾನಿಗೊಳಗಾದ ಪಂಪ್‌ ಸ್ಟೇಷನ್‌ ಸರಿಪಡಿಸಿ ಮೂರು ದಿನಗಳಲ್ಲಿ ಬೆಂಗಳೂರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿ ಚಿಕ್ಕ ತೊರೆ (ಭೀಮಾ ನದಿ) ಉಕ್ಕಿ ಹರಿದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪಂಪ್‌ ಸ್ಟೇಷನ್‌ ಜಲಾವೃತವಾದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

‘ರಾಜ್ಯದಲ್ಲಿ ಕೆರೆಗಳು ತುಂಬಿದ್ದು, ಮಳೆ ನೀರು ಸೇರಿ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ. ನದಿ ಪಾತ್ರದಲ್ಲಿ ಹೆಚ್ಚು ಮಳೆಯಾಗಿ ಜಲರೇಚಕ ಯಂತ್ರಾಗಾರಗಳಲ್ಲಿ ನೀರು ತುಂಬಿದೆ. ಮಳೆ ಹೀಗೆ ಮುಂದುವರಿದರೆ ನದಿಯ ಹರಿವನ್ನು ಬೇರೆಡೆ ತಿರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿ ತಡೆಗಟ್ಟಲು ಕಾಂಕ್ರೀಟ್ ತಡೆ ಗೋಡೆ ನಿರ್ಮಾಣ ಮಾಡಲಾಗುವುದು’ ಎಂದರು.

‘ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಮ್ ನೇತೃತ್ವದಲ್ಲಿ ಯಂತ್ರಾಗಾರಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೂ ನೀರನ್ನು ಹೊರ ಹಾಕಲಾಗುತ್ತಿದೆ. ಪಂಪ್ ಮತ್ತು ಮೋಟಾರುಗಳನ್ನು ಸರಿಪಡಿಸಿ ನೀರು ಸರಬರಾಜಿಗೆ ಕ್ರಮ ವಹಿಸಲಾಗುವುದು. ಬೆಂಗಳೂರು ನಿವಾಸಿಗಳು ಅತಂಕ ಪಡಬೇಕಾದ ಅವಶ್ಯಕತೆ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.