ಬೆಂಗಳೂರು: ‘ಸಮಾಜದಲ್ಲಿರುವ ಎಲ್ಲ ವರ್ಗದವರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗುವಂತಾಗಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ನಗರದ ಕುಶಾಲನಗರ ವಾರ್ಡ್‌ನ ಬಿಡಿಎ ಲೇಔಟ್‌ನಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಮತ್ತು ಮೆಡಿ ಹೆಲ್ತ್ ಕ್ಲಿನಿಕ್ ಅನ್ನು ಸ್ಥಳೀಯ ಶಾಸಕ ಎ.ಸಿ.ಶ್ರೀನಿವಾಸ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಬಡವ, ಶ್ರೀಮಂತ, ಜಾತಿ, ಧರ್ಮ ಮೀರಿ ಎಲ್ಲರಿಗೂ ಆರೋಗ್ಯ, ಶಿಕ್ಷಣದ ಸೌಲಭ್ಯ ದೊರೆಯಬೇಕು’ ಎಂದರು.
ಶಾಸಕ ಎ.ಸಿ.ಶ್ರೀನಿವಾಸ್ ಮಾತನಾಡಿ, ‘ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಅನೇಕರು, ವಿಜ್ಞಾನಿ, ವೈದ್ಯ, ಎಂಜಿನಿಯರ್, ಸಾಹಿತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ದೇಶಕ್ಕೆ ಕೊಡುಗೆ ನೀಡಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಂಡ ಅನೇಕ ಮಹನೀಯರು ಓದಿದ್ದು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ’ ಎಂದು ತಿಳಿಸಿದರು.
‘ಯಾವ ರಾಷ್ಟ್ರ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುತ್ತದಯೋ ಅಲ್ಲಿ ಸುಸ್ಥಿರ ಅಭಿವೃದ್ಧಿ ಇರುತ್ತದೆ. ಆಸ್ತಿ, ಹಣ ಗಳಿಕೆ ಮುಖ್ಯವಲ್ಲ, ಸಮಾಜಮುಖಿ ಹಾಗೂ ನಾಯಕತ್ವ ಗುಣವುಳ್ಳ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.