ADVERTISEMENT

ವರಮಹಾಲಕ್ಷ್ಮಿ ಹಬ್ಬ-ಏರಿದ ದರ: ಮಾರುಕಟ್ಟೆಗಳಲ್ಲಿ ಕಳೆಗಟ್ಟಿದ ಖರೀದಿ

ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಗ್ರಾಹಕರ ದಂಡು‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:04 IST
Last Updated 19 ಆಗಸ್ಟ್ 2021, 3:04 IST
ಮಹಿಳೆಯೊಬ್ಬರು ಕೆ.ಆರ್‌.ಮಾರುಕಟ್ಟೆಯಲ್ಲಿ ಬುಧವಾರ ಹೂವು ಖರೀದಿಸಿದರು – ಪ್ರಜಾವಾಣಿ ಚಿತ್ರ/ಅನುಪ್ ರಾಘ.ಟಿ.
ಮಹಿಳೆಯೊಬ್ಬರು ಕೆ.ಆರ್‌.ಮಾರುಕಟ್ಟೆಯಲ್ಲಿ ಬುಧವಾರ ಹೂವು ಖರೀದಿಸಿದರು – ಪ್ರಜಾವಾಣಿ ಚಿತ್ರ/ಅನುಪ್ ರಾಘ.ಟಿ.   

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹೂವು ಮತ್ತು ಹಣ್ಣಿನ ದರಗಳು ಗಗನಕ್ಕೇರಿವೆ. ಹಬ್ಬಕ್ಕೂ ಎರಡು ದಿನ ಮುನ್ನವೇ ಗ್ರಾಹಕರುಮಾರುಕಟ್ಟೆಗಳಲ್ಲಿ ಖರೀದಿಗೆ ಮುಗಿಬಿದ್ದರು.

ಪ್ರತಿವರ್ಷ ಹಬ್ಬಕ್ಕೂ ಹಿಂದಿನ ಐದು ದಿನಗಳಿಂದಲೇ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಗರಿಗೆದರುತ್ತಿತ್ತು. ನಗರದ ವಿವಿಧ ಸ್ಥಳಗಳಲ್ಲಿ ಕಿರು ಮಾರುಕಟ್ಟೆಗಳು ತಲೆ ಎತ್ತುತ್ತಿದ್ದವು.

ಕೆ.ಆರ್.ಮಾರುಕಟ್ಟೆಯಲ್ಲಿ ನಡೆದಾಡಲು ಕಷ್ಟವೆಂಬಂತೆ ಗ್ರಾಹಕರು ಬುಧವಾರ ಸಂಜೆ ಜಮಾಯಿಸಿದ್ದರು. ಈ ಬಾರಿ ವರಮಹಾಲಕ್ಷ್ಮಿ ವ್ರತ ಹಾಗೂ ಓಣಂ ಹಬ್ಬಗಳು ಸರತಿಯಾಗಿ ಬಂದಿವೆ. ಹಾಗಾಗಿ, ಹಬ್ಬದ ಖರೀದಿಗೆ ಬಂದಿದ್ದ ಗ್ರಾಹಕರ ಪ್ರಮಾಣ ಹೆಚ್ಚಾಗಿತ್ತು.

ADVERTISEMENT

ಕೋವಿಡ್‌ ಕಾರಣದಿಂದ ಮಾರುಕಟ್ಟೆಯ ಅಕ್ಕಪಕ್ಕದ ರಸ್ತೆಗಳಲ್ಲಿ ವ್ಯಾಪಾರ ನಡೆಸಲು ಈ ಬಾರಿ ಅವಕಾಶ ನೀಡಿರಲಿಲ್ಲ. ಬಿಬಿಎಂಪಿ ಮಾರ್ಷಲ್‌ಗಳು ಗಸ್ತು ತಿರುಗುತ್ತಾ ಅಂತರ ಕಾಯ್ದುಕೊಳ್ಳದವರಿಗೆ ಹಾಗೂ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುತ್ತಿದ್ದರು.

ವರಮಹಾಲಕ್ಷ್ಮಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂಗಳು ಮತ್ತು ಹಣ್ಣನ್ನು ಬಳಸುತ್ತಾರೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಹೂವು ಮತ್ತು ಹಣ್ಣಿನ ದರಗಳು ಏರಿವೆ.

‘ಹಬ್ಬಕ್ಕೆ ಎರಡು ದಿನ ಇರುವಾಗಲೇ ಮಾರುಕಟ್ಟೆ ಗ್ರಾಹಕರಿಂದ ತುಂಬಿರುತ್ತಿತ್ತು. ಈ ಹಬ್ಬದಲ್ಲೇ ಹೂವಿನ ಬೆಳೆಗಾರರು ಮತ್ತು ವರ್ತಕರು ಕೊಂಚ ಲಾಭ ಕಾಣುತ್ತಾರೆ. ಈ ವರ್ಷವೂಹೂವಿನ ದರಗಳು ದುಬಾರಿಯಾಗಿವೆ. ಹಬ್ಬದ ವೇಳೆ ಇರುತ್ತಿದ್ದ ಗ್ರಾಹಕರ ದಂಡು ಬುಧವಾರ ಕಂಡೆವು’ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ಗೋಪಿ.

‘ಐದು ದಿನಗಳಿಂದ ಹೂವಿನ ದರಗಳು ಏರಿಕೆ ಕಂಡಿವೆ.ಕೋವಿಡ್‌ ಕಾರಣದಿಂದ ಮಾರುಕಟ್ಟೆಗೆ ಬರುತ್ತಿರುವ ಗ್ರಾಹಕರ ಸಂಖ್ಯೆ ಕ್ರಮೇಣ ಏರುತ್ತಿದೆ. ಶುಕ್ರವಾರ ಹಬ್ಬ ಇರುವುದರಿಂದ ಗುರುವಾರದ ವೇಳೆಗೆ ಗ್ರಾಹಕರು ಸಂಖ್ಯೆ ಮತ್ತಷ್ಟು ಏರುವ ನಿರೀಕ್ಷೆ ಇದೆ’ ಎಂದರು.

ಹೂಗಳು ಗಗನಮುಖಿ: ಕಳೆದ ವರ್ಷದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಲ್ಲಿಗೆ ದರ ಗರಿಷ್ಠ ₹400ರವರೆಗೆ ಮಾರಾಟವಾಗಿತ್ತು. ಈ ಬಾರಿ ಮಲ್ಲಿಗೆ ಹಾಗೂ ಕನಕಾಂಬರ ದರಗಳು ಪ್ರತಿ ಕೆ.ಜಿ.ಗೆ ₹800ರಿಂದ ₹1,200ರವರೆಗೆ ಮಾರಾಟ ಆಗುತ್ತಿವೆ. ಸೇವಂತಿಗೆ,ಗುಲಾಬಿ,ಸುಗಂಧರಾಜ ದರಗಳು ₹250ರ ಆಸುಪಾಸಿನಲ್ಲಿವೆ.

ಹಬ್ಬದಲ್ಲಿ ಲಕ್ಷ್ಮಿ ಪೂಜೆಯ ವೇಳೆ ಬಗೆಬಗೆಯ ಹಣ್ಣುಗಳನ್ನು ಜೋಡಿಸುವುದರಿಂದ ಹಣ್ಣಿನ ದರಗಳೆಲ್ಲ ಸ್ವಲ್ಪ ಏರಿವೆ. ತರಕಾರಿಗಳ ಪೈಕಿ ಕೆಲವು ದರಗಳು ಮಾತ್ರ ಏರಿಳಿತ ಕಂಡಿವೆ. ಉಳಿದ ತರಕಾರಿ ದರಗಳೆಲ್ಲ ಸ್ಥಿರವಾಗಿವೆ. ಸೊಪ್ಪಿನ ದರಗಳೂ ಇಳಿಕೆ ಕಂಡಿದ್ದು, ಮೆಂತ್ಯೆ ಸೊಪ್ಪಿನ ದರ ತುಸು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.