ADVERTISEMENT

ವರ್ತೂರು ಮೇಲ್ಸೇತುವೆಗೆ ಭಾರಿ ವಿರೋಧ; 10 ಸಾವಿರ ಜನರ ಸಹಿ ಸಂಗ್ರಹ

10 ಸಾವಿರ ಜನರ ಸಹಿ ಸಂಗ್ರಹ: ಮೇಲ್ಸೇತುವೆ ನಿರ್ಮಿಸದಂತೆ ಒತ್ತಾಯ

ವಿಜಯಕುಮಾರ್ ಎಸ್.ಕೆ.
Published 16 ಮೇ 2022, 19:49 IST
Last Updated 16 ಮೇ 2022, 19:49 IST
ವರ್ತೂರು ಮುಖ್ಯ ರಸ್ತೆ
ವರ್ತೂರು ಮುಖ್ಯ ರಸ್ತೆ   

ಬೆಂಗಳೂರು: ನಗರದ ಹೊರವಲಯದ ವರ್ತೂರಿನಲ್ಲಿ 1.9 ಕಿಲೋ ಮೀಟರ್ ಉದ್ದದ ಮೇಲ್ಸೇತುವೆಯನ್ನು₹482 ಕೋಟಿ ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ಹೊರ ವಲಯದಲ್ಲಿದ್ದ ವರ್ತೂರು ಐ.ಟಿ ಕಂಪನಿಗಳು ಬೆಂಗಳೂರಿಗೆ ಲಗ್ಗೆ ಇಟ್ಟ ಬಳಿಕ ನಗರದ ಭಾಗವಾಗಿ ಮಾರ್ಪಟ್ಟಿದೆ. 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 26 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಊರಿನ ಸುತ್ತಮುತ್ತ ಬಡಾವಣೆಗಳು ತಲೆ ಎತ್ತಿ ನಿಂತಿದ್ದು, ದಿನದಿಂದ ದಿನಕ್ಕೆ ಜನ ವಸತಿ ಹೆಚ್ಚುತ್ತಲೇ ಇದೆ.

ಈ ಊರಿನಲ್ಲಿ 40 ಅಡಿ ಅಗಲದ ಮುಖ್ಯ ರಸ್ತೆ ಇದ್ದು, ವಿಸ್ತರಣೆಯಾಗಬೇಕು ಎಂಬ ಕೂಗು
40 ವರ್ಷಗಳಿಂದ ಕೇಳುತ್ತಲೇ ಇದೆ. ಪರ–ವಿರೋಧದ ನಡುವೆ ನಾಲ್ಕ ದಶಕಗಳನ್ನು ಸವೆಸಿದರೂ ರಸ್ತೆ ವಿಸ್ತರಣೆ ಆಗಲೇ ಇಲ್ಲ. ಈಗ ಸ್ಥಳೀಯ ಜನ ಪ್ರತಿನಿಧಿಗಳ ಪ್ರಯತ್ನದಿಂದ ರಸ್ತೆ ವಿಸ್ತರಣೆಗೆ ಅಗತ್ಯ ಜಾಗ ಬಿಟ್ಟುಕೊಡಲು ಸ್ಥಳೀಯರು ಒಪ್ಪಿದ್ದರು.

ADVERTISEMENT

ಮೆಟ್ರೊ ರೈಲು ಮಾರ್ಗದಲ್ಲಿ ಭೂಸ್ವಾಧೀನಕ್ಕೆ ನೀಡುವ ಪರಿಹಾರದ ಮಾದರಿಯಲ್ಲೆ ಹೆಚ್ಚಿನ ದರ ನೀಡಿದರೆ ಜಾಗ ಬಿಟ್ಟುಕೊಡಲು ಸ್ಥಳೀಯರು ಮನಸ್ಸು ಮಾಡಿದ್ದರು. ಈ ನಡುವೆ ಈಗ ಸರ್ಕಾರ, ಏಕಾಏಕಿ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದೆ.
ಸಚಿವ ಸಂಪುಟದ ಮುಂದೆಯೇ ಪ್ರಸ್ತಾವನೆ ತಂದು ಒಪ್ಪಿಗೆ ಪಡೆದುಕೊಂಡಿದೆ.

ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ‘ಸಾರ್ವಜನಿಕರ ಅಭಿಪ್ರಾಯವನ್ನೇ ಕೇಳದೆ ಈ ರೀತಿಯ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು‘ ಎಂದು ಹೋರಾಟ ಆರಂಭಿಸಿದ್ದಾರೆ.

‘ರಥೋತ್ಸವಕ್ಕೆ ಅಡಿಯಾಗುವ ಸೇತುವೆ’

ಮೇಲ್ಸೇತುವೆ ನಿರ್ಮಾಣವಾದರೆ ಗ್ರಾಮಸ್ಥರು ಮತ್ತು ಸುತ್ತಮುತ್ತಲ ಬಡಾವಣೆಗಳ ಜನ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ನಿವಾಸಿಗಳು ಪಟ್ಟಿ ಮಾಡಿದ್ದಾರೆ.

ವ್ಯಾಪಾರ ವಹಿವಾಟಿಗೆ ತೊಂದರೆ ಆಗುವ ಆತಂಕ ಸ್ಥಳೀಯರಲ್ಲಿದ್ದು, ಮುಖ್ಯವಾಗಿ ಊರ ಜಾತ್ರೆಗೆ ಆಗಲಿರುವ ಅಡಚಣೆ ಗ್ರಾಮಸ್ಥರನ್ನು ಘಾಸಿಗೊಳಿಸಿದೆ.

‘ವರ್ತೂರಿನ ಚನ್ನರಾಯಸ್ವಾಮಿ ಜಾತ್ರೆಗೆ ಇತಿಹಾಸ ಇದೆ. ಮೇಲ್ಸೇತುವೆ ನಿರ್ಮಾಣವಾದರೆ ರಥೋತ್ಸವ ಮತ್ತು ಕರಗವನ್ನೇ ನಿಲ್ಲಿಸಬೇಕಾಗುತ್ತದೆ. ಊರಿನ ಜಾತ್ರೆಯನ್ನೇ ನಿಲ್ಲಿಸುವ ಮೇಲ್ಸೇತುವೆ ನಮಗೆ ಅಗತ್ಯ ಇಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಭಗ್ನವಾಗುವ ಮೆಟ್ರೊ ರೈಲು ಕನಸು

‘ವರ್ತೂರು ರಸ್ತೆಯಲ್ಲಿ ದಿನಕ್ಕೆ 80 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. 60 ಅಡಿ ಅಗಲದ ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ಸಮಸ್ಯೆ ಸರಿಯಾಗುವುದಿಲ್ಲ’ ಎನ್ನುತ್ತಾರೆ ವರ್ತೂರು ನಾಗರಿಕರ ಹಿತ ರಕ್ಷಣಾ ವೇದಿಕೆಯ ಜಗದೀಶ್ ರೆಡ್ಡಿ.

‘ಮೆಟ್ರೊ ರೈಲು ಮಾರ್ಗದ ಕನಸನ್ನು ಈ ಭಾಗದ ಜನ ಕಾಣುತ್ತಿದ್ದಾರೆ. ಮೇಲ್ಸೇತುವೆ ನಿರ್ಮಾಣವಾದರೆ ಆ ಕನಸೇ ಭಗ್ನವಾಗಲಿದೆ. ಆದ್ದರಿಂದ ಮೇಲ್ಸೇತುವೆ ಬೇಡವೇ ಬೇಡ’ ಎಂದು ಹೇಳಿದರು.

‘ಸುತ್ತಮುತ್ತಲ ಪ್ರದೇಶಕ್ಕೆ ಈಗಿರುವ ನೆಲ ಮತ್ತು ಕಟ್ಟಡ ವಿಸ್ತೀರ್ಣದ ಅನುಪಾತ (ಎಫ್‌ಎಆರ್‌) ಕಡಿಮೆಯಾಗಲಿದ್ದು, ಸಾಲ ಸೌಲಭ್ಯ ಸಿಗದಂತೆ ಆಗಲಿದೆ. ಈ ಒಂದೇ ಒಂದು ಮೇಲ್ಸೇತುವೆ ವರ್ತೂರು ಮತ್ತು ಸುತ್ತಮುತ್ತಲ ಜನರ ಬದಕನ್ನೇ ಕಸಿದುಕೊಳ್ಳಲಿದೆ’ ಎಂದರು.

‘ಗ್ರಾಮಗಳ ಅಭಿವೃದ್ಧಿಗೆ ಧಕ್ಕೆ’

ವರ್ತೂರು ಮುಖ್ಯ ರಸ್ತೆ ಸಂಪರ್ಕಿಸುವ ಸೋರಹುಣಸೆ, ಮಧುರಾನಗರ, ವಾಲೇಪುರ, ಮುತ್ಸಂದ್ರ, ಹಾರೋಹಳ್ಳಿ, ಬಳಗೆರೆ, ಹಲಸಹಳ್ಳಿ, ತಿಪ್ಪಸಂದ್ರ ಗ್ರಾಮಗಳ ಅಭಿವೃದ್ಧಿಗೆ ಧಕ್ಕೆಯಾಗಲಿದೆ ಎಂದು ವರ್ತೂರಿನ ಮಧುಸೂದನ್ ಹೇಳಿದರು. ತಿಗಳರ ಬೀದಿ, ಬಳಗೆರೆ ರಸ್ತೆ, ಹಲಸಹಳ್ಳಿ ರಸ್ತೆ, ಸೋರಹುಣಸೆ ಮತ್ತು ಮಧುರಾನಗರದಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ ಸಮುಚ್ಚಯ, ಬಡಾವಣೆ ಅಥವಾ ಬಾಡಿಗೆ ಮನೆಗಳಿಗೆ ಬೇಡಿಕೆಯೇ ಇಲ್ಲವಾಗಲಿದೆ ಎಂದರು.

ಸಹಿ ಸಂಗ್ರಹ ಅಭಿಯಾನ

ವರ್ತೂರಿನ ಮುಖ್ಯ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣವಾದರೆ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಯಲ್ಲಿ 50 ವರ್ಷ ಹಿಂದಕ್ಕೆ ತಳ್ಳಿದಂತೆ ಆಗಲಿದೆ ಎಂದು ಜಗದೀಶ್ ರೆಡ್ಡಿ ಹೇಳಿದರು.

ಈಗಾಗಲೇ ಪೆರಿಫೆರಲ್ ರಿಂಗ್ ರಸ್ತೆಗೆ ಸರ್ಕಾರ ಅನುಮೋದನೆ ನೀಡಿದೆ. ಗಂಜೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮಾರತಹಳ್ಳಿ ರಿಂಗ್ ರಸ್ತೆಯಿಂದ 100 ಅಡಿ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಈ ಎರಡು ರಸ್ತೆಗಳ ಕಾಮಗಾರಿ ಮುಕ್ತಾಯವಾದರೆ ವರ್ತೂರು ರಸ್ತೆ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಿದೆ ಎಂದರು.

‘ಸ್ಥಳೀಯರ ಅಭಿಪ್ರಾಯ ಪರಿಗಣಿಸದೆ ಮೇಲ್ಸೇತುವೆಯನ್ನು ನಮ್ಮ ಮೇಲೆ ಹೇರಲು ಹೊರಟಿರುವ ಸರ್ಕಾರದ ನಿರ್ಧಾರದ ವಿರುದ್ಧ ಊರಿನ 10 ಸಾವಿರ ಜನರಿಂದ ಸಹಿ ಸಂಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಜಗ್ಗದಿದ್ದರೆ ಕಾನೂನಿನ ಹೋರಾಟಕ್ಕೂ ಮುಂದಾಗಲಿದ್ದೇವೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.