ADVERTISEMENT

ಯಲಹಂಕ: ವೇಮನರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 16:10 IST
Last Updated 21 ಜನವರಿ 2025, 16:10 IST
ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು
ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು   

ಯಲಹಂಕ: ‘ಮಹಾಯೋಗಿ ವೇಮನರು ಸಮಾಜಕ್ಕೆ ಬಿಟ್ಟುಹೋದ ತತ್ವಗಳು, ಸಂದೇಶ ಮತ್ತು ವಿಚಾರಧಾರೆಗಳು ಪ್ರಸ್ತುತ ಸಂದರ್ಭದಲ್ಲಿ ಮಾರ್ಗಸೂಚಿಯಾಗಿವೆ’ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಬೆಂಗಳೂರು ಉತ್ತರ ವಲಯ, ರೆಡ್ಡಿ ಜನಸಂಘದ ಆಶ್ರಯದಲ್ಲಿ ಮಹಾಯೋಗಿ ವೇಮನರ 613ನೇ ಜಯಂತ್ಯುತ್ಸವದ ಪ್ರಯುಕ್ತ ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವೇಮನ ಸಹಕಾರಿ ಸಂಘದ ವತಿಯಿಂದ ಪ್ರತಿವರ್ಷ ವೇಮನರ ಜಯಂತಿಯಂದು ರಕ್ತದಾನ ಶಿಬಿರ ಏರ್ಪಡಿಸಿ, ಸಂಗ್ರಹವಾದ ರಕ್ತವನ್ನು ರಕ್ತನಿಧಿ ಸಂಸ್ಥೆಗೆ ನೀಡುವ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ADVERTISEMENT

ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಒಟ್ಟು 448 ಯುನಿಟ್‌ ರಕ್ತ ಸಂಗ್ರಹವಾಯಿತು.

ಚಿತ್ರನಟ ಶೋಭರಾಜ್‌, ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ, ನಿರ್ದೇಶಕರಾದ ಎಸ್‌.ಜಿ.ನರಸಿಂಹಮೂರ್ತಿ, ಎಂ.ಮೋಹನ್‌ಕುಮಾರ್‌, ಸಿ.ಆರ್‌.ಜಯಪ್ಪರೆಡ್ಡಿ, ರಾಜಣ್ಣ, ಶ್ರೀನಿವಾಸ್‌, ಅರುಣ ಪ್ರಕಾಶ್‌, ಸಿಇಒ ನಾಗೇಶ್‌.ಟಿ.ಆರ್‌, ಮುಖಂಡರಾದ ದಿಬ್ಬೂರು ಜಯಣ್ಣ, ಕೆ.ವೀರಣ್ಣ, ಎಸ್‌.ಜಿ.ಪ್ರಶಾಂತರೆಡ್ಡಿ, ಅದ್ದೆ ವಿಶ್ವನಾಥಪುರ ಮಂಜುನಾಥ್‌, ಆವಲಹಳ್ಳಿ ಕೇಶವಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.