ADVERTISEMENT

‘ವೆಟೊಮ್ಯಾಕ್ 2021’ ಸಮ್ಮೇಳನ: ವಿಮಾನ ಸುರಕ್ಷತೆಗಾಗಿ ‘ಐವಿಎಚ್‌ಎಂ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 22:13 IST
Last Updated 16 ಡಿಸೆಂಬರ್ 2021, 22:13 IST
ಕಾರ್ಯಕ್ರಮದಲ್ಲಿ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಬಿಎಚ್‌ಯು) ಆಡಳಿತ ಮಂಡಳಿ ಅಧ್ಯಕ್ಷ ಕೋಟಾ ಹರಿನಾರಾಯಣ ಅವರು ಸಮ್ಮೇಳನದ ಕೈಪಿಡಿ ಬಿಡುಗಡೆ ಮಾಡಿದರು. ಪ್ರಾಚಾರ್ಯ ಡಾ.ಎಸ್. ಮುರಳೀಧರ್, ಟ್ರಸ್ಟಿ ಅವಿರಾಮ್ ಶರ್ಮಾ, ಇಂದಿರಾ ರಾವ್, ಸಮ್ಮೇಳನದ ಅಧ್ಯಕ ಡಾ. ನಳಿನಾಕ್ಷ್ ವ್ಯಾಸ್ ಹಾಗೂ ಡಾ. ಸುರೇಶ ರಾಮಸ್ವಾಮಿ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಬಿಎಚ್‌ಯು) ಆಡಳಿತ ಮಂಡಳಿ ಅಧ್ಯಕ್ಷ ಕೋಟಾ ಹರಿನಾರಾಯಣ ಅವರು ಸಮ್ಮೇಳನದ ಕೈಪಿಡಿ ಬಿಡುಗಡೆ ಮಾಡಿದರು. ಪ್ರಾಚಾರ್ಯ ಡಾ.ಎಸ್. ಮುರಳೀಧರ್, ಟ್ರಸ್ಟಿ ಅವಿರಾಮ್ ಶರ್ಮಾ, ಇಂದಿರಾ ರಾವ್, ಸಮ್ಮೇಳನದ ಅಧ್ಯಕ ಡಾ. ನಳಿನಾಕ್ಷ್ ವ್ಯಾಸ್ ಹಾಗೂ ಡಾ. ಸುರೇಶ ರಾಮಸ್ವಾಮಿ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜು ವೈಬ್ರೇಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ ‘ಕಂಪನ ಎಂಜಿನಿಯರಿಂಗ್ ಮತ್ತು ಯಂತ್ರಗಳ ತಂತ್ರಜ್ಞಾನ’ ಕುರಿತಮೂರು ದಿನಗಳ ‘ವೆಟೊಮ್ಯಾಕ್–2021’ ಸಮ್ಮೇಳನ ಗುರುವಾರ ಆರಂಭವಾಯಿತು.

ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ, ಅವಕಾಶಗಳ ಬಗ್ಗೆ ಪ್ರಾಧ್ಯಾಪಕರು ಹಾಗೂ ವಿಷಯ ತಜ್ಞರು ಚರ್ಚಿಸಿದರು. ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ವಿಶ್ಲೇಷಣೆ ನಡೆಸಿದರು.

‘ವಿಮಾನಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲುವಾಹನಗಳ ಸದೃಢತೆಯ ಸಮಗ್ರ ನಿರ್ವಹಣೆ ವ್ಯವಸ್ಥೆ(ಐವಿಎಚ್‌ಎಂ) ಸಹಕಾರಿ. ಈ ವ್ಯವಸ್ಥೆಯನ್ನು ವಿಮಾನಯಾನ ಸಂಸ್ಥೆಗಳು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅಭಿಪ್ರಾಯಪಟ್ಟರು.

ADVERTISEMENT

‘ಐವಿಎಚ್‌ಎಂ ವ್ಯವಸ್ಥೆಯಿಂದ ವಾಹನಗಳ ಚಲನೆಯನ್ನು ನೈಜ ಸಮಯದಲ್ಲಿ ಗುರುತಿಸಬಹುದು. ಸಾಧನದ ದೋಷ ಪತ್ತೆ ಹಚ್ಚಲು ಹಾಗೂ ಅದರ ಕಾರ್ಯಕ್ಷಮತೆ ನಿರ್ಣಯಿಸಲು ಇದು ಸಹಕಾರಿ. ಸರಪಳಿ ಆಧಾರಿತ ಈ ವ್ಯವಸ್ಥೆಯಲ್ಲಿ ದತ್ತಾಂಶ ನಿರ್ವಹಣಾ ಕೇಂದ್ರಗಳಿಗೆ ಮಾಹಿತಿ ರವಾನೆಯಾಗುತ್ತಾ ಇರುತ್ತದೆ. ಸೆನ್ಸಾರ್ ಆಧಾರಿತ ಈ ವ್ಯವಸ್ಥೆಯು ಬಹುಪಯೋಗಿ’ ಎಂದು ಹೇಳಿದರು.

ಬಿಎಂಎಸ್ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ಅವಿರಾಮ್ ಶರ್ಮಾ, ‘ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಸಾಗುತ್ತಿದೆ. ಅಲ್ಲಿನ ಬದಲಾವಣೆಗಳನ್ನು ಗಮನಿಸುವ ಜೊತೆಗೆ ಅದರ ವೇಗಕ್ಕೆ ಹೊಂದಿಕೊಳ್ಳಬೇಕು’ ಎಂದು ತಿಳಿಸಿದರು.

ಕಾಲೇಜಿನ ಉಪಪ್ರಾಂಶುಪಾಲ ಡಾ. ಸುರೇಶ್ ರಾಮಸ್ವಾಮಿ ರೆಡ್ಡಿ, ‘ನಮ್ಮ ಕಾಲೇಜು 13 ಪದವಿಪೂರ್ವ ಹಾಗೂ 16 ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿದೆ. ಸಂಶೋಧನೆಗಳಿಗೂ ಆದ್ಯತೆ ನೀಡುತ್ತಿದೆ.‍ಪಠ್ಯದ ಜೊತೆಗೆ ಪಠ್ಯೇತರ ಕಾರ್ಯಕ್ರಮಗಳಿಗೂ ಮಹತ್ವ ಕೊಡಲಾಗುತ್ತಿದೆ. ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಅಲ್ಲಿಯೂ ಆವಿಷ್ಕಾರಗಳಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.