ADVERTISEMENT

ವಿಕ್ಟೋರಿಯಾ ಆಸ್ಪತ್ರೆ ನಕಲಿ ವಿಡಿಯೊ ಹರಿಬಿಟ್ಟಿದ್ದ ಆರೋಪಿ ಬಂಧನ

ಸಿಸಿಬಿಯಿಂದ ಸ್ವಯಂಪ್ರೇರಿತ ದೂರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 20:00 IST
Last Updated 19 ಜುಲೈ 2020, 20:00 IST
ಸಮೀರ್‌ವುಲ್ಲಾ
ಸಮೀರ್‌ವುಲ್ಲಾ   

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಹೇಳಿ ಬೇರೆ ಕಡೆ ನಡೆದ ಘಟನೆಯ ವಿಡಿಯೊ ಹರಿಯಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಲು ಯತ್ನಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ತಿಲಕ್‌ನಗರದ ನಿವಾಸಿ ಸಮೀರ್‌ವುಲ್ಲಾ (46) ಬಂಧಿತ. ಬೇರೆ ರಾಜ್ಯದ ಆಸ್ಪತ್ರೆಯೊಂದರ ವಿಡಿಯೊ ಬಳಸಿದ್ದ ಆರೋಪಿ ಅದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಘಟನೆ ಎಂದು ಬಿಂಬಿಸಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ. ಅದು ವೈರಲ್‌ ಆಗಿತ್ತು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವೈದ್ಯರ ಕೊಠಡಿ ಎದುರು ಜನರು ಗುಂಪು ಸೇರಿದ್ದರು. ಪರಸ್ಪರ ಅಂತರವಂತೂ ಇರಲೇ ಇಲ್ಲ. ಎಲ್ಲರೂ ತಾಗಿಕೊಂಡೇ ನಿಂತಿದ್ದರು. ಹಲವರು ಮಾಸ್ಕ್‌ ಧರಿಸಿದ್ದರು. ಕೆಲವರು ಧರಿಸಿರಲಿಲ್ಲ. ಇದೇ ದೃಶ್ಯ ವಿಡಿಯೊದಲ್ಲಿತ್ತು. ಅದರ ಮೇಲೆಯೇ ‘ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು’ ಎಂದು ಬರೆಯಲಾಗಿತ್ತು. ಹಿನ್ನೆಲೆ ಧ್ವನಿಯೂ ಇತ್ತು’

ADVERTISEMENT

‘ವಿಡಿಯೊ ಪರಿ ಶೀಲನೆ ನಡೆಸಿದಾಗ ಇದು ವಿಕ್ಟೋರಿ ಯಾ ಆಸ್ಪತ್ರೆಯದ್ದು ಅಲ್ಲವೆಂಬುದು ತಿಳಿಯಿತು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಭಾನುವಾರ ಮಧ್ಯಾಹ್ನವೇ ಆರೋಪಿ ಸಮೀರ್‌ವುಲ್ಲಾ ಸಿಕ್ಕಿಬಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಆರೋಪಿ, ಕಾಂಗ್ರೆಸ್ ಮುಖಂಡರ ಜೊತೆಯಲ್ಲೂ ಒಡನಾಟವಿಟ್ಟುಕೊಂಡಿದ್ದ. ನಕಲಿ ವಿಡಿಯೊ ಹರಿಬಿಟ್ಟಿದ್ದರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆರೋಪಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬಂದ ನಂತರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.