ADVERTISEMENT

ಮುಂಬೈ ಯುವತಿಗೆ ‘ವಿಡಿಯೊ’ ಬ್ಲ್ಯಾಕ್‌ಮೇಲ್

ಖಾಸಗಿ ಕಂಪನಿ ಉದ್ಯೋಗಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:08 IST
Last Updated 21 ಮಾರ್ಚ್ 2019, 20:08 IST

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಮುಂಬೈ ಯುವತಿ ಜತೆ ದೈಹಿಕ ಸಂಪರ್ಕ ನಡೆಸಿದ್ದಲ್ಲದೆ, ಹಣ ಕೊಡದಿದ್ದರೆ ಲೈಂಗಿಕ ಕ್ರಿಯೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸಂತ್ರಸ್ತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ಆಯೋಗದ ಸೂಚನೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈನ ವರ್ಸೋವಾ ಠಾಣೆ ಪೊಲೀಸರು, ಕೃತ್ಯ ನಡೆದ ಸ್ಥಳದ ಆಧಾರದ
ಮೇಲೆ ಬುಧವಾರ ಪ್ರಕರಣವನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆಗೆ ವರ್ಗಾಯಿಸಿದ್ದಾರೆ.

ಫೇಸ್‌ಬುಕ್ ಸ್ನೇಹ: ‘2017ರಲ್ಲಿ ನಾನು ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಫೇಸ್‌ಬುಕ್ ಮೂಲಕ ಅಂಕಿತ್ ಪಿಪ್ಲಾನಿ ಎಂಬಾತನ ಪರಿಚಯವಾಯಿತು. ಆ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು.ಆತ ಎಲೆಕ್ಟ್ರಾನಿಕ್‌ಸಿಟಿಯ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ‘ವ್ಯಾಸಂಗ ಮುಗಿಸಿ ಮುಂಬೈಗೆ ಮರಳಿದ್ದ ನನ್ನನ್ನು, ಮದುವೆ ಆಗುವುದಾಗಿ ನಂಬಿಸಿ ಇತ್ತೀಚೆಗೆ ಬೆಂಗಳೂರಿಗೆ ಕರೆಸಿಕೊಂಡ. ಆತನ ಸೂಚನೆಯಂತೆ ಫ್ಲ್ಯಾಟ್‌ಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ. ಲ್ಯಾಪ್‌ಟಾಪ್ ಖರೀದಿಗೆಂದು ನನ್ನಿಂದ ₹2.35 ಲಕ್ಷವನ್ನೂ ಪಡೆದುಕೊಂಡ. ದಿನ ಕಳೆದಂತೆ ಅಂಕಿತ್ ನನ್ನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ. ಮದುವೆ ಮಾಡಿಕೊಳ್ಳುವುದಕ್ಕೂ ನಿರಾಕರಿಸಿದ.’

ADVERTISEMENT

‘ಹಣ ವಾಪಸ್ ಕೇಳಿದ್ದಕ್ಕೆ ಪ್ರಾಣಬೆದರಿಕೆ ಹಾಕಿದ ಅಂಕಿತ್, ‘ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೊ ಇದೆ. ಕೋಣೆಯಲ್ಲಿ ಕ್ಯಾಮೆರಾ ಇಟ್ಟು ಎಲ್ಲವನ್ನೂ ಚಿತ್ರೀಕರಿಸಿದ್ದೇನೆ. ಇನ್ನಷ್ಟು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತೇನೆ’ ಎಂದು ಬೆದರಿಸುತ್ತಿದ್ದಾನೆ. ಹೀಗಾಗಿ, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಆರೋಪಿ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.