ADVERTISEMENT

ನಿವೃತ್ತ ಶಿಕ್ಷಕಿ ಹತ್ಯೆ: ಎದುರು ಮನೆಯವನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 14:58 IST
Last Updated 17 ಸೆಪ್ಟೆಂಬರ್ 2022, 14:58 IST
ಕೆ. ರಾಮರಾಜು
ಕೆ. ರಾಮರಾಜು   

ಬೆಂಗಳೂರು: ನಿವೃತ್ತ ಶಿಕ್ಷಕಿ ಎಸ್. ಪ್ರಸನ್ನಕುಮಾರಿ (68) ಅವರನ್ನು ಕೊಂದು ಚಿನ್ನಾಭರಣ ದೋಚಿದ್ದ ಪ್ರಕರಣ ಭೇದಿಸಿರುವ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಎದುರು ಮನೆಯ ನಿವಾಸಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

‘ವಿದ್ಯಾರಣ್ಯಪುರದ ಅಂಬಾಭವಾನಿ ಬಡಾವಣೆಯ ಟಿ. ನಾಗೇಂದ್ರ (31) ಹಾಗೂ ಆಂಧ್ರಪ್ರದೇಶ ಅನ್ನಮಯ್ಯ ಜಿಲ್ಲೆಯ ಕೆ. ರಾಮರಾಜು ಅಲಿಯಾಸ್ ವಿಜಯ್ (28) ಬಂಧಿತರು. ಇವರಿಂದ 68 ಗ್ರಾಂ ತೂಕದ ಚಿನ್ನಾಭರಣ, ಎರಡು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

‘ವಿಜಯವಾಡದ ಪ್ರಸನ್ನಕುಮಾರಿ, ಚಿಂತಾಮಣಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ವಿದ್ಯಾರಣ್ಯಪುರದ ಅಂಬಾಭವಾನಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ನಾಗೇಂದ್ರ ಸೇರಿದಂತೆ ಮೂವರು ಆರೋಪಿಗಳು, ಸಂಚು ರೂಪಿಸಿ ಸೆ. 8ರಂದು ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದೂ ಹೇಳಿದರು.

ADVERTISEMENT

ಕೈ–ಕಾಲು ಕಟ್ಟಿ ಹಾಕಿ ಕೊಲೆ: ‘ಪ್ರಸನ್ನಕುಮಾರಿ ಮನೆಗೆ ಹೆಚ್ಚಾಗಿ ಯಾರೂ ಬರುತ್ತಿರಲಿಲ್ಲ. ಇದನ್ನು ಗಮನಿಸಿದ್ದ ಆರೋಪಿ ನಾಗೇಂದ್ರ, ಪ್ರಸನ್ನಕುಮಾರಿ ಕೊಂದು ಚಿನ್ನಾಭರಣ ದೋಚಲು ತೀರ್ಮಾನಿಸಿದ್ದ. ಇದೇ ವಿಷಯವನ್ನು ಇತರೆ ಆರೋಪಿಗಳಿಗೆ ತಿಳಿಸಿದ್ದ. ಎಲ್ಲರೂ ಸೇರಿ ಕೊಲೆ ಮಾಡಲು ಸಜ್ಜಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪ್ರಸನ್ನಕುಮಾರಿ ಮನೆಗೆ ಮಧ್ಯಾಹ್ನ ನುಗ್ಗಿದ್ದ ಮೂವರು ಆರೋಪಿಗಳು, ಕೈ–ಕಾಲು ಕಟ್ಟಿ ಹಾಕಿದ್ದರು. ನಂತರ, ಬಾಯಿ ಹಾಗೂ ಮೂಗನ್ನು ಬಟ್ಟೆಯಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದರು. ಬಳಿಕ, ಪ್ರಸನ್ನಕುಮಾರಿ ಮೈ ಮೇಲಿದ್ದ ಚಿನ್ನಾಭರಣ ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.’

‘ಮೃತದೇಹ ನೋಡಿದ್ದ ನೆರೆಮನೆಯ ನಿವಾಸಿಗಳು ಠಾಣೆಗೆ ಮಾಹಿತಿ ನೀಡಿದ್ದರು. ಮನೆ ಮಾಲೀಕರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯ ನಿವಾಸಿಗಳು ನೀಡಿದ್ದ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಹೇಳಿದರು.

ಆಂಧ್ರದಲ್ಲಿ ಆಭರಣ ಅಡವಿಟ್ಟಿದ್ದ ಆರೋಪಿಗಳು: ‘ನಗರ ತೊರೆದಿದ್ದ ಆರೋಪಿಗಳು, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೋಟಿಗೆ ಹೋಗಿದ್ದರು. ಅಲ್ಲಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಚಿನ್ನಾಭರಣ ಅಡವಿಟ್ಟು, ₹ 1.90 ಲಕ್ಷ ಪಡೆದಿದ್ದರು. ಅದೇ ಹಣವನ್ನು ಮೂವರು ಹಂಚಿಕೊಂಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.