ADVERTISEMENT

ಯು.ಬಿ ಸಿಟಿ ಕಟ್ಟಡದ ಮಳಿಗೆ ಭೋಗ್ಯಕ್ಕೆ ಅನುಮತಿ

ಯುಬಿಎಚ್‍ಎಲ್ ಮಧ್ಯಂತರ ಅರ್ಜಿ ಮಾನ್ಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:44 IST
Last Updated 20 ಡಿಸೆಂಬರ್ 2018, 20:44 IST

ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಸೇರಿದ ಯು.ಬಿ ಸಿಟಿಯಲ್ಲಿರುವ ವಾಣಿಜ್ಯ ಮಳಿಗೆಯ ಕಟ್ಟಡವನ್ನು ಭೋಗ್ಯಕ್ಕೆ ನೀಡಲು ಅಧಿಕೃತ ಬರ್ಖಾಸ್ತುದಾರರಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಈ ಕುರಿತಂತೆ ಯುನೈಟೆಡ್‌ ಬ್ರೆವರೀಸ್‌ ಹೋಲ್ಡಿಂಗ್ ಲಿಮಿಟೆಡ್‌ (ಯುಬಿಎಚ್‍ಎಲ್) ಕಂಪನಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಮಾನ್ಯ ಮಾಡಿದೆ.

ಯುಬಿಎಚ್‌ಎಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್‌ ಪೂವಯ್ಯ, ‘ಕಂಪನಿಯಲ್ಲಿ ₹ 7,500 ಕೋಟಿ ಮೌಲ್ಯದ ಷೇರುಗಳಿವೆ. ಪ್ರವರ್ತಕರ ಷೇರುಗಳೂ ಸೇರಿದಂತೆ ಒಟ್ಟು ಷೇರುಗಳ ಮೌಲ್ಯ ₹ 14,908 ಕೋಟಿ ಮೌಲ್ಯ ಹೊಂದಿವೆ. ಬ್ಯಾಂಕುಗಳಿಗೆ 6,500 ಕೋಟಿ ಸಾಲ ವಾಪಸು ಕೊಡಬೇಕು. ಬಡ್ಡಿ ಸೇರಿ ಬ್ಯಾಂಕುಗಳು ₹ 10 ಸಾವಿರ ಕೋಟಿ ಕೇಳುತ್ತಿವೆ. ಇವುಗಳ ಮೌಲ್ಯ ಕುಸಿತವಾದರೆ ಸಾಲ ತೀರಿಸಲೂ ಹಣ ಇರುವುದಿಲ್ಲ‘ ಎಂದರು.

ADVERTISEMENT

‘ಒಂದು ಕಾಲದಲ್ಲಿ ಎಲ್ಲರೂ ಮಲ್ಯ ಅವರನ್ನು ಹಾಡಿ ಹೊಗಳುತಿದ್ದರು. ಆದರೆ, ಒಂದು ಕಂಪನಿ ನಷ್ಟವಾಗಿದೆ ಎಂದ ಮಾತ್ರಕ್ಕೆ ಅವರನ್ನು ಈಗ ವಂಚಕ ಎಂದು ಟೀಕಿಸುವುದು ಸರಿಯಲ್ಲ. ಮಲ್ಯ ವಿರುದ್ಧದ ತನಿಖೆಗೆ ನಾವು ತಡೆ ಕೋರುತ್ತಿಲ್ಲ. ಯುಬಿಎಚ್‌ಎಲ್ ಕಂಪನಿ ಮುಚ್ಚಬಾರದು, ಮುಚ್ಚಿದರೆ ಅದರ ಷೇರುಗಳ ಮಲ್ಯ ಕುಸಿತವಾಗುತ್ತದೆ. ಪ್ರಕರಣಗಳು ಮುಂದುವರಿಯಲಿ. ಸಾಲ ತೀರಲಿ ಎಂಬುದೇ ನಮ್ಮ ಉದ್ದೇಶ’ ಎಂದರು.

ಬ್ಯಾಂಕ್‌ಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್.ನಾಗಾನಂದ್ ಅವರು, ‘2017ರಲ್ಲಿ ಕಂಪನಿ ಮುಚ್ಚಲು ಕೋರ್ಟ್ ಅನುಮತಿ ನೀಡಿತ್ತು, ಆಗ ಯುಬಿಎಚ್‌ಎಲ್ ಯಾವುದೇ ಅರ್ಜಿ ಸಲ್ಲಿಸಲಿಲ್ಲ. ಈಗ ಸಾಲ ತೀರಿಸುವುದಾಗಿ ಹೇಳುತ್ತಿರುವುದನ್ನು ನಂಬುವುದು ಹೇಗೆ’ ಎಂದು ಪ್ರಶ್ನಿಸಿದರು.

ವಾದ ಅಪೂರ್ಣವಾಗಿದ್ದು ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.