ADVERTISEMENT

ರಸ್ತೆ ನಿಯಮ ಉಲ್ಲಂಘನೆ: ವಿಶ್ವಕ್ಕೇ ನಗರ ಪ್ರಥಮ

ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರವಾಹನ–ಕ್ರಿಮಿನಲ್‌ ಮೊಕದ್ದಮೆ: ಸಲೀಂ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 4:44 IST
Last Updated 17 ಡಿಸೆಂಬರ್ 2022, 4:44 IST
ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಶುಕ್ರವಾರ ಏರ್ಪಡಿಸಿದ್ದ ‘ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರ’ ಕುರಿತ ಚರ್ಚೆಯಲ್ಲಿ ನಗರ ಸಂಚಾರ ಪೊಲೀಸ್‌ ವಿಶೇಷ ಆಯುಕ್ತ ಎಂ.ಎ. ಸಲೀಂ ಮಾತನಾಡಿದರು. ಸೆಂಟರ್‌ನ ಗೌರವ ನಿರ್ದೇಶಕ ವಿ. ರವಿಚಂದರ್‌ ಇದ್ದರು.
ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಶುಕ್ರವಾರ ಏರ್ಪಡಿಸಿದ್ದ ‘ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರ’ ಕುರಿತ ಚರ್ಚೆಯಲ್ಲಿ ನಗರ ಸಂಚಾರ ಪೊಲೀಸ್‌ ವಿಶೇಷ ಆಯುಕ್ತ ಎಂ.ಎ. ಸಲೀಂ ಮಾತನಾಡಿದರು. ಸೆಂಟರ್‌ನ ಗೌರವ ನಿರ್ದೇಶಕ ವಿ. ರವಿಚಂದರ್‌ ಇದ್ದರು.   

ಬೆಂಗಳೂರು: ‘ರಸ್ತೆ ನಿಯಮ ಉಲ್ಲಂಘಿಸುವ ಪ್ರಕರಣಗಳನ್ನು ದಾಖಲಿಸುವಲ್ಲಿ ಬೆಂಗಳೂರು ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ.2022ರ ಜನವರಿಯಿಂದ 96 ಲಕ್ಷ ಪ್ರಕರಣ ದಾಖಲಿಸಿದ್ದು, ₹174 ಕೋಟಿ ದಂಡ ವಸೂಲಿ ಮಾಡಲಾಗಿದೆ’ ಎಂದುನಗರ ಸಂಚಾರ ಪೊಲೀಸ್‌ ವಿಶೇಷ ಆಯುಕ್ತ ಎಂ.ಎ. ಸಲೀಂ ಹೇಳಿದರು.

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಶುಕ್ರವಾರ ಏರ್ಪಡಿಸಿದ್ದ ‘ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರ’ ಕುರಿತ ಚರ್ಚೆಯಲ್ಲಿ ಅವರು ಮಾಹಿತಿ ನೀಡಿದರು.

‘ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ಚಲಾಯಿಸುವ ಸವಾರರ ಮೇಲೆ ಪ್ರಾಣಕ್ಕೆ ಸಂಚಕಾರ ತರುವ ಪ್ರಯತ್ನದ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಲಾಗುತ್ತದೆ’ ಎಂದು ಸಲೀಂ ಹೇಳಿದರು.

ADVERTISEMENT

‘ಕೃತಕ ಬುದ್ಧಿಮತ್ತೆ ವ್ಯವಸ್ಥೆ ಮೂಲಕ ಕಾರಿಡಾರ್ ವ್ಯವಸ್ಥೆಯಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತಿದೆ. 7ರಿಂದ 10 ಸಿಗ್ನಲ್‌ಗಳು ಸಂಯೋಜನೆಯಲ್ಲಿ ಕಾರ್ಯನಿರ್ವಹಿಸಲಿವೆ. ಅತ್ಯಂತ ದಟ್ಟಣೆ ಸಂದರ್ಭದಲ್ಲೂ ಮೂರನೇ ಗ್ರೀನ್‌ ಸಿಗ್ನಲ್‌ನಲ್ಲಾದರೂ ವಾಹನ ಜಂಕ್ಷನ್‌ ದಾಟಬೇಕು ಎಂಬ ಉದ್ದೇಶವಿದೆ’ ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಧಾನಗತಿಯಲ್ಲಿ ಚಲಿಸುವ ವಾಹನಗಳು ಬಲಭಾಗದಲ್ಲೇ ಇರುತ್ತವೆ. ಅದನ್ನು ತಡೆಯುವ ಉದ್ದೇಶದಿಂದ ಬಲಭಾಗದಲ್ಲಿ ಭಾರಿ ವಾಹನಗಳು ಚಲಿಸದಂತೆ ತಡೆಯುವ ಪೋಲ್‌ಗಳನ್ನು ಅಳವಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ನಿತ್ಯದ ಸಂಗ್ರಹಣೆ ಮೇರೆಗೆ ಬಸ್‌ ಚಾಲಕ ಹಾಗೂ ನಿರ್ವಹಕರಿಗೆ ಬಿಎಂಟಿಸಿಯವರು ಭತ್ಯೆ ನೀಡುತ್ತಾರೆ. ಇದರಿಂದ ಅವರು ಎಲ್ಲೆಂದರಲ್ಲಿ ಬಸ್‌ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಈ ಭತ್ಯೆಯನ್ನು ನಿಲ್ಲಿಸಬೇಕು, ನಿಲ್ದಾಣದಲ್ಲಿ ಮಾತ್ರ ಬಸ್‌ ನಿಲ್ಲಿಸಲು ಸೂಚನೆ ನೀಡಿ ಎಂದು ಬಿಎಂಟಿಸಿಗೆ ಮನವಿ ಮಾಡಲಾಗಿದೆ ಎಂದರು.

‘ಪೊಲೀಸರ ಮೇಲೆ ನಾಗರಿಕರಿಗೆ ನಂಬಿಕೆ ಬರುವಂತೆ ಮಾಡುವ ಕೆಲಸ ಮೊದಲಾಗುತ್ತಿದೆ’ ಎಂದು ಹೇಳಿದರು.

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನ ಗೌರವ ನಿರ್ದೇಶಕ ವಿ. ರವಿಚಂದರ್‌ ಅವರು ಚರ್ಚೆಯನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.