ADVERTISEMENT

ಓಟ್‌ ಬ್ಯಾಂಕ್‌ಗಾಗಿ ಧರ್ಮ ರಾಜಕಾರಣ: ಸಾಹಿತಿ ಕೆ.ಷರೀಫಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:36 IST
Last Updated 3 ಡಿಸೆಂಬರ್ 2018, 19:36 IST

ಬೆಂಗಳೂರು: ‘ಆರ್‌ಎಸ್‌ಎಸ್‌ ಮತ್ತು ಸನಾತನ ಸಂಸ್ಥೆಗಳ ಮೂಲಕ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯವನ್ನು ಧರ್ಮ ರಾಜಕಾರಣಕ್ಕೆಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ’ ಎಂದು ಸಾಹಿತಿ ಕೆ.ಷರೀಫಾ ದೂರಿದರು.‌

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ’ ಕುರಿತು ಸಂವಾದದಲ್ಲಿ ಮಾತನಾಡಿದ ಅವರು, ‘ಶಬರಿಮಲೆ ದೇವಸ್ಥಾನಕ್ಕೆ ಮುಟ್ಟಿನ ವಯೋಮಾನದ ಮಹಿಳೆಯರು ಪ್ರವೇಶಿಸಬಾರದೆಂದರೆ, ಹೆತ್ತ ತಾಯಿಗೆ ಅಪಮಾನಿಸಿದಂತೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಈ ವಿಷಯದಲ್ಲಿ ಸನಾತನ ಸಂಸ್ಥೆಯ ಮಹಿಳಾ ಗುಂಪುಗಳು ಮಹಿಳಾಪರ ತೀರ್ಪುಗಳನ್ನು ವಿರೋಧಿಸುತ್ತಿವೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದುಜಾತಿ, ಧರ್ಮ, ಮೌಢ್ಯದ ಹೆಸರಿನಲ್ಲಿ ನಿರ್ಬಂಧ ಹೇರಲು ಪ್ರಚಾರ ನಡೆಸುತ್ತಿವೆ. ರೆಹೆನಾ ಸುಲ್ತಾನಾ (ಹಿಂದೂ ಧರ್ಮಕ್ಕೆ ಮತಾಂತರಗೊಂಡವರು), ತೃಪ್ತಿ ದೇಸಾಯಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮುಂದಾಗದಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ’ ಎಂದರು.

ADVERTISEMENT

‘ಒಂದೆಡೆ, ಶಬರಿಮಲೆಗೆ ಆರ್‌ಎಸ್‌ಎಸ್‌ ವ್ಯಕ್ತಿಗಳು ಪ್ರವೇಶ ಬೇಡ ಎನ್ನುತ್ತಿದ್ದರೆ, ಇನ್ನೊಂದೆಡೆ, ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌, ಸುಪ್ರೀಂಕೋರ್ಟ್‌ನ ಆದೇಶವನ್ನು ಕೇರಳದಲ್ಲಿ ಜಾರಿಗೆ ತರಲು ಸೂಚಿಸಿದ್ದಾರೆ. ಇದು ಬಿಜೆಪಿಯ ದ್ವಂದ್ವ ನೀತಿಯಲ್ಲವೆ’ ಎಂದು ಪ್ರಶ್ನಿಸಿದರು.

‌‘ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರವನ್ನು ಪ್ರಚುರ ಪಡಿಸಲಾಗುತ್ತಿದೆ. ಆ ಮೂಲಕ ಜನರ ಭಾವನೆಯನ್ನು ಬಳಸಿಕೊಂಡು ಧರ್ಮ, ಓಟಿನ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ. ಇವುಗಳನ್ನು ಧಿಕ್ಕರಿಸದಿದ್ದರೆ ಸಮಸಮಾಜಕ್ಕೆ ಉಳಿಗಾಲವಿಲ್ಲ. ಬಲಪಂಥೀಯ ರಾಜಕಾರಣವನ್ನು ದಬ್ಬಲೇಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ, ‘ಹೆಣ್ಣನ್ನು ಮೂಲೆ ಗುಂಪಾಗಿಸುವ, ನಗಣ್ಯ ರೂಪದ ಆಲೋಚನೆಗಳು ಪುರುಷ ಮನಸ್ಥಿತಿಯ ಸಮಾಜದಲ್ಲಿಬಹುವರ್ಷಗಳಿಂದ ನಡೆಯುತ್ತಲೇ ಇವೆ. ಹೆಣ್ಣು ಯಾವತ್ತಿಗೂಗಂಡಸಿನ ಅಗತ್ಯಕ್ಕೆ ತಕ್ಕಂತೆಯೇ ನಡೆದುಕೊಳ್ಳಬೇಕು ಎನ್ನುವ ಚಿಂತನಾ ಮನಸ್ಥಿತಿಯಲ್ಲಿ ಸಿಲುಕಿರುವ ಸಮಾಜಕ್ಕೆ ಏನೆನ್ನಬೇಕು’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.