ADVERTISEMENT

ರಣಹದ್ದಿನ ಮರಿ ಬಾಲ್ಕನಿಯಲ್ಲಿ ಪ್ರತ್ಯಕ್ಷ!

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಮನೆಗೆ ಬಂದ ಅಪರೂಪದ ಅತಿಥಿ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:57 IST
Last Updated 17 ಮೇ 2021, 19:57 IST
ರಣಹದ್ದಿನ ಮರಿ
ರಣಹದ್ದಿನ ಮರಿ   

ಬೆಂಗಳೂರು: ವೈಟ್‌ಫೀಲ್ಡ್‌ನ ದಿವ್ಯಾ ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಅಪರೂಪದ ಅತಿಥಿಯೊಬ್ಬರು ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಬಂದಿದ್ದ ಅತಿಥಿ ಅಂತಿಂಥವರಲ್ಲ. ಜೀವಮಾನದಲ್ಲಿ ಎಂದೂ ಕಂಡಿರದ ಅತಿಥಿ!

ಕೋವಿಡ್‌ ಲಾಕ್‌ಡೌನ್‌ ನಡುವೆಯೂ ಮನೆಗೆ ಅತಿಥಿಗಳು ಬಂದು ಹೋಗುವ ಪರಿಪಾಠ ಮುಂದುವರಿದಿದೆಯೇ ಎಂದು ಹುಬ್ಬೇರಿಸದಿರಿ. ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ರಣಹದ್ದಿನ ಮುದ್ದು ಮರಿ!

ಹಾರಲಾಗದ ಸ್ಥಿತಿಯಲ್ಲಿದ್ದ ಹಕ್ಕಿ ಮರಿಯನ್ನು ಕಂಡು ಮನೆಯವರು ಬಿಬಿಎಂಪಿಯ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಎಂ.ರಾಜೇಶ್‌ ಕುಮಾರ್‌ ಅವರಿಗೆ ಕರೆ ಮಾಡಿದರು.

ADVERTISEMENT

‘ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಬಿಳಿ ರಣಹದ್ದಿನ (ಈಜಿಪ್ಟಿಯನ್‌ ವಲ್ಚರ್‌) ಮರಿ ಎಂದು ಗೊತ್ತಾಯಿತು. ಇನ್ನೂ ಹಾರಲು ಕಲಿಯದ ಈ ಮರಿ ಹೇಗೆ ನಗರದ ಮನೆಯೊಂದರ ಬಾಲ್ಕನಿ ಸೇರಿತು ಎಂದೇ ಅರ್ಥವಾಗುತ್ತಿಲ್ಲ. ರಣಹದ್ದುಗಳು ತುಂಬಾ ಎತ್ತರದ ಬೆಟ್ಟಗಳಲ್ಲಿ ಕಡಿದಾದ ಪ್ರದೇಶದಲ್ಲಿ ಗೂಡು ಕಟ್ಟುತ್ತವೆ. ನಗರದ ಮಧ್ಯಭಾಗದ ವಸತಿ ಪ್ರದೇಶದಲ್ಲಿ ಇದು ಕಾಣಿಸಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ವಿಷಯ’ ಎನ್ನುತ್ತಾರೆ ರಾಜೇಶ್‌ ಕುಮಾರ್‌.

‘ರಣಹದ್ದು ಜಾತಿಯ ಪಕ್ಷಗಳಲ್ಲಿ ಮರಿಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಟ ಎಳವೆಯಲ್ಲೇ ಶುರುವಾಗುತ್ತದೆ. ಒಂದು ಮರಿಯನ್ನು ಇನ್ನೊಂದು ಮರಿ ಗೂಡಿನಿಂದ ತಳ್ಳುವುದೂ ಉಂಟು. ಹಾರಲು ಕಲಿಯುವ ತವಕದಲ್ಲಿ ಈ ರಣಹದ್ದಿನ ಮರಿ ಗೂಡಿನಿಂದ ಹೊರ ಬಿದ್ದಿರಲಿಕ್ಕೂ ಸಾಕು’ ಎಂದರು.

‘ಈ ಮರಿಯನ್ನು ಕೆಂಗೇರಿಯ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದೇವೆ. ಇದಕ್ಕಿನ್ನೂ ರೆಕ್ಕೆಗಳು ಸರಿಯಾಗಿ ಬಲಿತಿಲ್ಲ. ಇದಿನ್ನೂ ಸರಿಯಾಗಿ ಹಾರಲು ಕಲಿತಿಲ್ಲ. ಹಾಗಾಗಿ ಇದಕ್ಕೆ ಒಂದು ತಿಂಗಳು ಆರೈಕೆ ಮಾಡಿದ ಬಳಿಕ ರೆಕ್ಕೆ ಚೆನ್ನಾಗಿ ಬಲಿತರೆ ಬಳಿಕ ಹೊರಗೆ ಬಿಡಬಹುದು’ ಎಂದರು.

‘ರಣಹದ್ದುಗಳು ತೀರಾ ಅಪಾಯದಂಚಿನಲ್ಲಿರುವ ಪಕ್ಷಿಗಳು. ರಾಮನಗರ ಜಿಲ್ಲೆಯಲ್ಲಿ ಈಗಲೂ ಕಾಣಸಿಗುತ್ತವೆ. ಮಾಂಸದ ಚೂರುಗಳನ್ನು ಹೆಕ್ಕಿ ತಿಂದು ಬದುಕುವ ಇವುಗಳನ್ನು ಜಾಡಮಾಲಿಗಳು ಎಂದೇ ಕರೆಯುತ್ತಾರೆ. ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ಹಾಗೂ ರೋಗರುಜಿನಗಳು ಹರಡದಂತೆ ತಡೆಯುವಲ್ಲಿ ಇವುಗಳ ಪಾತ್ರ ಮಹತ್ವದ್ದು’ ಎಂದು ತಿಳಿಸಿದರು.

‘ಐದು ವರ್ಷಗಳ ಹಿಂದೆ ಎಂ.ಜಿ.ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಬಿಳಿ ರಣಹದ್ದನ್ನು ರಕ್ಷಣೆ ಮಾಡಿದ್ದೆವು. ಅದು ಬಿಟ್ಟರೆ ನಗರದಲ್ಲಿ ರಣಹದ್ದನ್ನು ನೋಡಿದ ನೆನಪಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.