ಬೆಂಗಳೂರು: ಬಿಬಿಎಂಪಿಯು ವ್ಯಾಪ್ತಿಯ ದಕ್ಷಿಣ ವಲಯದ ವಿಶ್ವೇಶ್ವರಪುರದ ಪೊಬ್ಬತ್ತಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಮಂಗಳವಾರ ಉದ್ಘಾಟಿಸಿದರು. ಪಾಲಿಕೆಯ ಆಸ್ಪತ್ರೆಯಲ್ಲಿ ವ್ಯದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿರುವುದು ಇದೇ ಮೊದಲು.
‘ಈ ಯಂತ್ರವು ನಿಮಿಷಕ್ಕೆ 50 ಲೀಟರ್ ಆಮ್ಲಜನಕವನ್ನು ಉತ್ಪಾದನೆ ಮಾಡಲಿದೆ. ದಿನದ 24 ಗಂಟೆಯೂ ಆಕ್ಸಿಜನ್ ಉತ್ಪತ್ತಿ ಮಾಡುವ ಸಾಮರ್ಥ್ಯವಿರುವ ಈ ಘಟಕದಿಂದ ಪ್ರತಿನಿತ್ಯ 20 ಹಾಸಿಗೆಗಳಿಗೆ ಆಮ್ಲಜನಕ ಪೂರೈಸಬಹುದು. ವಿದ್ಯುತ್ ಪೂರೈಕೆ ದಿಢೀರ್ ಸ್ಥಗಿತಗೊಂಡರೂ 15 ನಿಮಿಗಳ ಕಾಲ ಸತತ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಇದರಲ್ಲಿದೆ’ ಎಂದು ಇದರ ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂದಿ ಮಾಹಿತಿ ನೀಡಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಹಾಗೂ ದಾನಿಗಳು ಕೋವಿಡ್ ವಿರುದ್ಧ ಹೋರಾಡಲು ಸಹಕರಿಸಿದ್ದಾರೆ. ಗಿವ್ ಇಂಡಿಯಾ’ ಮತ್ತು ‘ಝೆರೋಧ’ ಸಂಸ್ಥೆಗಳ ನೆರವಿನಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕವು ಜನರ ಪ್ರಾಣ ಉಳಿಸಲು ನೆರವಾಗಲಿದೆ’ ಎಂದು ಗೌರವ್ ಗುಪ್ತ ತಿಳಿಸಿದರು.
‘ಆಸ್ಪತ್ರೆಗಳಲ್ಲಿ ಆಮ್ಲಜನಕದ ವ್ಯವಸ್ಥೆಯಿದ್ದರೆ ಉಸಿರಾಟದ ಸಮಸ್ಯೆಯಿರುವ ರೋಗಿಗಳಿಗೆ ಅನುಕೂಲವಾಗಲಿದೆ. ಇಂತಹ ಘಟಕ ಸ್ಥಾಪನೆಗೆ ಮತ್ತಷ್ಟು ಸಂಸ್ಥೆಗಳು ನೆರವು ನೀಡಬೇಕು’ ಎಂದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಂಡಿದ್ದೇವೆ. ನಗರದಲ್ಲಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಲು ರೂಪರೇಷೆ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಲು ಇವು ಸಹಕಾರಿಯಾಗಲಿವೆ’ ಎಂದು ತಿಳಿಸಿದರು.
ದಕ್ಷಿಣ ವಲಯ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.