ADVERTISEMENT

ಆಭರಣ ಮಳಿಗೆ ದರೋಡೆಗೆ ‘ಮಾರ್ವಾಡಿ’ಯೇ ಸೂತ್ರದಾರ!

ದಂಪತಿ ಬಗ್ಗೆ ತಿಳಿದು ಕೃತ್ಯ: ಪ್ರಮುಖ ಆರೋಪಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:04 IST
Last Updated 23 ಆಗಸ್ಟ್ 2019, 20:04 IST

ಬೆಂಗಳೂರು: ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಯ ‘ಸಾಮ್ರಾಟ್ ಜ್ಯುವೆಲ್ಸ್‌’ ಮಳಿಗೆಯಲ್ಲಿ ನಡೆದಿದ್ದ ದರೋಡೆ ಯತ್ನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಕೇಂದ್ರ ವಿಭಾಗದ ಪೊಲೀಸರು, ‘ಚೌಧರಿ ಎಂಬ ಮಾರ್ವಾಡಿಯೇ ಪ್ರಕರಣದ ಪ್ರಮುಖ ಆರೋಪಿ’ ಎಂಬ ಸಂಗತಿಯನ್ನು ಪತ್ತೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ‘ಚೌಧರಿ ಎಂಬಾತನೇ ಸಂಚು ರೂಪಿಸಿ ನಮ್ಮಿಂದ ಕೃತ್ಯ ಮಾಡಿಸಿದ್ದಾನೆ’ ಎಂಬುದಾಗಿಯೂ ಆರೋಪಿಗಳು ಹೇಳಿದ್ದಾರೆ. ಚೌಧರಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡದ ಅಧಿಕಾರಿಗಳು, ಹೊರ ರಾಜ್ಯಕ್ಕೆ ಹೋಗಿ ಶೋಧ ನಡೆಸುತ್ತಿದ್ದಾರೆ.

‘‌ಹೊರ ರಾಜ್ಯದ ನಿವಾಸಿಯಾಗಿರುವ ಚೌಧರಿ, ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಇಲ್ಲಿರುವ ಮಾರ್ವಾಡಿಗಳು ಹಾಗೂ ಅವರ ಆಭರಣ ಮಳಿಗೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ‘ಸಾಮ್ರಾಟ್ ಜ್ಯುವೆಲ್ಸ್‌’ ಮಳಿಗೆ ಮಾಲೀಕ ಆಶಿಷ್‌ ಮತ್ತು ಪತ್ನಿ ರಾಕಿ ದಂಪತಿಯ ಬಗ್ಗೆಯೂ ಮಾಹಿತಿ ಕಲೆಹಾಕಿದ್ದ. ಆ ನಂತರವೇ ದರೋಡೆಗೆ ಸಂಚು ರೂಪಿಸಿದ್ದ. ಈ ಸಂಗತಿಯನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಾಡಿಗೆ ಮನೆ ಮಾಡಿಕೊಟ್ಟಿದ್ದ: ‘ಆರೋಪಿಗಳಾದ ಮಹಾರಾಷ್ಟ್ರ ಸೊಲ್ಲಾಪುರದ ಬಾಲಾಜಿ ರಮೇಶ ಗಾಯಕವಾಡ (25), ಹರಿಯಾಣದ ಬಲವಾನ್ ಸಿಂಗ್ (24), ರಾಜಸ್ಥಾನದ ಶ್ರೀರಾಮ ಬಿಷ್ಣೋಯಿ (23) ಮತ್ತು ಓಂ ಪ್ರಕಾಶ್ (27) ಅವರನ್ನು ಸಂಪರ್ಕಿಸಿದ್ದ ಪ್ರಮುಖ ಆರೋಪಿ ಚೌಧರಿ, ದರೋಡೆ ಮಾಡಲು ಸೂಚಿಸಿದ್ದನೆಂಬ ಮಾಹಿತಿ ಇದೆ’ ಎಂದು ಅಧಿಕಾರಿ ವಿವರಿಸಿದರು.

‘ಆರೋಪಿಗಳನ್ನು ಬೆಂಗಳೂರಿಗೆ ಕರೆಸಿದ್ದ ಚೌಧರಿ, ಕೆ.ಆರ್.ಪುರ ಸಮೀಪದ ವಿನಾಯಕ ನಗರದ ಡಿವಿಜಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಖರ್ಚಿಗೂ ಹಣ ನೀಡುತ್ತಿದ್ದ. ದರೋಡೆಗೂ ಮುನ್ನ ಆರೋಪಿಗಳನ್ನು ‘ಸಾಮ್ರಾಟ್ ಜ್ಯುವೆಲ್ಸ್‌’ ಮಳಿಗೆ ಬಳಿ ಕರೆದೊಯ್ದು ತೋರಿಸಿದ್ದ. ಇದನ್ನೂ ಆರೋಪಿಗಳೇ ಹೇಳಿದ್ದಾರೆ. ಚೌಧರಿಯನ್ನು ಬಂಧಿಸಿದ ನಂತರ ಮತ್ತಷ್ಟು ಮಾಹಿತಿ ದೊರೆಯಲಿದೆ’ ಎಂದು ಹೇಳಿದರು.

ಬಂಧಿತ ಹರಿಯಾಣದ ಬಲವಾನ್ ಅಮಾನತುಗೊಂಡಿರುವ ಸೈನಿಕ

‘ದರೋಡೆ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿರುವ ಹರಿಯಾಣದ ಬಲವಾನ್ ಸಿಂಗ್, ಸೈನಿಕ. ಆತನನ್ನು ಸೇನೆ ಅಧಿಕಾರಿಗಳು ಸದ್ಯ ಅಮಾನತ್ತಿನಲ್ಲಿಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಜೆ ಮೇಲೆ ಬಲವಾನ್, ಊರಿಗೆ ಬಂದಿದ್ದ. ಆಸ್ತಿ ಸಂಬಂಧ ಪಕ್ಕದ ಮನೆಯವರ ಜೊತೆ ಗಲಾಟೆ ಆಗಿತ್ತು. ಎದುರಾಳಿ ತಂಡದವರು, ಬಲವಾನ್ ಮೇಲೆ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಬಲವಾನ್, ಆಸ್ಪತ್ರೆಗೆ ದಾಖಲಾಗಿದ್ದ.’

‘ರಜೆ ಅವಧಿ ಮುಗಿದರೂ ಕರ್ತವ್ಯಕ್ಕೆ ವಾಪಸ್‌ ಹಾಜರಾಗಿರಲಿಲ್ಲ. ಆಸ್ಪತ್ರೆಗೆ ದಾಖಲಾದ ಬಗ್ಗೆಯೂ ಸೇನೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಅದೇ ಕಾರಣಕ್ಕೆ ಆತನನ್ನು ಅಮಾನತು ಮಾಡಲಾಗಿದೆ. ಅದನ್ನು ಪ್ರಶ್ನಿಸಿರುವ ಆತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ವಿಚಾರಣೆ ನಡೆಯುತ್ತಿದೆ. ಅದರ ಮಧ್ಯೆಯೇ ಕೆಲಸವಿಲ್ಲದೆ ಖಾಲಿ ಇದ್ದ ಆತ, ದರೋಡೆ ನಡೆಸಲು ಬೆಂಗಳೂರಿಗೆ ಬಂದಿದ್ದ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.