ADVERTISEMENT

ವಾರ್ಡ್‌ ಸಮಿತಿಗಳ ಸಂವಾದ: ಕಾರ್ಪೊರೇಟರ್‌ ಕುಟುಂಬದವರೇ ಸದಸ್ಯರಾಗಬೇಕೇ?

ಪ್ರಶ್ನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:54 IST
Last Updated 16 ಫೆಬ್ರುವರಿ 2019, 19:54 IST
ಸಭೆಯಲ್ಲಿ ಮೇಯರ್‌ ಗಂಗಾಂಬಿಕೆ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಇದ್ದರು–ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಮೇಯರ್‌ ಗಂಗಾಂಬಿಕೆ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾರ್ಡ್‌ ಸಮಿತಿಗಳ ಸದಸ್ಯರಾಗಿ ಆಯಾ ಕಾರ್ಪೊರೇಟರ್‌ಗಳ ಕುಟುಂಬದವರು, ರಾಜಕಾರಣಿಗಳ ಬೆಂಬಲಿಗರೇ ಇರುತ್ತಾರಲ್ಲಾ, ಏಕೆ ಹೀಗೆ?

– ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ವಾರ್ಡ್‌ ಸಮಿತಿಗಳ ವಿಷಯವಾಗಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಹೀಗೊಂದು ಪ್ರಶ್ನೆ ಕೇಳಿಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ‘ಅವರು ಇರಬಾರದು ಎಂದು ನಿಯಮವಿಲ್ಲ. ಅವರು ಸಕ್ರಿಯರಾಗಿದ್ದರೆ ವಾರ್ಡ್‌ ಸಭೆಗಳಲ್ಲಿ ಭಾಗವಹಿಸಬಹುದು’ ಎಂದರು.

ADVERTISEMENT

‘ಕೆಲವು ವಾರ್ಡ್‌ ಸಮಿತಿಗಳಲ್ಲಿ ಡಮ್ಮಿ ಸದಸ್ಯರನ್ನು ಹಾಕಿ ಸಭೆ ನಡೆಸುತ್ತೀರಿ. ಸಾರ್ವಜನಿಕರನ್ನು ಕತ್ತಲಲ್ಲಿಟ್ಟಿದ್ದೀರಿ ಏಕೆ ಹೀಗೆ‘ ಎಂದು ಜೆ.ಪಿ.ನಗರ ನಿವಾಸಿಗಳ ಸಂಘದ ಪ್ರತಿನಿಧಿ ಪೂರ್ಣಿಮಾ ಯಾದವ್‌ ಆಕ್ರೋಶದಿಂದ ಪ್ರಶ್ನಿಸಿದರು. ‘ಹಾಗೇನೂ ಇಲ್ಲ. ಇಲ್ಲಿ ನಾಗರಿಕರ ಜವಾಬ್ದಾರಿಯೂ ಇದೆ’ ಎಂದು ಆಯುಕ್ತರು ಸಮಜಾಯಿಷಿ ನೀಡಿದರು.

ವಾರ್ಡ್‌ ಸಮಿತಿಗಳ ಸ್ವರೂಪ ಹಾಗೂ ಹೊಣೆಗಾರಿಕೆ ಕುರಿತು ನಾಗರಿಕರ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಿದರು. ಸಂವಾದದ ಪ್ರಶ್ನೋತ್ತರ ರೂಪ ಇಲ್ಲಿದೆ:

*ವಾರ್ಡ್‌ ಸಭೆಯಲ್ಲಿ ಏನು ಚರ್ಚೆ ನಡೆಯಬೇಕು?

ಆಯಾ ವಾರ್ಡ್‌ಗಳ ಅಗತ್ಯಗಳು, ಆಗಬೇಕಾದ ಕಾಮಗಾರಿಗಳ ಕುರಿತು ಚರ್ಚೆಗಳಾಗಬೇಕು. ವಾರ್ಡ್‌ಗೆ ಬೇಕಾದ ಅನುದಾನದ ಬಗೆಗೂ ಇಲ್ಲಿಯೇ ಯೋಜನೆ ರೂಪಿಸಬೇಕು. ಇಲ್ಲಿ ಯೋಜನೆ ಸಿದ್ಧಪಡಿಸಿ ಸಲ್ಲಿಸಿದರೆ ಬಜೆಟ್‌ ಪಟ್ಟಿಯಲ್ಲಿ ಸೇರಿಸಿ ಅನುದಾನ ನಿಗದಿಪಡಿಸಲು ಅನುಕೂಲವಾಗುತ್ತದೆ. ಪಾಲಿಕೆಯ ಯಾವುದೇ ಯೋಜನೆ ಬೇರುಮಟ್ಟದಿಂದ ಬರಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿಯೂ ವಾರ್ಡ್‌ ಸಮಿತಿ ಸದಸ್ಯರು ಪಾಲ್ಗೊಳ್ಳಬೇಕು. ಮುಂದಿನ ವರ್ಷದ ಬಜೆಟ್ ವೇಳೆಗೆ ವಾರ್ಡ್‌ ಮಟ್ಟದಲ್ಲೇ ಯೋಜನೆ ಸಿದ್ಧವಾಗುವ ಆಶಯವಿದೆ.

ಪ್ರತಿಸಭೆ ನಡೆಯುವಾಗ ಹಿಂದಿನ ಸಭೆಗಳ ಅನುಪಾಲನಾ ವರದಿ ಮಂಡನೆಯಾಗಬೇಕು. ಕಾಮಗಾರಿ ಬಾಕಿಯಾದರೆ ಫಾಲೋ ಅಪ್‌ ಕೂಡಾ ನಡೆಯಬೇಕು. ದೊಡ್ಡ ಮೊತ್ತದ ಕಾಮಗಾರಿಗಳಾದರೆ ನಿಯಮಾನುಸಾರ ಟೆಂಡರು ಕರೆದು ಮಾಡಬೇಕಾಗುತ್ತದೆ.

*ಸಭೆಯೇ ನಡೆಯದಿದ್ದರೆ ಏನು ಮಾಡಬೇಕು? ಕೆಲವೆಡೆ ಹಾಗೆ ಆಗಿದೆಯಲ್ಲಾ?

ಒಮ್ಮೊಮ್ಮೆ ಅನನುಕೂಲವಾಗಬಹುದು. ಆಗ ನೀವು ವಾರ್ಡ್ ಸಮಿತಿ ಅಧ್ಯಕ್ಷರಿಗೆ (ಪಾಲಿಕೆ ಸದಸ್ಯ) ಮುಂದಿನ ದಿನಾಂಕ ನಿಗದಿಪಡಿಸುವಂತೆ ಕೋರಬಹುದು. ಸಭೆಯೇ ನಡೆಯದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ನಿಯಮಗಳಲ್ಲಿ ವಿವರಣೆ ಇಲ್ಲ.

*ಸಮಿತಿಯಲ್ಲಿ ಹತ್ತೇ ಸದಸ್ಯರು ಏಕೆ?

ಇದು ರಾಜ್ಯ ಸರ್ಕಾರ ರೂಪಿಸಿದ ಕಾನೂನು. ಇದನ್ನು ನಾವು ಬದಲಾಯಿಸಲಾಗದು.

*ಸಭೆಗಳು ಅದರ ನಿಗದಿತ ಉದ್ದೇಶ ಈಡೇರಿಸುತ್ತಿಲ್ಲ. ಬೇರೆ ಮೂಲಸೌಲಭ್ಯ ಒದಗಿಸುವ ಸಂಸ್ಥೆಗಳವರೂ ಭಾಗವಹಿಸುತ್ತಿಲ್ಲ.

ಮೊದಲು ಇದನ್ನು ಪಾಲಿಕೆಯ ಸಿಬ್ಬಂದಿಮಟ್ಟದಲ್ಲಿ ಸದೃಢಗೊಳಿಸಬೇಕಿದೆ. ಪಾಲಿಕೆಗೆ ಮಂಜೂರಾದ ಹುದ್ದೆಗಳ ಸಂಖ್ಯೆ 18 ಸಾವಿರ. ಆದರೆ, ಸದ್ಯ ಇರುವುದು 9 ಸಾವಿರ ಮಂದಿ. ಇಷ್ಟೇ ಸಿಬ್ಬಂದಿಯಿಂದ ಎಲ್ಲ ಕೆಲಸಗಳನ್ನೂ ನಿಭಾಯಿಸಬೇಕು. ಅವರಿಗೆ ಹಂತಹಂತವಾಗಿ ತರಬೇತಿ ಕೊಡಬೇಕು. ಮಾರ್ಚ್‌ ಅಂತ್ಯದೊಳಗೆ ಈ ತರಬೇತಿ ಕೊಡುತ್ತೇವೆ. ಲೋಕಸಭಾ ಚುನಾವಣೆ ಬಳಿಕ ವಾರ್ಡ್‌ ಸಮಿತಿ ಸದಸ್ಯರಿಗೂ ತರಬೇತಿ ಕೊಡುತ್ತೇವೆ. ಬೆಸ್ಕಾಂ, ಬಿಎಂಟಿಸಿ, ಮೆಟ್ರೊ, ಬಿಡಿಎ, ಜಲಮಂಡಳಿಯ ಅಧಿಕಾರಿಗಳೂ ವಾರ್ಡ್‌ ಸಭೆಯಲ್ಲಿ ಭಾಗವಹಿಸುವಂತೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಕೋರುತ್ತೇವೆ. ಹೀಗಾದಾಗ ಹಂತಹಂತವಾಗಿ ಸಭೆ ಸದೃಢವಾಗುತ್ತದೆ.

*ವಾರ್ಡ್‌ ಸಮಿತಿ ಸದಸ್ಯರನ್ನು ಬದಲಾಯಿಸಬಹುದೇ?

ಪಾಲಿಕೆ ಸದಸ್ಯರ ಅಧಿಕಾರವಧಿಯಷ್ಟೇ ವಾರ್ಡ್‌ ಸಮಿತಿ ಸದಸ್ಯರ ಅವಧಿ ಇರುತ್ತದೆ. ಅದು ಮುಕ್ತಾಯವಾಗಿ ಪಾಲಿಕೆಗೆ ಹೊಸ ಆಡಳಿತ ಬಂದಾಗ ವಾರ್ಡ್‌ ಸಮಿತಿಗಳನ್ನೂ ಹೊಸದಾಗಿ ರಚಿಸಬೇಕಾಗುತ್ತದೆ. ಈ ಮಧ್ಯೆ ಸದಸ್ಯರನ್ನು ಬದಲಾವಣೆಗೆ ಕೌನ್ಸಿಲ್‌ ಸಭೆ ನಿರ್ಧರಿಸಬಹುದು.

*ಸಭೆಯ ಬಗ್ಗೆ ಮಾಹಿತಿಯೇ ತಿಳಿಯುತ್ತಿಲ್ಲ. ಏನು ಮಾಡಲಿ?

ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11ಕ್ಕೆ ಆಯಾ ವಾರ್ಡ್‌ನ ನಿಗದಿತ ಸ್ಥಳದಲ್ಲಿ ಸಭೆ ನಡೆಯಬೇಕು. ಅದಕ್ಕೆ ಒಂದು ವಾರ ಮೊದಲು ಸಭೆಯ ಕಾರ್ಯಸೂಚಿ ಸಿದ್ಧಪಡಿಸಿ ಸದಸ್ಯರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಭೆಯ ಮಾಹಿತಿ ಪತ್ರ ಪ್ರಕಟಿಸಬೇಕು. ಒಟ್ಟಿನಲ್ಲಿ ಸಭೆಯ ಯಶಸ್ಸಿಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ.

*ಅಧಿಕಾರಿಗಳು ಬದಲಾದಾಗ ಅವರ ಮೊಬೈಲ್‌ ಸಂಖ್ಯೆ ತಿಳಿಯುವುದು ಹೇಗೆ?

ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಬದಲಾಗುವುದಿಲ್ಲ. ಕಚೇರಿಯಿಂದ ಒದಗಿಸಲಾದ ಮೊಬೈಲ್‌ ನಂಬರ್‌ ಅದೇ ಇರುತ್ತದೆ. ಎಲ್ಲವನ್ನೂ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ.

ಹಲ್ಲೆ; ಸದಸ್ಯರ ವಿರುದ್ಧ ಆಕ್ರೋಶ

‘ವಾರ್ಡ್‌ ಸಮಿತಿ ಸಭೆ ನಡೆಸುವಂತೆ ಕೋರಿದಾಗ ಉತ್ತರಹಳ್ಳಿ ವಾರ್ಡ್‌ ಸದಸ್ಯ ನನಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ವಾರ್ಡ್ ಸಮಿತಿ ಸಭೆಗೆ ಹೋಗುವವರು ಏಟು ತಿನ್ನಬೇಕೇ? ಇಂಥ ಸದಸ್ಯರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಅರೇಹಳ್ಳಿಯ ಹನುಮಾ ಹಿಲ್ಸ್‌ ಬಡಾವಣೆಯ ಕೆ.ನಾಗೇಶ್ವರರಾವ್‌ ಆಕ್ರೋಶದಿಂದ ಪ್ರಶ್ನಿಸಿದರು.

ಯಾವುದೇ ಸಮಾಧಾನದ ಮಾತುಗಳಿಗೂ ಅವರು ಪಟ್ಟು ಸಡಿಲಿಸಲಿಲ್ಲ. ಮೇಯರ್‌ ಗಂಗಾಂಬಿಕೆ ಪ್ರತಿಕ್ರಿಯಿಸಿ, ಹಲ್ಲೆ ನಡೆಸಲು ಮುಂದಾಗಿರುವುದು ತಪ್ಪು. ಅವರನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.

ಅವರ ಆಕ್ರೋಶದ ಕಟ್ಟೆ ಒಡೆಯುತ್ತಿರುವುದನ್ನು ಗಮನಿಸಿದ ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ‘ಈ ಕೃತ್ಯ ಎಸಗಿದವರು ನಮ್ಮ ಪಕ್ಷದ ಸದಸ್ಯರು. ಈ ವಿಷಯದ ಕುರಿತು ನಾನು ವಿಷಾದಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಯಾರ ಮೇಲೂ ಹಲ್ಲೆ ನಡೆಸುವಂತಿಲ್ಲ. ಅವರನ್ನು ಕರೆಸಿ ಮಾತನಾಡುತ್ತೇನೆ’ ಎಂದು ಹೇಳಿ ಸಮಾಧಾನಪಡಿಸಿದರು.

ಏನು ಸರಿ ಆಗಬೇಕು?

l ಸಭೆಗಳ ಮಾಹಿತಿ ನೀಡುವ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ.

l ಕಾರ್ಯಸೂಚಿಯನ್ನು 7 ದಿನ ಮುಂಚಿತವಾಗಿ ಸಿದ್ಧಪಡಿಸುತ್ತಿಲ್ಲ

l ಸಭೆಗೆ ಮುನ್ನ ಎಲ್ಲ ಸದಸ್ಯರಿಗೆ ಕಾರ್ಯಸೂಚಿಯನ್ನು ನೀಡುತ್ತಿಲ್ಲ

l ಕಾರ್ಯಸೂಚಿಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸುತ್ತಿಲ್ಲ

l ಸಿಬ್ಬಂದಿ ಕೊರತೆಯಿಂದಾಗಿ ಕೆಲವೆಡೆ ಸಭೆಗಳು ಸಕಾಲಕ್ಕೆ ನಡೆಯುತ್ತಿಲ್ಲ

l ಕೆಲವು ಪಾಲಿಕೆ ಸದಸ್ಯರು ಸಭೆಗಳಲ್ಲಿ ಜನರು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ

l ಬಜೆಟ್‌ ಬೇಡಿಕೆಗಳ ವಾರ್ಡ್‌ ಸಮಿತಿ ಸಭೆಗಳಲ್ಲಿ ಚರ್ಚೆ ನಡೆಯುತ್ತಿಲ್ಲ

***

ನಕಾರಾತ್ಮಕ ಯೋಚನೆ ಬೇಡ​

ವಾರ್ಡ್‌ ಸಮಿತಿಗಳ ಕಾರ್ಯವೈಖರಿ ಬಗ್ಗೆ ನಕಾರಾತ್ಮಕ ಯೋಚನೆ ಬೇಡ. ಎಲ್ಲ ವಾರ್ಡ್‌ಗಳಲ್ಲೂ ಈ ಸಮಿತಿಗಳು ಖಂಡಿತಾ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿವೆ.

ಮೊದಲ ಶನಿವಾರವೇ ಸಮಿತಿ ಸಭೆ ನಡೆಯಬೇಕು ಎಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಕ್ಕೂ ಮುಂಚೆಯೂ ಸಭೆಗಳು ನಡೆಯುತ್ತಿದ್ದವು. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗುತ್ತಿರಲಿಲ್ಲ. ಕೆಲವು ಸಂಘಟನೆಗಳು ನನ್ನನ್ನು ಭೇಟಿಯಾಗಿ ಸಭೆ ನಡೆಸಲು ನಿರ್ದಿಷ್ಟ ದಿನವನ್ನು ಗೊತ್ತುಪಡಿಸುವಂತೆ ಕೋರಿದ್ದರು. ಹಾಗಾಗಿ ಈ ನಿರ್ಣಯ ಕೈಗೊಂಡೆವು.

ಮೊದಲ ಶನಿವಾರ ಸಭೆ ನಡೆಯದಿದ್ದರೆ, ಮುಂದೆ ಯಾವ ದಿನ ನಡೆಸುತ್ತೀರಿ ಎಂದು ಪ್ರಶ್ನಿಸುವ ಹಕ್ಕು ಜನರಿಗಿದೆ. ಜನರು ಪ್ರಶ್ನಿಸಿದರೆ ಪಾಲಿಕೆ ಸದಸ್ಯರು ಸಭೆ ನಡೆಸದೆ ನುಣುಚಿಕೊಳ್ಳಲು ಆಗುವುದಿಲ್ಲ.

ಹಳೆಯ ವಾರ್ಡ್‌ಗಳಿಗೆ ವರ್ಷಕ್ಕೆ ತಲಾ ₹ 2 ಕೋಟಿ ಹಾಗೂ ಹೊಸ ವಾರ್ಡ್‌ಗಳಿಗೆ ತಲಾ ₹ 3 ಕೋಟಿ ಅನುದಾನ ನೀಡುತ್ತೇವೆ.

– ಗಂಗಾಂಬಿಕೆ,ಮೇಯರ್‌

***

‘ಅಧಿಕಾರ ಕಿತ್ತುಕೊಳ್ಳುವ ಯತ್ನ’

ಪಾಲಿಕೆಯ ಕೌನ್ಸಿಲ್‌ಗಳಿಗಿಂತಲೂ ಹೆಚ್ಚು ಪಾರದರ್ಶಕವಾದ ಆಡಳಿತ ವಾರ್ಡ್‌ ಸಮಿತಿಗಳಿಂದ ಸಾಧ್ಯ. ಯಾವುದೇ ಇಲಾಖೆಯ ಅಧಿಕಾರಿಯನ್ನು ಬೇಕಿದ್ದರೂ ಸಭೆಗೆ ಕರೆಸಲು ವಾರ್ಡ್‌ ಸಮಿತಿಗೆ ಅಧಿಕಾರ ಇದೆ. ಸ್ಥಳೀಯ ಮಟ್ಟದ ಶೇ 75ರಷ್ಟು ಸಮಸ್ಯೆಗಳನ್ನು ವಾರ್ಡ್‌ ಸಮಿತಿಗಳಲ್ಲೇ ಬಗೆಹರಿಸಬಹುದು.

ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಿಗಬೇಕಾದಷ್ಟು ಅಧಿಕಾರ ಇನ್ನೂ ದಕ್ಕಿಲ್ಲ. ಇನ್ನೊಂದೆಡೆ ವಾರ್ಡ್‌ ಸಮಿತಿಗಳ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಕ್ಷೇತ್ರವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲು ವಿಧಾಸಭೆಯ ಉಪಾಧ್ಯಕ್ಷರ ಸಮಿತಿ ಶಿಫಾರಸು ಮಾಡಿದೆ. ಇದು ಜಾರಿಯಾದರೆ ವಾರ್ಡ್‌ ಸಮಿತಿಗಳಿಗೆ ಕಂಟಕ ಒದಗಲಿದೆ.

ರಾಜ್ಯ ಸರ್ಕಾರ ಬಿಬಿಎಂಪಿಗೆ ₹ 8,015 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಯಾವ ವಾರ್ಡ್‌ಗೆ ಎಷ್ಟು ಅನುದಾನ ಹಂಚಿಕೆ ಆಗಿದೆ ಎಂಬ ಮಾಹಿತಿ ಪಾಲಿಕೆ ಸದಸ್ಯರಿಗೇ ತಿಳಿದಿಲ್ಲ.

ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ

***

ಹಣ ಬಿಡುಗಡೆ ಮಾಹಿತಿಯೂ ವೆಬ್‌ಸೈಟ್‌ನಲ್ಲಿ

ಯಾವ ಮಾಹಿತಿಯನ್ನೂ ಜನರಿಂದ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಅನುಷ್ಠಾನಗೊಂಡ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಮೂರು ವರ್ಷಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಪಾಲಿಕೆ ವೆಬ್‌ಸೈಟ್‌ನಲ್ಲಿ (http://bbmp.gov.in) ಪ್ರಕಟಿಸಿದ್ದೇವೆ.

ವಾರ್ಡ್‌ ಸಮಿತಿಗಳ ವಿವರ, ತೆರಿಗೆ ಸಂಗ್ರಹದ ವಾರ್ಡ್‌ವಾರು ವಿವರ ಹಾಗೂ ವಾರ್ಡ್‌ಗೆ ಮಂಜೂರಾದ ಕಾಮಗಾರಿಗಳ ವಿವರಗಳು ಈಗಾಗಲೇ ವೆಬ್‌ಸೈಟ್‌ನಲ್ಲಿ ಲಭ್ಯ. ವಾರ್ಡ್‌ನಲ್ಲಿರುವ ಆಸ್ತಿಗಳ ವಿವರ ಹಾಗೂ ಯಾರು ತೆರಿಗೆಕಟ್ಟಿಲ್ಲ ಎಂಬ ಮಾಹಿತಿಯನ್ನೂ ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ. ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಸಭೆ ವಿವರಗಳನ್ನು ಪ್ರಕಟಿಸುವುದಕ್ಕೂ ಸಿದ್ಧತೆ ನಡೆದಿದೆ.

ವಾರ್ಡ್‌ನ ಬೇಡಿಕೆಗಳ ಬಗ್ಗೆಯೂ ನವೆಂಬರ್‌ ಒಳಗೆ ವಾರ್ಡ್‌ ಸಮಿತಿಗಳಲ್ಲಿ ಚರ್ಚೆಯಾಗಬೇಕು. ಅವುಗಳನ್ನು ಕ್ರೋಢೀಕರಿಸಿ ಅದರ ಆಧಾರದಲ್ಲಿ ಬಜೆಟ್‌ ಸಿದ್ಧಪಡಿಸಬೇಕು

ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

***

‘ವಾರ್ಡ್‌ ಸಮಿತಿ– ಇದು ಬೆಂಗಳೂರಿನಲ್ಲಿ ಮಾತ್ರ’

ದೇಶದಲ್ಲಿ ವಾರ್ಡ್‌ ಸಮಿತಿಗಳನ್ನು ಹೊಂದಿರುವ ಏಕೈಕ ನಗರ ಬೆಂಗಳೂರು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ಪ್ರಯತ್ನ ದೇಶಕ್ಕೆ ಮಾದರಿ.

ಈ ಸಮಿತಿಗಳು ಇನ್ನಷ್ಟು ಚಟುವಟಿಕೆಗಳತ್ತ ಗಮನ ವಹಿಸಬೇಕು. ವಾರ್ಡ್‌ನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಸಮಿತಿ ಸಭೆಯಲ್ಲೇ ತಯಾರಾಗಬೇಕು. ಯಾವ ರಸ್ತೆ ಅಭಿವೃದ್ಧಿಪಡಿಸಬೇಕು, ಎಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು, ಉದ್ಯಾನಕ್ಕೆ ಯಾವ ಸವಲತ್ತು ಬೇಕು ಎಂಬುದನ್ನು ಸ್ಥಳೀಯರೇ ನಿರ್ಧರಿಸುವಂತಾಗಬೇಕು.

ಪಾಲಿಕೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಪಡೆಯುವ ಪರಿಸ್ಥಿತಿ ಇರಬಾರದು. ತೆರಿಗೆ ಸಮರ್ಪಕವಾಗಿ ಸಂಗ್ರಹವಾಗುವಂತೆ ನೋಡಿಕೊಳ್ಳುವ ಹಾಗೂ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲೂ ಸಮಿತಿಗಳ ಜವಾಬ್ದಾರಿ ಬಹಳಷ್ಟಿದೆ.

ಈಗಾಗಲೇ ನಡೆದಿರುವ ವಾರ್ಡ್ ಸಮಿತಿ ಸಭೆಗಳಲ್ಲಿ ಬಹಳಷ್ಟು ಫಲಪ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಯಾವ ಬದಲಾವಣೆಯೂ ಒಂದೇ ದಿನದಲ್ಲಿ ಸಾಧ್ಯವಾಗುವುದಿಲ್ಲ. ವಾರ್ಡ್‌ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಗರವನ್ನು ಉತ್ತಮಪಡಿಸುವ ಕ್ರಿಯೆಯಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.

ಶ್ರೀನಿವಾಸ ಅಲವಿಲ್ಲಿ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಹಸಂಸ್ಥಾಪಕ

***
ಜನ ಏನೆಂದರು?

ವಾರ್ಡ್‌ ಸಮಿತಿ ಸಭೆಯ ಮಾಹಿತಿಯೇ ಸರಿಯಾಗಿ ಸಿಗುತ್ತಿರಲಿಲ್ಲ. ಇಂದಿನ ಸಭೆಯಲ್ಲಿ ಹಲವು ಸಮಸ್ಯೆಗಳಿಗೆ ಉತ್ತರ ಸಿಕ್ಕಿದೆ. ಮುಂದೆ ಸಮಿತಿ ಸಭೆಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.

ವೇದಾ ಕತ್ರಿಗುಪ್ಪೆ

***

ವಾರ್ಡ್‌ ಸಮಿತಿ ಬಗ್ಗೆ ಜ್ಞಾನ ಹೆಚ್ಚಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ. ವಾರ್ಡ್‌ ಸಮಿತಿ ಸಭೆಗಳಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಅಂಥ ಜನವಿರೋಧಿ ಯೋಜನೆಗೆ ವಾರ್ಡ್ ಹಂತದಲ್ಲಿಯೇ ತಡೆ ಒಡ್ಡಬೇಕು.

ವಿದ್ಯಾಧರ

***

ವಾರ್ಡ್‌ ಸಮಿತಿ ಸಭೆಯಲ್ಲಾದ ನಡಾವಳಿಗಳನ್ನು ಮುಕ್ತವಾಗಿ ಪ್ರಕಟಿಸಬೇಕು. ಹಳೇ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳ ಅವಲೋಕನವೂ ಆಗಬೇಕು. ವಾರ್ಡ್‌ ಸಮಿತಿ ರಚನೆ ಆಗಿ ಒಂದು ವರ್ಷ ಆಗಿದೆ. ಅಧಿಕಾರಿಗಳಿಗೆ ತರಬೇತಿ ಕೊಡಲು ಒಂದು ವರ್ಷ ಬೇಕೇ? ಇದೆಲ್ಲವೂ ಕಣ್ಣೊರೆಸುವ ತಂತ್ರ ಆಗಬಾರದು.

ಸಂಡೂರು ಸುಬ್ರಹ್ಮಣ್ಯ

***

ವಾರ್ಡ್‌ ಸಮಿತಿಗೆ ಸದಸ್ಯರ ಆಯ್ಕೆಯ ಮಾನದಂಡ ಪ್ರಕಟಿಸಬೇಕು. ವಾರ್ಡ್‌ ಎಂಜಿನಿಯರ್‌ಗಳು ಬದಲಾದಾಗ ಅವರ ಮೊಬೈಲ್‌ ನಂಬರ್‌ಗಳು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಆಗಬೇಕು.

ಅಲೀಂ ಜೆ.ಪಿ. ನಗರ

***

ವಾರ್ಡ್‌ ಸಮಿತಿ ಸಭೆಗಳಲ್ಲಿ ಕೆರೆ, ಪರಿಸರ ಉಳಿಸುವ ಬಗ್ಗೆ ಪ್ರತಿ ಬಾರಿಯೂ ಚರ್ಚೆಗಳಾಗಬೇಕು. ಕೆರೆಗಳು ಪುನಶ್ಚೇತನಗೊಂಡರೆ ನೀರಿನ ಸಮಸ್ಯೆಗಳು ವಾರ್ಡ್‌ಮಟ್ಟದಲ್ಲಿಯೇ ಬಗೆಹರಿಯುತ್ತವೆ.

ಮಾಧುರಿ ಸುಬ್ಬರಾವ್‌

***

ಇದು ಆರಂಭಿಕ ಹಂತ. ನಾಗರಿಕರು ಜಾಗೃತರಾಗಿ ಒಳ್ಳೆಯ ರೀತಿ ಪ್ರತಿಕ್ರಿಯಿಸಿದ್ದಾರೆ. ಮುಂದೆ ವಾರ್ಡ್‌ ಸಮಿತಿ ಸಭೆಗಳು ರಚನಾತ್ಮಕವಾಗಿ ನಡೆಯುವ ಆಶಯವಿದೆ.

ಶಿಲ್ಪಾ

***

ವಾರ್ಡ್‌ ಸಮಿತಿ ಸಭೆಗೆ ಬೆಂಗಳೂರೇ ಮಾದರಿ. ಇದು ದೇಶದ ಬೇರೆಲ್ಲಿಯೂ ನಡೆಯುತ್ತಿಲ್ಲ. ಇದುಯಶಸ್ವಿಯಾಗಬೇಕಾದರೆ ನಾಗರಿಕರ ಪಾಲ್ಗೊಳ್ಳುವಿಕೆಮುಖ್ಯ. ನಾವು ಕೇಳಿದಾಗ ಸ್ಪಂದಿಸುವಆಯುಕ್ತರು, ಕಮಿಷನರ್‌ ಇದ್ದಾರೆ. ಈ ಅವಕಾಶವನ್ನು
ಬಳಸಿಕೊಳ್ಳಬೇಕು.

ಪ್ರಭಾ ದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.