ADVERTISEMENT

ನೀರಿನ ಬವಣೆ ನೀಗಿಸಲು ತಿಂಗಳ ಗಡುವು

ವಾರಕ್ಕೊಂದು ದಿನವೂ ಬರುತ್ತಿಲ್ಲ ನೀರು l ಜಲಮಂಡಳಿ ವಿರುದ್ಧ ನಾಗರಿಕರ ದೂರು l ಅಧಿಕಾರಿಗಳ ಅಸಡ್ಡೆಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 2:24 IST
Last Updated 2 ಫೆಬ್ರುವರಿ 2020, 2:24 IST
ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್ ಜನರ ಸಮಸ್ಯೆಗಳಿಗೆ ಉತ್ತರಿಸಿದರು. ಕಾರ್ಯಪಾಲಕ ಎಂಜಿನಿಯರ್‌ ಕೆ.ಎಂ.ವಾಸನ್‌, ಪ್ರಕಾಶ್, ಹರಿಕುಮಾರ್ ಹಾಗೂ ಶೇಖ್‌ ಮೊಹಮ್ಮದ್ ಇದ್ದಾರೆ (ಎಡಚಿತ್ರ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು –ಪ್ರಜಾವಾಣಿ ಚಿತ್ರಗಳು
ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್ ಜನರ ಸಮಸ್ಯೆಗಳಿಗೆ ಉತ್ತರಿಸಿದರು. ಕಾರ್ಯಪಾಲಕ ಎಂಜಿನಿಯರ್‌ ಕೆ.ಎಂ.ವಾಸನ್‌, ಪ್ರಕಾಶ್, ಹರಿಕುಮಾರ್ ಹಾಗೂ ಶೇಖ್‌ ಮೊಹಮ್ಮದ್ ಇದ್ದಾರೆ (ಎಡಚಿತ್ರ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ವಾರದಲ್ಲಿ ಎರಡೇ ದಿನ ಕಾವೇರಿ ನೀರು ಬಿಡುತ್ತಾರೆ. ಮೊದಲ ಮಹಡಿಗೂ ತಲುಪದಷ್ಟು ಕಡಿಮೆ ಒತ್ತಡದಲ್ಲಿ ನೀರು ಬಿಡಲಾಗುತ್ತಿದೆ. ಕನಿಷ್ಠ ಪಕ್ಷ ಕೊಳವೆಬಾವಿಯನ್ನಾದರೂ ಕೊರೆಯಿಸಿ ನೀರು ಕೊಡಿ...

ನೀರಿನ ಬವಣೆಯಿಂದ ಬಸವಳಿದ ಮನೋರಾಯನಪಾಳ್ಯದ ಬಹುತೇಕ ನಿವಾಸಿಗಳ ಅಳಲು ಇದು. ಇದಕ್ಕೆ ಸ್ಪಂದಿಸಿದ ಬಿಬಿಎಂಪಿಯ ವಿರೋಧ ಪಕ್ಷದ ನಾಯಕರೂ ಆಗಿರುವ ಪಾಲಿಕೆ ಸದಸ್ಯ ಅಬ್ದುಲ್ ವಾಜಿದ್‌, ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಪ್ರಜಾವಾಣಿ’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಜನರ ಬವಣೆಗಳನ್ನು ಜನಪ್ರತಿನಿಧಿಗೆ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ವೇದಿಕೆ ಕಲ್ಪಿಸಿತು.

ADVERTISEMENT

‘ಒಂದು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ವಾರ್ಡ್‌ನಲ್ಲಿ ಕಾವೇರಿ ನೀರು ಪೂರೈಕೆ ಸಮಸ್ಯೆ ಬಗೆಹರಿದಿರಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ವಾಜಿದ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ನೀರು ಪೂರೈಕೆಗೆ ಮೂಲಸೌಕರ್ಯ ಕಲ್ಪಿಸುವುದಕ್ಕೆ ಇರುವ ಅಡ್ಡಿ ನಿವಾರಿಸಲು ಬೇಕಾದ ಸಹಕಾರ ನೀಡುತ್ತೇನೆ. ಅಗತ್ಯಬಿದ್ದರೆ ಜಲಮಂಡಳಿ ಅಧ್ಯಕ್ಷರೊಂದಿಗೂ ಸಭೆ ನಡೆಸೋಣ. ಅರ್ಧದಲ್ಲೇ ನಿಂತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ಅನಿಶ್ಚಿತ ನೀರು ಪೂರೈಕೆಯಿಂದಾಗಿ ಆಗುತ್ತಿ
ರುವ ಸಮಸ್ಯೆಗಳನ್ನು ವಾರ್ಡ್‌ನಭುವನೇಶ್ವರಿನಗರ, ಕೌಸರ್‌ನಗರ, ದಿಣ್ಣೂರು ಮುಖ್ಯರಸ್ತೆ, ವೆಂಕಟಪ್ಪ ಬಡಾವಣೆ, ಅಕ್ಬರ್‌ ಮಸೀದಿ ರಸ್ತೆ‌ ಹಾಗೂಚಾಮುಂಡಿನಗರ ಬಡಾವಣೆಗಳ ನಿವಾಸಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರು. ‘ಬೋರ್‌ವೆಲ್‌ ನೀರು ಪೂರೈಸುವುದಕ್ಕೂ ದುಡ್ಡು ಕೇಳುತ್ತಾರೆ’ ಎಂದು ಕೆಲವರು ಆರೋಪಿಸಿದರು.

ಲಕ್ಷ ಶುಲ್ಕ ಕಟ್ಟಿದರೂ ನೀರಿಲ್ಲ: ‘ಕಾವೇರಿ ಸಂಪರ್ಕಕ್ಕೆ ₹ 1.20 ಲಕ್ಷ ಶುಲ್ಕ ಕಟ್ಟಿದ್ದೇವೆ. ಆದರೂ, ವಾರಕ್ಕೆರಡು ಬಾರಿಯೂ ನೀರು ಬರುತ್ತಿಲ್ಲ. ವಾರದಲ್ಲಿ ಕೇವಲ ನಾಲ್ಕು ಗಂಟೆ ಕಾವೇರಿ ನೀರು ಸಿಕ್ಕರೆ ನಾವು ಬದುಕುವುದಾದರೂ ಹೇಗೆ’ ಎಂದು ವೆಂಕಟಪ್ಪ ಬಡಾವಣೆಯ ನಿವಾಸಿ ಶಿವಾಜಿ ರಾವ್‌ ಪ್ರಶ್ನಿಸಿದರು. ಅಕ್ರಂ ಸೇರಿದಂತೆ ಅನೇಕರು ಇದಕ್ಕೆ
ದನಿಗೂಡಿಸಿದರು.

‘ಆ ಪ್ರದೇಶದಲ್ಲಿ ನೀರಿನ ಅನಧಿಕೃತ ಸಂಪರ್ಕಗಳು ಬಹಳಷ್ಟಿದ್ದು, ಸೋರಿಕೆ ಪ್ರಮಾಣ ಹೆಚ್ಚಿದೆ. ನಗರಸಭೆ ಕಾಲದಲ್ಲಿ ಅಳವಡಿಸಿದ್ದ ಕೊಳವೆಗಳನ್ನು ದುರಸ್ತಿಪಡಿಸಿ ಕಾವೇರಿ ನೀರು ಪೂರೈಕೆಗೆ ಕ್ರಮ ಕೈಗೊಂಡರೂ ಹೆಚ್ಚಿನ ಮನೆಯವರು ನಿಗದಿತ ಶುಲ್ಕ ಪಾವತಿಸಿ ಸಂಪರ್ಕ ಪಡೆಯುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಸಂಪರ್ಕ ಪಡೆದರೆ ವಾರದಲ್ಲಿ ನಾಲ್ಕು ದಿನಗಳು ನೀರು ಪೂರೈಸಬಹುದು’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

‘ಕೆಲವರು ಶುಲ್ಕ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಶುಲ್ಕ ಕಟ್ಟಿದವರಿಗೆ ನೀರು ಪೂರೈಸದಿರುವುದನ್ನು ಒಪ್ಪಲಾಗದು. ಬಡವರ ಶುಲ್ಕವನ್ನು ಪಾವತಿಸಲು ನಾನೇ ವ್ಯವಸ್ಥೆ ಮಾಡುತ್ತೇನೆ’ ಎಂದು ವಾಜಿದ್‌ ಆಶ್ವಾಸನೆ ನೀಡಿದರು.

‘ಎಷ್ಟು ಕೊಳವೆಬಾವಿಗಳನ್ನು ಬೇಕಾದರೂ ಕೊರೆಯಿಸಿಕೊಡುತ್ತೇನೆ. ಆದರೆ, ಅದರಲ್ಲಿ ವರ್ಷಪೂರ್ತಿ ನೀರು ಸಿಗುವ ಭರವಸೆ ಇಲ್ಲ. ಅದು ಕೇವಲ ತಾತ್ಕಾಲಿಕ ಪರಿಹಾರ. ಕಾವೇರಿ ಸಂಪರ್ಕ ಪಡೆಯುವುದೊಂದೇ ನೀರಿನ ಸಮಸ್ಯೆಗೆ ಪರಿಹಾರ’ ಎಂದು ಅವರು ತಿಳಿಸಿದರು.

‘ವಾಹನ ನಿಲುಗಡೆ– ಬಿಡುಗಡೆ ಕೊಡಿ’

‘ಎಲ್ಲಿಂದಲೋ ಬಂದವರು ನಮ್ಮ ಮನೆಯ ಗೇಟ್‌ ಎದುರು ವಾಹನ ನಿಲ್ಲಿಸಿ ನಾಪತ್ತೆಯಾಗುತ್ತಾರೆ. ನಮ್ಮ ವಾಹನವನ್ನು ರಸ್ತೆಗಿಳಿಸಲು ಹರಸಾಹಸ ಪಡಬೇಕು. ವಾಹನ ನಿಲ್ಲಿಸಿದವರನ್ನು ಹುಡುಕುತ್ತಾ ಹೋಗಬೇಕು. ಇಂಥ ವಾಹನಗಳನ್ನು ಟೋ ಮಾಡಬೇಕು’ ಎಂದು ಮಹಮ್ಮದ್‌ ರಿಯಾಜ್‌ ಪಾಷಾ ಒತ್ತಾಯಿಸಿದರು.

‘ಈ ಬಗ್ಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯಲಿದೆ’ ಎಂದು ವಾಜಿದ್‌ ಭರವಸೆ ನೀಡಿದರು.

‘ಪಡ್ಡೆ ಹುಡುಗರ ಕಾಟ ತಪ್ಪಿಸಿ’


‘ಕರ್ನಾಟಕ ಮೆಡಿಕಲ್‌ ಬಳಿ ಪೋಲಿ ಹುಡುಗರ ಕಾಟ ಮಿತಿ ಮೀರಿದೆ. ರಿಕ್ಷಾಗಳಲ್ಲಿ ಕುಳಿತು ಗಲಾಟೆ ಮಾಡುತ್ತಾರೆ. ಹುಡುಗಿಯರು ಇಲ್ಲಿ ಓಡಾಡುವುದೂ ಕಷ್ಟ. ಈ ಬಗ್ಗೆ
ಆಕ್ಷೇಪ ವ್ಯಕ್ತಪಡಿಸಿದರೆ, ರಸ್ತೆ ನಿಮ್ಮಪ್ಪನದಾ ಎಂದು ಪ್ರಶ್ನಿಸುತ್ತಾರೆ’ ಎಂದು ವರಲಕ್ಷ್ಮಿ ದೂರಿದರು.

‘ಈ ಬಗ್ಗೆ 100ಕ್ಕೆ ದೂರು ನೀಡಿದರೆ ಐದು ನಿಮಿಷದಲ್ಲಿ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುತ್ತೇವೆ’ ಎಂದು ಪೊಲೀಸ್‌ ಅಧಿಕಾರಿ ಕುಮಾರ್‌ ತಿಳಿಸಿದರು.

ಇದಕ್ಕೆ ಆಕ್ಷೇಪ ಪಡಿಸಿದ ಸಾಜಿದಾ ಬೇಗಂ, ‘ಅನೇಕ ಬಾರಿ ಹುಡುಗರು ನಮ್ಮ ಮನೆಯ ಕಾಂಪೌಂಡ್‌ ಒಳಗೇ ಹಾರಿ ತಪ್ಪಿಸಿಕೊಂಡಿದ್ದಾರೆ. ನಮ್ಮ ಮನೆಯ ಮಕ್ಕಳೂ ಹಾದಿ ತಪ್ಪುತ್ತಾರೋ ಎಂಬ ಆತಂಕ ನಮ್ಮದು. 100ಕ್ಕೆ ಕರೆ ಮಾಡಿದರೆ, ಹೊಯ್ಸಳ ವಾಹನ ಸ್ಥಳಕ್ಕೆ ಬರುವ ಮುನ್ನವೇ ಅವರಿಗೆ ಮಾಹಿತಿ ತಲುಪುತ್ತದೆ. ಇದು ಹೇಗೆ’ ಎಂದು ಪ್ರಶ್ನಿಸಿದರು.

‘100ಕ್ಕೆ ಕರೆ ಮಾಡಿ ನೀಡುವ ಮಾಹಿತಿ ಸೋರಿಕೆ ಆಗಲೂ ಸಾಧ್ಯವೇ ಇಲ್ಲ’ ಎಂದು ಕುಮಾರ್‌ ಸಮರ್ಥಿಸಿಕೊಂಡರು.

‘ಮಫ್ತಿಯಲ್ಲಿ ಬಂದು ಇಂತಹ ಪಡ್ಡೆ ಹುಡುಗರಿಗೆ ಬುದ್ಧಿಕಲಿಸಿ’ ಎಂದು ಸಾಜಿದಾ ಸಲಹೆ ನೀಡಿದರು.

ಇದಕ್ಕೆ ದನಿಗೂಡಿಸಿದ ಮಂಜುನಾಥ ಬಡಾವಣೆಯ ಬಾಬು ಶೆಟ್ಟಿ ಹಾಗೂ ಭುವನೇಶ್ವರಿ ನಗರದ ಮಂಜುನಾಥ, ‘ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು’ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸ್ಥಳೀಯರು ಅಳುಕಿಲ್ಲದೇ ಪಾಲಿಕೆ ಸದಸ್ಯರು, ಅಧಿಕಾರಿಗಳ ಮುಂದೆ ಸಂಕಷ್ಟ ಹೇಳಿಕೊಂಡರು. ಅವುಗಳನ್ನು ತ್ವರಿತಗತಿಯಲ್ಲಿ
ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಆಯ್ದ ಪ್ರಶ್ನೆಗಳು ಇಲ್ಲಿವೆ...

‘ರ‍್ಯಾಲಿಯಂತೆ ಬೈಕ್‌ ಓಡಿಸುತ್ತಾರೆ’

ಸಮೀರ್‌ ಚೌಧರಿ: ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಕೆಲವರು ರ‍್ಯಾಲಿಯಂತೆ ಬೈಕ್‌ ಓಡಿಸಿ ಭೀತಿ ಹುಟ್ಟಿಸುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.

ಕುಮಾರ್‌, ಪೊಲೀಸ್‌ ಅಧಿಕಾರಿ: ಈ ಬಗ್ಗೆ ಸಂಚಾರ ವಿಭಾಗದ ಪೊಲೀಸರ ಗಮನಕ್ಕೆ ತರುತ್ತೇನೆ.

‘ವಾರಕ್ಕೊಮ್ಮೆಯೂ ಬರಲ್ಲ’

ವರಲಕ್ಷ್ಮಿ: ಕಸ ಸಂಗ್ರಹಿಸುವವರು ವಾರಕ್ಕೊಮ್ಮೆಯೂ ನಮ್ಮ ಬೀದಿಗೆ ಬರುವುದಿಲ್ಲ. ಕಸ ವಿಂಗಡಿಸಿ ಕೊಟ್ಟರೂ ಅವರು ಅದನ್ನು ಒಟ್ಟು ಮಾಡುತ್ತಾರೆ

ಪಾಲಿಕೆ ಎಇಇ: ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ

‘ಹಳೆ ಕೊಳವೆ ಬದಲಾಯಿಸಿ’

ಬಾಬು ಶೆಟ್ಟಿ, ಮಂಜುನಾಥ ಬಡಾವಣೆ: ಈ ಪ್ರದೇಶದಲ್ಲಿ ಜನಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತೀರಾ ಹೆಚ್ಚಿದೆ. ಆದರೆ, ಒಳಚರಂಡಿ ಕೊಳವೆಗಳ ಗಾತ್ರ ಹಿಂದಿನಷ್ಟೇ ಇದೆ.

ಲತೀಫ್‌, ಎಇಇ, ಜಲಮಂಡಳಿ:

ಹಳೆಯ ಒಳಚರಂಡಿ ಕೊಳವೆಗಳನ್ನು ಶೀಘ್ರ ಬದಲಾಯಿಸುತ್ತೇವೆ.

‘ತಪ್ಪುಗಳನ್ನು ಸರಿಪಡಿಸಿ’

ಅಲಾಬ್‌ ಪಾಷಾ: ನಮ್ಮ ತೆರಿಗೆ ರಸೀದಿಯಲ್ಲಿರುವ ವಿಳಾಸ ಬೇರೆ, ಇಲ್ಲಿ ರಸ್ತೆಗಳಲ್ಲಿ ಬರೆದಿರುವ ವಿವರ ಬೇರೆ. ಈ ಲೋಪದಿಂದಾಗಿ ಪಾಸ್‌ಪೋರ್ಟ್‌ ದಾಖಲೆ ಪರಿಶೀಲನೆ ವೇಳೆ ಸಮಸ್ಯೆ ಆಗುತ್ತಿದೆ.

ಅಬ್ದುಲ್‌ ವಾಜಿದ್‌: ಶೀಘ್ರ ಈ ಸಮಸ್ಯೆ ಬಗೆಹರಿಸುತ್ತೇವೆ

‘ರಸ್ತೆ– ಉದ್ಯಾನಕ್ಕೆ ಹೈಟೆಕ್‌ ಸ್ಪರ್ಶ’

‘ಆರ್‌.ಟಿ.ನಗರದ ಎಸಿಪಿ ಕಚೇರಿಯಿಂದ ಚೈತನ್ಯ ನರ್ಸಿಂಗ್‌ ಹೋಮ್‌ವರೆಗಿನ ಡಬಲ್‌ ರಸ್ತೆಯನ್ನು ಚರ್ಚ್‌ಸ್ಟ್ರೀಟ್‌ ಮಾದರಿಯಲ್ಲಿ ಕಾಬಲ್‌ ಸ್ಟೋನ್‌ ಬಳಸಿ ಹೈಟೆಕ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಅಬ್ದುಲ್‌ ವಾಜಿದ್‌ ತಿಳಿಸಿದರು.

‘ಈ ರಸ್ತೆಯಲ್ಲಿ ಉಚಿತ ವೈ–ಫೈ ಸಂಪರ್ಕ ಕಲ್ಪಿಸುವ ಹಾಗೂ ತಿಂಗಳಿಗೊಮ್ಮೆ ವಾಹನ ಸಂಚಾರ ನಿರ್ಬಂಧಿಸಿ ಮುಕ್ತ ದಿನ (ಓಪನ್‌ ಡೇ) ಆಚರಿಸುವ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು. ‘ವಾರ್ಡ್‌ನಲ್ಲಿ 150 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಆರ್‌.ಟಿ.ನಗರದ ಫ್ಲಾರೆನ್ಸ್‌ ಶಾಲೆ ಬಳಿಯ ಉದ್ಯಾನವನ್ನು ಹೈ–ಟೆಕ್‌ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.