ADVERTISEMENT

ಮುಖ್ಯ ಕಾರ್ಯದರ್ಶಿ ಆದೇಶಕ್ಕೆ ‘ಎಳ್ಳು ನೀರು‘

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 20:02 IST
Last Updated 7 ಫೆಬ್ರುವರಿ 2019, 20:02 IST

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಗಳಿಗೆ ನೇರವಾಗಿ ವರದಿ ಮಾಡಿಕೊಳ್ಳಬೇಕು ಎಂಬ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶಕ್ಕೆ ಜಲಸಂಪನ್ಮೂಲ ಇಲಾಖೆ ‘ಎಳ್ಳುನೀರು’ ಬಿಟ್ಟಿದೆ. ಇಲಾಖೆಯಿಂದ ಮರುಸ್ಥಳ ನಿಯೋಜನೆ ಆದೇಶ ಪಡೆದ ಬಳಿಕವೇ ಹುದ್ದೆ ವಹಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌, ಇಲಾಖಾ ಮುಖ್ಯಸ್ಥರು ಹಾಗೂ ಮುಖ್ಯ ಎಂಜಿನಿಯರ್‌ಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವರ್ಗಾವಣೆ ಮಾಡುತ್ತಿದೆ. ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ಸೇವೆಯನ್ನು ಕೆಲವೊಂದು ಇಲಾಖೆಯ ಅಧೀನದ ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೇಮಕ ಮಾಡಲು ಆಡಳಿತ ಇಲಾಖೆಯ ವಶಕ್ಕೆ ನೀಡಿ ಆದೇಶ ಹೊರಡಿಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಮರುಸ್ಥಳ ನಿಯುಕ್ತಿಗೊಳಿಸುವುದಕ್ಕೆ ಅಗತ್ಯಕ್ಕಿಂತ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಇದರಿಂದ ಅಧಿಕಾರಿಗಳ ಸೇವೆ ಬಳಸಿಕೊಳ್ಳಲು ತೊಡಕು ಉಂಟಾಗುತ್ತಿದೆ. ಈ ವರ್ಗಾವಣೆಗಳಿಗೆ ಮುಖ್ಯಮಂತ್ರಿಯೇ ಅನುಮೋದನೆ ನೀಡುತ್ತಿದ್ದಾರೆ, ಹೀಗಾಗಿ, ನೇರವಾಗಿ ವರದಿ ಮಾಡಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ 2018ರ ಅಕ್ಟೋಬರ್‌ 10ರಂದು ಆದೇಶ ಹೊರಡಿಸಿದ್ದರು.

‘ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸ್ಥಳ ನಿಯುಕ್ತಿಗೊಳಿಸಿದ ಬಳಿಕ ಅಧಿಕಾರಿಗಳು ನೇರವಾಗಿ ಹಾಜರಾಗುತ್ತಿದ್ದಾರೆ. ಇಲಾಖೆಯಿಂದ ಮರು ಸ್ಥಳ ನಿಯುಕ್ತಿ ಆದೇಶ ಪಡೆಯದೆ ಇರುವುದು ಸಚಿವರ ಗಮನಕ್ಕೆ ಬಂದಿದೆ. ಇನ್ನು ಮುಂದೆ, ಮುಖ್ಯ ಎಂಜಿನಿಯರ್‌ಗಳು ಹಾಗೂ ಎಲ್ಲ ವೃಂದದ ಅಧಿಕಾರಿಗಳು ಇಲಾಖೆಯಲ್ಲಿ ವರದಿ ಮಾಡಿಕೊಂಡು ಮರುಸ್ಥಳ ನಿಯುಕ್ತಿಗೆ ಮನವಿ ಸಲ್ಲಿಸಬೇಕು. ನಿಯುಕ್ತಿ ಆದೇಶ ಪಡೆದ ನಂತರ ಮಾತ್ರ ನಿಯೋಜಿಸಿದ ಹುದ್ದೆಯಲ್ಲಿ ಹಾಜರಾಗಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಜನವರಿ 29ರಂದು ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

‘ಮುಖ್ಯ ಕಾರ್ಯದರ್ಶಿ ಆದೇಶಕ್ಕೆ ವಿರುದ್ಧವಾಗಿ ಸುತ್ತೋಲೆ ಹೊರಡಿಸುವ ಅಧಿಕಾರ ಇಲಾಖಾ ಮುಖ್ಯಸ್ಥರಿಗೆ ಇಲ್ಲ. ಇದೇ ಮೊದಲ ಬಾರಿಗೆ ಇಂತಹ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.