ಬೆಂಗಳೂರು: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಪ್ರವಾಹ ಹಾಗೂ ಭೂಕುಸಿತದ ಸಂತ್ರಸ್ತರಿಗೆ ಅಕ್ಷಯ ಪಾತ್ರ ಫೌಂಡೇಷನ್ ವತಿಯಿಂದ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದು ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ನೂ ಒಂಬತ್ತು ಸಾವಿರ ಕಿಟ್ ತಲುಪಿಸಲು ಸಿದ್ಧತೆ ನಡೆಸಲಾಗಿದೆ. ಈ ದಿನಸಿ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಕಡಲೆಕಾಯಿ, ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಅರಿಶಿನ ಪುಡಿ, ಸಕ್ಕರೆ, ಉಪ್ಪು, ಬಿಸ್ಕತ್ತುಗಳು ಮತ್ತು ಓಆರ್‌ಎಸ್ ಪ್ಯಾಕೆಟ್‌ಗಳಂತಹ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಮೂರು ಜನರ ಕುಟುಂಬವು ಕನಿಷ್ಠ ಒಂದು ವಾರ ಈ ದಿನಸಿ ಕಿಟ್ ಬಳಸಿಕೊಳ್ಳಬಹುದು ಎಂದು ಅಕ್ಷಯ ಪಾತ್ರ ಫೌಂಡೇಷನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ ತಿಳಿಸಿದ್ದಾರೆ.
‘ಕಲ್ಪೆಟ್ಟಾದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಫೌಂಡೇಷನ್‌ನ ತಂಡ ಬೀಡು ಬಿಟ್ಟಿದ್ದು, ಎಲ್ಲಾ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಡೆಸುತ್ತಿದೆ. ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಬೇಯಿಸಿದ ಊಟವನ್ನು ನೀಡುವ ಕುರಿತಾಗಿ ಅಕ್ಷಯ ಪಾತ್ರ ಫೌಂಡೇಷನ್ ದಾರಿ ಹುಡುಕುತ್ತಿದೆ’ ಎಂದಿದ್ದಾರೆ.
‘ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಮಹತ್ವದ ನೆರವು ದೊರೆತಿದೆ. ದಾನಿಗಳು ಸಹಾಯವೂ ದೊರೆತಿದೆ. ತಕ್ಷಣದ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.