ADVERTISEMENT

ಕನ್ನಡದಲ್ಲೂ ಹವಾಮಾನ ಮಾಹಿತಿಗೆ ಸಾರ್ವಜನಿಕರ ಆಗ್ರಹ

ಕನ್ನಡ ತಿಳಿದವರ ಕೊರತೆಯಿಂದ ಮಾಹಿತಿಗೆ ಸಮಸ್ಯೆ

ಮನೋಹರ್ ಎಂ.
Published 26 ಮಾರ್ಚ್ 2021, 19:38 IST
Last Updated 26 ಮಾರ್ಚ್ 2021, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಜನರಿಗೆ ಹವಾಮಾನ ಸ್ಥಿತಿಗತಿಯ ಮುನ್ಸೂಚನೆ ಹಾಗೂ ವರದಿ ನೀಡಲು ಹವಾಮಾನ ಇಲಾಖೆಯು ರಾಜ್ಯವಾರು ಜಾಲತಾಣಗಳನ್ನು ಅಭಿವೃದ್ಧಿಪಡಿಸಿದೆ. ಬೆಂಗಳೂರು ಹವಾಮಾನ ಇಲಾಖೆ ಜಾಲತಾಣದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರ ಹವಾಮಾನ ವರದಿ ಸಿಗುತ್ತಿದ್ದು, ಕನ್ನಡದಲ್ಲೂ ಮಾಹಿತಿ ಸಿಗಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿಬಂದಿದೆ.‌

ಹವಾಮಾನ ಇಲಾಖೆಯ ಬೆಂಗಳೂರು ಜಾಲತಾಣ www.imdbangalore.gov.inದಲ್ಲಿ ಪ್ರತಿದಿನವೂ ಹವಾಮಾನ ವರದಿ ಅಪ್‌ಡೇಟ್‌ ಮಾಡಲಾಗುತ್ತಿದೆ. ಹವಾಮಾನ ಇಲಾಖೆಯಲ್ಲಿ ಕನ್ನಡ ಗೊತ್ತಿಲ್ಲದ ಸಿಬ್ಬಂದಿಯೇ ಹೆಚ್ಚು. ಇದರಿಂದಾಗಿ ಕನ್ನಡದಲ್ಲೇ ನಿರಂತರವಾಗಿ ಹವಾಮಾನ ಮಾಹಿತಿ ನೀಡಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.

‘ರಾಜ್ಯದಲ್ಲಿಮುಂದಿನ ವಾರ ಮಳೆ ಬರುತ್ತದೆಯೇ ಎಂದು ತಿಳಿಯಬೇಕಾಗಿತ್ತು. ಇದಕ್ಕಾಗಿ ಬೆಂಗಳೂರಿನ ಹವಾಮಾನ ಇಲಾಖೆಯ ಜಾಲತಾಣ ತೆರೆದಾಗ, ಅದು ಪೂರ್ತಿ ಇಂಗ್ಲಿಷ್ ಮತ್ತು ಹಿಂದಿಮಯವಾಗಿತ್ತು. ಕನ್ನಡದ ಒಂದು ಚಿಕ್ಕ ಕೊಂಡಿ ಇದೆ. ಅದರ ಮೂಲಕ ಹೋದರೂ, ಬೆಂಗಳೂರು ಹಾಗೂ ರಾಜ್ಯದ ಮುನ್ಸೂಚನೆಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲೇ ಡೌನ್‌ಲೋಡ್ ಆಗುತ್ತವೆ’ ಎಂದು ಬೆಂಗಳೂರಿನ ನಿವಾಸಿ ರಾಜಾರಾಮ ಭಟ್ ತಿಳಿಸಿದರು.

ADVERTISEMENT

‘ಕುತೂಹಲದಿಂದ ಹವಾಮಾನ ಇಲಾಖೆಯ ಚೆನ್ನೈ ಜಾಲತಾಣ ತೆಗೆದು ನೋಡಿದರೆ, ಅಲ್ಲಿನ ಬಹುಪಾಲು ಹವಾಮಾನ ಮಾಹಿತಿ ತಮಿಳು ಭಾಷೆಯಲ್ಲಿದೆ. ಕನ್ನಡಿಗರಿಗೆ ಕನ್ನಡದಲ್ಲೇ ಹವಾಮಾನದ ಬಗ್ಗೆ ಮಾಹಿತಿ ಬೇಡವೇ? ಕನ್ನಡದಲ್ಲೇ ಮಾಹಿತಿ ಸಿಕ್ಕರೆ ರೈತರಿಗೂ ಅನುಕೂಲವಲ್ಲವೇ?’ ಎಂದು ಪ್ರಶ್ನಿಸಿದರು.

‘ಕನ್ನಡದಲ್ಲಿ ಹವಾಮಾನ ಮಾಹಿತಿ ನೀಡಲು ಅಭ್ಯಂತರವಿಲ್ಲ. ಈಗಾಗಲೇ ಬೆಂಗಳೂರು ಹವಾಮಾನ ಇಲಾಖೆ ಜಾಲತಾಣದಲ್ಲಿ ಕನ್ನಡದಲ್ಲೂ ವರದಿ ಪ್ರಕಟಿಸುವ ಪ್ರಯತ್ನ ಮಾಡಿದ್ದೇವೆ. ಇಲಾಖೆಯು ಕೇಂದ್ರ ಸರ್ಕಾರದ ಸ್ವಾಮ್ಯದಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಬ್ಬಂದಿಯಲ್ಲಿ ಬಹುತೇಕರು ಬೇರೆ ರಾಜ್ಯದವರಿದ್ದಾರೆ. ಇವರಲ್ಲಿ ಕನ್ನಡ ತಿಳಿದವರು ಕಡಿಮೆ. ಇದರಿಂದ ನಿರಂತರವಾಗಿ ಎಲ್ಲ ಮಾಹಿತಿ ಕನ್ನಡದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಉಸ್ತುವಾರಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡ ತಿಳಿದವರುಕರ್ತವ್ಯದಲ್ಲಿದ್ದಾಗ ಮಾತ್ರ ಹವಾಮಾನ ಮಾಹಿತಿ ಕನ್ನಡದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತಿದೆ. ಇನ್ನು ಮುಂದೆ ನಿರಂತರವಾಗಿ ಕನ್ನಡದಲ್ಲೇ ಹವಾಮಾನ ವರದಿ ನೀಡಲು ಪ್ರಯತ್ನಿಸಲಾಗುವುದು’ ಎಂದೂ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.