ADVERTISEMENT

ಜೈಲಿನಿಂದ ಬಿಡುಗಡೆಯಾದ ಇಮಾಮ್‌ಗೆ ಸ್ವಾಗತ

ಐಎಂಎ ವಂಚನೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಅಜೀಜ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 19:36 IST
Last Updated 13 ಡಿಸೆಂಬರ್ 2019, 19:36 IST
ಮೌಲ್ವಿ ಅಜೀಜ್‌
ಮೌಲ್ವಿ ಅಜೀಜ್‌   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಶಿವಾಜಿನಗರ ಬೇಪಾರಿ ಮಸೀದಿ ಇಮಾಮ್‌ ಮೊಹಮ್ಮದ್‌ ಹನೀಫ್‌ ಅಫ್ಸರ್‌ ಅಜೀಜ್‌ ಅವರನ್ನು ಅನುಯಾಯಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಅಜೀಜ್‌ ಅವರನ್ನು ಮೆರವಣಿಗೆಯಲ್ಲಿ ಮಸೀದಿಗೆ ಕರೆತಂದು ಗೌರವ ಸಲ್ಲಿಸಲಾಯಿತು. ಮಸೀದಿಯಲ್ಲಿ ಕಿಕ್ಕಿರಿದಿದ್ದ ಬೆಂಬಲಿಗರಿಗೆ ಇಮಾಮ್‌ ಕೃತಜ್ಞತೆ ಸಲ್ಲಿಸಿದರು. ‘ನನ್ನ ಬಿಡುಗಡೆಗಾಗಿ ನೀವೆಲ್ಲರೂ ಪ್ರಾರ್ಥಿಸಿದ್ದೀರಿ. ಅದಕ್ಕಾಗಿ ಕೃತಜ್ಞತೆಗಳು’ ಎಂದು ಅವರು ನುಡಿದರು. ಮೌಲ್ವಿಅವರನ್ನು ಸ್ವಾಗತಿಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಐಎಂಎ ವಂಚನೆಯಲ್ಲಿ ಅಜೀಜ್‌ ಅವರ ಪಾತ್ರ ಕುರಿತು ಸಿಬಿಐ ತನಿಖೆ ಪೂರ್ಣಗೊಳಿಸಿದ್ದು, ಪ್ರಕರಣದ ಪ್ರಮುಖ ಆರೋಪಿ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ₹ 1.05 ಕೋಟಿ ಪಾವತಿಸಿ ಇಮಾಮ್‌ ಹೆಸರಿನಲ್ಲಿ ಎಚ್‌ಬಿಆರ್‌ ಬಡಾವಣೆಯಲ್ಲಿ ಖರೀದಿಸಿರುವ ಮನೆ ಮತ್ತು ಅದಕ್ಕೆ ಸಂಬಂಧಿ
ಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂಬ ಕಾರಣದ ಮೇಲೆ ಅಜೀಜ್‌ ಅವರಿಗೆ ಸಿಬಿಐ ಕೋರ್ಟ್‌ ಜಾಮೀನು ನೀಡಿದೆ.

ADVERTISEMENT

‘ಎಚ್‌ಬಿಆರ್‌ ಬಡಾವಣೆಯಲ್ಲಿ ಮನೆ ಖರೀದಿಸಲು ಕಂಪನಿಯ ಹಣ ಬಳಸಿಲ್ಲ. ಈ ಹಣವನ್ನು ಪ್ರಮುಖ ಆರೋಪಿ ಸಂಬಂಧಿಕರು ಮತ್ತು ಸ್ನೇಹಿತರು ಕೊಟ್ಟಿದ್ದಾರೆ. ಅಲ್ಲದೆ, ಆರೋಪಿ ಗೌರವಾನ್ವಿತ ನಾಗರಿಕರಾಗಿದ್ದು, ಜಾಮೀನು ಕೊಟ್ಟರೆ ದೇಶ ಬಿಟ್ಟು ಓಡಿಹೋಗುವುದಿಲ್ಲ. ಪ್ರಕರಣದಲ್ಲಿ ಅವರನ್ನು ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಕೋರ್ಟ್‌ ಜಾಮೀನು ಕೊಟ್ಟಿದೆ. ಇಮಾಮ್‌ ಅವರನ್ನು ಜುಲೈ 11ರಂದು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಇಮಾಮ್‌ ಸೇರಿದಂತೆ ಇದುವರೆಗೆ 11 ಆರೋಪಿಗಳಿಗೆ ಸಿಬಿಐ ಕೋರ್ಟ್‌ ಜಾಮೀನು ನೀಡಿದೆ. ತಲಾ ₹ 5 ಲಕ್ಷದ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತೆಯನ್ನು ಮತ್ತೊಬ್ಬರಿಂದ ಕೊಡಿಸಿ ಆರೋಪಿಗಳು ಬಿಡುಗಡೆ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.