ADVERTISEMENT

ಆನ್‌ಲೈನ್ ಸ್ನೇಹಿತನ ಜೊತೆ ಪತ್ನಿ ಪರಾರಿ: ಪತಿ ದೂರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:59 IST
Last Updated 4 ಫೆಬ್ರುವರಿ 2023, 16:59 IST
   

ಬೆಂಗಳೂರು: ‘ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯ ಜೊತೆ ಪತ್ನಿ ಪರಾರಿಯಾಗಿದ್ದು, ಅವಳನ್ನು ಹುಡುಕಿಕೊಡಿ’ ಎಂದು ಪತಿಯೊಬ್ಬರು ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯ ನಿವಾಸಿಯಾಗಿರುವ 39 ವರ್ಷದ ವ್ಯಕ್ತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ದೂರುದಾರ, ಜಾರ್ಖಂಡ್‌ನ ಯುವತಿಯನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಪತಿಯೇ ಪತ್ನಿಗೆ ಮೊಬೈಲ್ ಕೊಡಿಸಿದ್ದರು. ಹಲವು ಸಾಮಾಜಿಕ ಮಾಧ್ಯಮಗಳ ಆ್ಯಪ್‌ಗಳಲ್ಲಿ ಖಾತೆ ತೆರೆದಿದ್ದ ಪತ್ನಿ, ವಿಡಿಯೊ ಹಾಗೂ ಫೋಟೊ ಅಪ್‌ಲೋಡ್ ಮಾಡುತ್ತಿದ್ದರು. ಅವರ ಫೋಟೊಗಳಿಗೆ ದೆಹಲಿಯ ದೀಪಕ್ ಎಂಬುವರು ಕಾಮೆಂಟ್ ಮಾಡುತ್ತಿದ್ದರು.’

‘ದೂರುದಾರರ ಪತ್ನಿಗೆ ಸಂದೇಶ ಕಳುಹಿಸಲಾರಂಭಿಸಿದ್ದ ದೀಪಕ್, ಆತ್ಮೀಯವಾಗಿ ಮಾತನಾಡುತ್ತಿದ್ದರು. ಪತ್ನಿ ಸಹ ದೀಪಕ್ ಜೊತೆ ಚಾಟಿಂಗ್ ಮಾಡಲಾರಂಭಿಸಿದ್ದರು. ಇಬ್ಬರ ನಡುವೆ ಸಲುಗೆ ಸಹ ಬೆಳೆದಿತ್ತು. ಪರಸ್ಪರ ವಿಡಿಯೊ ಕರೆ ಸಹ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇತ್ತೀಚೆಗೆ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ದೀಪಕ್, ದೂರುದಾರರ ಪತ್ನಿಯನ್ನು ಭೇಟಿಯಾಗಿದ್ದರು. ಈ ಸಂಗತಿ ಗೊತ್ತಾಗುತ್ತಿದ್ದಂತೆ ತಮ್ಮ ಪತ್ನಿಗೆ ದೂರುದಾರ ತಾಕೀತು ಮಾಡಿದ್ದರು.’

‘ಜ. 26ರಂದು ನೀರಿನಲ್ಲಿ ಮೊಬೈಲ್ ಎಸೆದಿದ್ದ ಪತ್ನಿ, ಅಂದೇ ಮನೆ ಬಿಟ್ಟು ಹೋಗಿದ್ದಾರೆ. ದೀಪಕ್‌ ಜೊತೆಯಲ್ಲಿ ಪತ್ನಿ ತೆರಳಿರುವುದಾಗಿ ದೂರುದಾರರು ಹೇಳುತ್ತಿದ್ದಾರೆ. ದೀಪಕ್‌ ಎಲ್ಲಿದ್ದಾರೆ ? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.