ADVERTISEMENT

ಯತ್ನಾಳ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ ಸವಾಲು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 21:15 IST
Last Updated 16 ಮಾರ್ಚ್ 2020, 21:15 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ‘ಎಚ್‌.ಡಿ.ದೇವೇಗೌಡರು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ ಎಂದು ಬಿಜೆಪಿಯ ಬಸನಗೌಡ ಯತ್ನಾಳ ಹೇಳಿದ್ದಾರೆ. ಅದನ್ನು ಅವರು ಸಾಬೀತುಪಡಿಸಿದರೆ ಆ ಕ್ಷಣವೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದುಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸವಾಲು ಎಸೆದರು.

ವಿಧಾನಸಭೆಯಲ್ಲಿ ಸೋಮವಾರ ಸಂವಿಧಾನದ ಮೇಲಿನ ಚರ್ಚೆ ವೇಳೆ,‘ಚುನಾವಣೆ ವೇಳೆಯಲ್ಲಿ ದೇವೇಗೌಡರು ರಾಜಾಜಿನಗರದ ಬಡ್ಡಿ ಜನ್ನಪ್ಪ ಅವರಿಗೆ ಚೆಕ್‌ ನೀಡಿ ₹5 ಲಕ್ಷ ಸಾಲ ತಂದಿದ್ದರು. ಆ ಹಣವನ್ನು ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಬಳಸಿದ್ದರು. ಸಾವಿರಾರು ಕೋಟಿ ಮಾಡಿದ್ದರೆ ಸಾಲ ತರುವ ಅಗತ್ಯ ಇತ್ತೇ’ ಎಂದು ಪ್ರಶ್ನಿಸಿದರು.

’ಆಯಕಟ್ಟಿನ ಹುದ್ದೆಗಳಿಗೆ ವರ್ಗಾವಣೆ ಮಾಡಿಕೊಡುವಂತೆ ಕೆಲವರು ನನ್ನ ಬಳಿ ಬಂದಿದ್ದರು. ಅವರನ್ನು ನಾನು ದೂರ ಇಟ್ಟಿದ್ದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಅವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ’ ಎಂದು ದೂರಿದರು.

ADVERTISEMENT

‘ನಾವೆಲ್ಲ ಹೇಳುವುದು ಆಚಾರ. ತಿನ್ನುವುದು ಬದನೆಕಾಯಿ. ಚುನಾವಣೆ ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪೋಸ್ಟರ್‌, ಹ್ಯಾಂಡ್‌ ಬಿಲ್‌ ಕೊಟ್ಟರೆ ಬದಿಗಿಡಣ್ಣ ಎಂದು ಕಾರ್ಯಕರ್ತರು ಹೇಳುತ್ತಾರೆ. ಬೂತ್‌ಗೆ ಎಷ್ಟು ಹಣ ಕಳುಹಿಸಿದಿಯಣ್ಣ ಎಂದೂ ಪ್ರಶ್ನೆ ಮಾಡುತ್ತಾರೆ. ಹೀಗಿದೆ ನಮ್ಮ ಸ್ಥಿತಿ’ ಎಂದರು.

‘2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಯ ನೇಮಕಾತಿಯನ್ನು ತಡೆಹಿಡಿದಿದ್ದು ಯಾಕೆ. ಆ ಬ್ಯಾಚ್‌ನವರು ಮಾತ್ರ ಅಕ್ರಮ ಮಾಡಿದ್ದಾರೆಯೇ. ಉಳಿದೆಲ್ಲ ನೇಮಕಾತಿಗಳೆಲ್ಲ ಪರಿಶುದ್ಧವಾಗಿ ನಡೆಯುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.