ADVERTISEMENT

ನಿರ್ದಿಷ್ಟ ದಿನವೇ ಗೃಹಲಕ್ಷ್ಮಿ ಹಣ ಪಾವತಿ ಎಂದಿಲ್ಲ: ಡಿ.ಕೆ. ಶಿವಕುಮಾರ್‌

ಸರ್ಕಾರಿ ನೌಕರರ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 16:28 IST
Last Updated 20 ಫೆಬ್ರುವರಿ 2025, 16:28 IST
<div class="paragraphs"><p>ಡಿ.ಕೆ. ಶಿವಕುಮಾರ್‌</p></div>

ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ‘ಬೆಲೆಗಳೆಲ್ಲ ಗಗನಕ್ಕೆ ಏರಿತ್ತು. ಆದಾಯ ಪಾತಾಳಕ್ಕೆ ಇಳಿದಿತ್ತು. ಇಂಥ ಸಮಯದಲ್ಲಿ ಪ್ರತಿ ಕುಟುಂಬದ ಮಹಿಳೆಗೆ ₹ 2000 (ಗೃಹಲಕ್ಷ್ಮಿ) ನೀಡಲು ನಿರ್ಧರಿಸಿದ್ದೆವು. ನಿರ್ದಿಷ್ಟವಾಗಿ ಇಂಥದ್ದೇ ದಿನ ಪಾವತಿ ಮಾಡುವುದಾಗಿ ಹೇಳಿರಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ–ತಾಲ್ಲೂಕು ಶಾಖೆಗಳ ನಿರ್ದೇಶಕರು, ಪದಾಧಿಕಾರಿಗಳ ಸಮಾವೇಶದಲ್ಲಿ ಗುರುವಾರ ಅವರು ಮಾತನಾಡಿದರು.

ADVERTISEMENT

‘ಮಹಿಳೆಯರ ಖಾತೆಗೆ ಹಣ ಹಾಕುತ್ತೇವೆ. ನಾವೇನು ಯಾರಿಗೂ ತಪ್ಪಿಸುವುದಿಲ್ಲ. ಅಧಿಕಾರಿಗಳು ಆದಾಯ ಸಂಗ್ರಹಿಸಿ‌ ನೀಡಿದ ಹಾಗೇ ಜನರ ಖಾತೆಗೆ ಹಾಕುತ್ತಾ ಹೋಗುತ್ತೇವೆ. 4 ಕೋಟಿ ಜನರಿಗೆ ಸಹಾಯ ಮಾಡುವುದಕ್ಕಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ’ ಎಂದು ಹೇಳಿದರು.

‘ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ಎಲ್ಲ ಜಾತಿ, ಸಮುದಾಯಗಳು ಬೇಕು. ಮಾನವೀಯತೆಯ ಮೆಲೆ ನಂಬಿಕೆ ಇಟ್ಟಿದ್ದೇನೆ. ನೌಕರರನ್ನು ಬಲಿ ಕೊಡುವುದಿಲ್ಲ. ನೀವು ಕೂಡ ನಂಬಿಕೆ ಉಳಿಸಿಕೊಂಡು ಜನರ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರ’ದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಮಾತನಾಡಿ, ‘ಮೂಲಸೌಕರ್ಯದ ಕೊರತೆ, ಸಿಬ್ಬಂದಿ ಕೊರತೆ ಇನ್ನಿತರ ಸಮಸ್ಯೆಗಳಿಂದ ಜನರಿಗೆ ಸೇವೆ ನೀಡಲು ಸಮಸ್ಯೆಯಾಗಿ ಲೋಕಾಯುಕ್ತಕ್ಕೆ ಪ್ರಕರಣಗಳು ಬಂದಾಗ ನಾವು ಮಾನವೀಯ ದೃಷ್ಟಿಯಿಂದ ನೋಡುತ್ತೇವೆ. ಆದರೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವ ನಿರ್ಲಕ್ಷ್ಯಗಳು ಅಥವಾ ಕೆಲಸಗಳು ನಡೆದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಮಾಹಿತಿ ಹಕ್ಕು ಅಧಿನಿಯಮ (2005) ಸವಾಲುಗಳು–ಪರಿಹಾರಗಳು ಬಗ್ಗೆ ಕಲಬುರಗಿ ಪೀಠ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಧಾಕಪ್ಪ ಮಾತನಾಡಿ, ‘ಕಾಯ್ದೆಯನ್ನು ಶೇ 90ರಷ್ಟು ಸರ್ಕಾರಿ ನೌಕರರು ಓದದೇ ಇರುವುದರಿಂದ ಮಾಹಿತಿ ಹಕ್ಕು ಎಂದ ಕೂಡಲೇ ಅಲರ್ಜಿ ತರಹ ವರ್ತಿಸುತ್ತಿದ್ದಾರೆ. ನೌಕರರ ನಡುವೆ ಒಗ್ಗಟ್ಟು ಇಲ್ಲದೇ ಒಬ್ಬರು ಇನ್ನೊಬ್ಬರ ಮೇಲೆ ಮಾಹಿತಿ ಹಕ್ಕು ಅರ್ಜಿ ಹಾಕಿಸುವ ಕಾರ್ಯಗಳೂ ನಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕಿನ ಅಡಿಯಲ್ಲಿ ಮೂರು ರೀತಿಯ ಅರ್ಜಿಗಳು ಬರುತ್ತವೆ. ವೈಯಕ್ತಿಕ ಸಮಸ್ಯೆಯ ಕಾರಣಕ್ಕೆ, ಸಾರ್ವಜನಿಕ ಹಿತಾಸಕ್ತಿಗಾಗಿ ಹಾಗೂ ಉದರ ನಿಮಿತ್ತಕ್ಕೆ ಅರ್ಜಿಗಳು ಬರುತ್ತವೆ. ಯಾವ ರೀತಿಯದ್ದು ಎಂದು ಅರ್ಜಿ ನೋಡಿದ ಕೂಡಲೇ ಗುರುತಿಸಬೇಕು. ಯಾವುದು ಮಾಹಿತಿ ನೀಡಬಹುದು ಎಂಬುದರ ಕಾನೂನಿನ ಅರಿವು ಇದ್ದರೆ ಮಾಹಿತಿ ಒದಗಿಸುವುದು ಕಷ್ಟದ ಕೆಲಸವಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಬಂದ ಬಳಿಕ ಒಪಿಎಸ್‌ ಜಾರಿಗೆ ಕ್ರಮ

ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಜಾರಿ ಮಾಡಬೇಕು ಎಂಬುದು ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಅದಕ್ಕಾಗಿ ಅಂಜುಂ ಪರ್ವೇಜ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವರ್ಚುವಲ್‌ ರೂಪದಲ್ಲಿ ಪಾಲ್ಗೊಂಡ ಅವರು ‘ಎನ್‌ಪಿಎಸ್‌ ಸಮಿತಿಯೊಂದಿಗೆ ಅಂತಿಮ ಸಭೆ ನಡೆಸಲಾಗಿದೆ. ಅವರು ನೀಡುವ ವರದಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಒಪಿಎಸ್‌ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ₹ 1 ಕೋಟಿ ವಿಮೆ  ಸೌಲಭ್ಯ ಹಾಗೂ ಕಡಿಮೆ ಬಡ್ಡಿಯಲ್ಲಿ ಸಾಲಸೌಲಭ್ಯ ನೀಡುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಿ ಜಾರಿಗೆ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.