ADVERTISEMENT

ಕರ್ನಾಟಕ ಪತ್ರಕರ್ತೆಯರ ಸಂಘಕ್ಕೆ ಚಾಲನೆ

ಹಿರಿಯ–ಕಿರಿಯ ಪತ್ರಕರ್ತೆಯರ ಸಮಾಗಮ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 11:12 IST
Last Updated 23 ಮಾರ್ಚ್ 2019, 11:12 IST
ಹಿರಿಯ ಪರ್ತಕರ್ತೆ ನಾಗಮಣಿ ಎಸ್‌.ರಾವ್‌  ಕರ್ನಾಟಕ ಪತ್ರಕರ್ತೆಯರ ಸಂಘದ ಲೋಗೊ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತೆ ವಿಜಯಾ, ಪ್ರೊ.ಉಷಾರಾಣಿ ನಾರಾಯಣ್, ಪತ್ರಕರ್ತೆ ಕಲ್ಪನಾ ಶರ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಇದ್ದಾರೆ –ಪ್ರಜಾವಾಣಿ ಚಿತ್ರ
ಹಿರಿಯ ಪರ್ತಕರ್ತೆ ನಾಗಮಣಿ ಎಸ್‌.ರಾವ್‌  ಕರ್ನಾಟಕ ಪತ್ರಕರ್ತೆಯರ ಸಂಘದ ಲೋಗೊ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತೆ ವಿಜಯಾ, ಪ್ರೊ.ಉಷಾರಾಣಿ ನಾರಾಯಣ್, ಪತ್ರಕರ್ತೆ ಕಲ್ಪನಾ ಶರ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ವಿವಿಧೆಡೆಯ ಹಿರಿಯ –ಕಿರಿಯ ಪತ್ರಕರ್ತೆಯರ ಸಮಾಗಮವೇ ಅಲ್ಲಿ ನಡೆದಿತ್ತು. ಅವರೆಲ್ಲ ಬಗೆಯ ಬಗೆಯ ಉಡು‍ಪು ತೊಟ್ಟು, ಮೊಗದಲ್ಲಿ ಲಘು ಲಾಸ್ಯವಿಟ್ಟುಸಂಘಟಿತರಾಗುವತ್ತ ಹೆಜ್ಜೆ ಹಾಕುತ್ತಿದ್ದರು. ನಮ್ಮಧ್ವನಿಗೊಂದು ವೇದಿಕೆ ನಿರ್ಮಾಣವಾಯಿತಲ್ಲ ಎಂಬ ಹರ್ಷ ಅವರಲ್ಲಿ ಎದ್ದು ಕಾಣುತ್ತಿತ್ತು.

ಹೌದು. ನಗರದಲ್ಲಿಶನಿವಾರ ಕರ್ನಾಟಕ ಪತ್ರಕರ್ತೆಯರ ಸಂಘ ಲೋಕಾರ್ಪಣೆಗೊಂಡಿತು.

ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪುರುಷರಷ್ಟೇ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದರೂ ಇಂದಿಗೂ ಕೂಡ ಪತ್ರಕರ್ತೆಯರಿಗೆ ಸಮಾನ ವೇತನ, ಉನ್ನತ ಸ್ಥಾನಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಮಹಿಳೆಯರಿಗೆವೃತ್ತಿಪರ ಸ್ಥಾನಮಾನ ಹಾಗೂ ಗೌರವ ಸಿಗುವಂತಾಗಬೇಕು. ಮಾಧ್ಯಮಗಳಲ್ಲಿ ಮಹಿಳೆಯರನ್ನು ಸುದ್ದಿಯ ಸರಕಾಗಿ ಬಳಕೆ ಮಾಡುವ ಬದಲು, ಅವರ ಸಮಸ್ಯೆ, ಸಾಧನೆಗಳಿಗೆ ಧ್ವನಿಯಾಗಬೇಕು’ ಎಂದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಉಷಾರಾಣಿ ನಾರಾಯಣ್‌, ‘ಜಾಗತೀಕರಣದಿಂದಾಗಿ ಸಾಮಾಜಿಕ ನ್ಯಾಯ, ಹಾಗೂ ಮಹಿಳೆಯರ ವಿಚಾರಗಳಿಗೆ ದೊಡ್ಡ ಆಘಾತವುಂಟಾಗಿದೆ.ಮಾಧ್ಯಮಗಳು ಕಾರ್ಪೋರೆಟ್‌ ಹಿಡಿತಕ್ಕೊಳಪಟ್ಟಿದ್ದು, ಮಹಿಳಾ ವಿಚಾರಗಳನ್ನು ದೂರವಿಡುತ್ತಿವೆ. ಮಹಿಳೆಯರು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಶತಮಾನಗಳೇ ಗತಿಸಿವೆ. ಇಂದಿಗೂ ಮಾಧ್ಯಮಗಳಲ್ಲಿ ಸ್ತ್ರೀ ದೃಷ್ಠಿಯನ್ನು ಹುಡುಕುತ್ತಲೆ ಇದ್ದೇವೆ. ಪರ್ತಕರ್ತೆಯರಿಗೆ ಉನ್ನತ ಸ್ಥಾನಮಾನಗಳು ಸಿಗುತ್ತಿವೆ. ಆದರೆ, ಅವಳನ್ನು ಕಾವಲು ಕಾಯುವುದರಿಂದ ಹೊರಬರಬೇಕಿ‌ದೆ’ ಎಂದು ಹೇಳಿದರು.

ಮಡಿವಂತಿಕೆ ಬಿಡಿ: ‘ಪರ್ತಕರ್ತೆಯರು ಹೋರಾಟಗಾರ್ತಿಯರಾದರೆ ಅಂಥವರನ್ನು ದೂರವಿಡುವ ಮಡಿವಂತಿಕೆ ಧೋರಣೆಯನ್ನು ಮಾಧ್ಯಮಗಳು ಅನುಸರಿಸುತ್ತಿವೆ. ಮುಖ್ಯವಾಹಿನಿಯ ಪತ್ರಿಕೆಗಳು ಇಂಥದ್ದನ್ನು ಬಿಡಬೇಕು. ಸಹಿಸಿಕೊಳ್ಳುವ ಶಕ್ತಿ, ಸೂಕ್ಷ್ಮ ಸಂವೇದನಾಶೀಲತೆ ಸಂಪಾದಕರಿಗೆ ಇರಬೇಕು. ಇಂದು, ಲಿಂಗ ಸಂವೇದನೆಯ ಮಾಧ್ಯಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ತ್ರೀದೃಷ್ಠಿಯ ಸಂವೇದನೆಗಳನ್ನು ಹುಟ್ಟುಹಾಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪರ್ತಕರ್ತೆ ವಿಜಯಮ್ಮ, ‘ಸಂಘ ಕಟ್ಟಬೇಕೆಂಬ ಬಹುದಿನಗಳ ಕನಸು ಇದೀಗ ಸಾಕಾರಗೊಂಡಿದೆ. ಪತ್ರಕರ್ತೆಯರ ನಿಲುವುಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಅಂಟಿಕೊಳ್ಳಬಾರದು. ಸ್ಪಷ್ಟವಾದ ಹಾಗೂ ತಾತ್ವಿಕ ನಿಲುವು ನಮ್ಮದಾಗಬೇಕು. ನಮ್ಮ ಸಮಸ್ಯೆ, ಸವಾಲುಗಳನ್ನು ಸಮಾಜದ ಮುಂದೆ ಬಿಚ್ಚಿಡುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಸಂಘಯಶಸ್ವಿಯಾಗಿ ಬೆಳೆಯುವಲ್ಲಿ ಎಲ್ಲರೂ ಶ್ರಮಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.