ಬೆಂಗಳೂರು: ‘ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ರಾಜಕೀಯ ಪಕ್ಷಗಳು ಸಮರ್ಥ ಮಹಿಳೆಯರನ್ನು ಪಕ್ಷಕ್ಕೆ ಆಹ್ವಾನಿಸಿ ಸೂಕ್ತ ಅವಕಾಶ ಕೊಡಬೇಕು’ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರೂತ್ ಮನೋರಮಾ ಆಗ್ರಹಿಸಿದರು.
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಮಹಿಳಾ ಸಬಲೀಕರಣದ ಮಾರ್ಗಗಳು' ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
‘ರಾಜಕೀಯ ಶಕ್ತಿ ಬಂದರೆ ಮಾತ್ರ ಸಮಾಜದಲ್ಲಿ ಬೇರುಬಿಟ್ಟಿರುವ ಪುರುಷ ಪ್ರಾಬಲ್ಯವನ್ನು ಎದುರಿಸಲು ಮಹಿಳೆ
ಯರಿಗೆ ಸಾಧ್ಯವಾಗುತ್ತದೆ. ಮಹಿಳೆಯರ ಸಬಲೀಕರಣ ಆರ್ಥಿಕವಷ್ಟೇ ಅಲ್ಲ, ರಾಜಕೀಯ ಸವಾಲು ಕೂಡ ಆಗಿರುತ್ತದೆ’ ಎಂದರು.
‘ಅಸಂಘಟಿತ ವಲಯದ ಕಾರ್ಮಿಕರ ಸಬಲೀಕರಣ’ ಕುರಿತು ಮಾತನಾಡಿದ ಸ್ತ್ರೀ ಜಾಗೃತಿ ಸಮಿತಿಯ ಕಾರ್ಯಕರ್ತೆ ಗೀತಾ ಮೆನನ್, ‘ಕಡಿಮೆ ಕೂಲಿಗೆ ಕೆಲಸ ಮಾಡುವ ಮಹಿಳೆಯರು ಕೂಡ ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಾರೆ. ಆದರೆ ಅವರಿಗೆ ಪ್ರತಿಫಲವಾಗಿ ಸಿಗುವುದು ಅಸಮಾನತೆ ಮತ್ತು ಅಗೌರವಗಳು ಮಾತ್ರ’ ಎಂದು ವಿಷಾದಿಸಿದರು.
‘ಮಹಿಳೆಯರ ಭೂಮಿ ಹಕ್ಕು' ಕುರಿತು ಮಾತನಾಡಿದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಜ್ಯೋತಿ ರಾಜ್,‘ಎಪ್ಪತ್ತರ ದಶಕದಲ್ಲಿ ಜಾರಿಯಾದ ಭೂಮಿ ಹಕ್ಕು ಕಾಯಿದೆಗೆ ಈಗ ಮಹಿಳಾ ಆಯಾಮ ಕೊಡಬೇಕಿದೆ. ಜಮೀನು ಮತ್ತು ಮನೆಗೆ ಗಂಡ–ಹೆಂಡತಿ ಇಬ್ಬರಿಗೂ ಜಂಟಿ ಮಾಲೀಕತ್ವ ಕಡ್ಡಾಯ ಮಾಡಬೇಕಾಗಿದೆ. ಪ್ರತಿವರ್ಷ ಅ. 15 ರಂದು ಮಹಿಳಾ ರೈತರ ದಿನವೆಂದು ಆಚರಿಸಬೇಕು’ ಎಂದು ಒತ್ತಾಯಿಸಿದರು.
‘ಮಾಧ್ಯಮ ಈಗ ಬಹುಪಾಲು ಕಾರ್ಪೊರೇಟ್ ಕಂಪನಿಗಳ ಹಿಡಿತದಲ್ಲಿದೆ. ರಾಜಕೀಯ ವ್ಯಕ್ತಿಗಳ ಮಾಲೀಕತ್ವದಲ್ಲಿದೆ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅನಾದರ ಕಾಣುತ್ತಿದೆ. ಮಾಧ್ಯಮದಲ್ಲಿ ಸೂಕ್ಷ್ಮ ಸಂವೇದನೆ, ಸಮಾನತೆಯ ಪರಿಕಲ್ಪನೆ ಮಾಯವಾಗುತ್ತಿದೆ’ ಎಂದು ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಆತಂಕ ವ್ಯಕ್ತಪಡಿಸಿದರು. ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ನಿರ್ದೇಶಕಿ ರೇವತಿ ನಾರಾಯಣನ್ ಸಂವಾದವನ್ನು ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.