ADVERTISEMENT

‘ಕೋಮುವಾದಿ ಶಕ್ತಿಗಳ ವಿರುದ್ಧ ಮತ’

‘ಮಹಿಳೆಯರ ನಡಿಗೆ– ಭಾರತ’ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:32 IST
Last Updated 4 ಏಪ್ರಿಲ್ 2019, 19:32 IST
‘ಮಹಿಳೆಯರ ನಡಿಗೆ– ಭಾರತ’ ಆಂದೋಲನದ ಪ್ರಯುಕ್ತ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ
‘ಮಹಿಳೆಯರ ನಡಿಗೆ– ಭಾರತ’ ಆಂದೋಲನದ ಪ್ರಯುಕ್ತ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಲ್ಲಿ ಹೆಚ್ಚಾಗಿರುವ ದ್ವೇಷ ಹಾಗೂ ಭೀತಿಯಿಂದ ಹಿಂಸೆ ಅನುಭವಿಸುತ್ತಿರುವ ಮಹಿಳೆಯರು ಮತ್ತು ಅಂಚಿಗೆದೂಡಲ್ಪಟ್ಟ ಸಮುದಾಯದವರ ಧ್ವನಿಯಾಗಿ ದೇಶದಾದ್ಯಂತ ಹಮ್ಮಿಕೊಂಡಿರುವ ‘ಮಹಿಳೆಯರ ನಡಿಗೆ– ಭಾರತ’ ಆಂದೋಲನಕ್ಕೆ ಗುರುವಾರ ಚಾಲನೆ ದೊರೆಯಿತು.

‘ಬದಲಾವಣೆಗಾಗಿ ಮತ ಚಲಾಯಿಸೋಣ. ನಮ್ಮ ಗಣತಂತ್ರವನ್ನು ಮತ್ತೆ ಪಡೆಯೋಣ’ ಎಂಬ ಘೋಷವಾಕ್ಯದೊಂದಿಗೆ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆಂದೋಲನದ ಅಂಗವಾಗಿ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಏಪ್ರಿಲ್ 10ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಸೇರಿದ್ದ ಪ್ರಗತಿಪರರು ಹಾಗೂ ಹೋರಾಟಗಾರರು, ಆಂದೋಲನಕ್ಕೆ ಚಾಲನೆ ನೀಡಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ADVERTISEMENT

‘ಈ ಬಾರಿಯ ಲೋಕಸಭಾ ಚುನಾವಣೆ ಮಹತ್ವದ್ದಾಗಿದೆ. ಮನುವಾದಿ, ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳನ್ನು ಸೋಲಿಸಬೇಕಿದೆ. ಅಂಥ ಶಕ್ತಿಗಳ ವಿರುದ್ಧ ನಮ್ಮ ಮತ ಹಾಕಬೇಕಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ದೇಶದಲ್ಲಿಯ ಘಾಸಿವಾದ ಮತ್ತು ನವ ಉದಾರೀಕರಣ ಶಕ್ತಿಗಳು, ಮಹಿಳೆಯರು ಹಾಗೂ ಅಂಚಿಗೆದೂಡಲ್ಪಟ್ಟಿರುವ ಸಮುದಾಯಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಮುಸ್ಲಿಮರು, ದಲಿತರು ಮತ್ತು ಕ್ರೈಸ್ತರ ವಿರುದ್ಧ ಸುಳ್ಳು ಎನ್‌ಕೌಂಟರ್ ನಡೆಸಲಾಗುತ್ತಿದೆ. ಗೋ ರಕ್ಷಣೆ ನೆಪದಲ್ಲಿ ಸಾಮೂಹಿಕ ಹತ್ಯೆಗಳನ್ನು ಮಾಡಿಸಿ ದೇಶದಲ್ಲಿ ಭಯ ಮತ್ತು ಅಸುರಕ್ಷಿತ ವಾತಾವರಣವನ್ನು ನಿರ್ಮಿಸಲಾಗುತ್ತಿದೆ’ ಎಂದು ದೂರಿದರು.

‘ದಲಿತರು, ಬಡವರು, ರೈತರು ಸೇರಿದಂತೆ ಎಲ್ಲರಿಗೂ ಬಿಜೆಪಿ ಮೋಸ ಮಾಡಿದೆ. ಗೋವು, ಲವ್ ಜಿಹಾದ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಐದು ವರ್ಷಗಳು ಕಳೆದಿವೆ. ಇಂಥ ಸರ್ಕಾರದ ಬದಲಾವಣೆಗಾಗಿ ಮತ ಚಲಾಯಿಸಿ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ’ ಎಂದು ಹೇಳಿದರು.

2014ರಿಂದ ಗಲಾಟೆಗಳಾಗಿದ್ದೇ ಹೆಚ್ಚು: ಆಂದೋಲನದಲ್ಲಿ ಪಾಲ್ಗೊಂಡಿದ್ದ ನಿರ್ದೇಶಕಿ ಕವಿತಾ ಲಂಕೇಶ್, ‘2014ರಿಂದ ದೇಶದಲ್ಲಿ ಗಲಾಟೆಗಳೇ ಹೆಚ್ಚಾಗಿವೆ. ನನ್ನ ಅಕ್ಕ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ಕೆಲವರು ಸಂಭ್ರಮಿಸಿದ್ದರು.

ಅಷ್ಟೇ ಅಲ್ಲದೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗಲೂ ಸಂಭ್ರಮಿಸುವವರು ದೇಶದಲ್ಲಿ ಹೆಚ್ಚಾಗಿದ್ದಾರೆ’ ಎಂದು ದೂರಿದರು.

ಶಾಸಕಿ ಸೌಮ್ಯಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಐಪ್ಲಾ), ಗಾರ್ಮೆಂಟ್ಸ್ ಕಾರ್ಖಾನೆ ಮಹಿಳಾ ಕಾರ್ಮಿಕರ ಮುನ್ನಡೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಐಡ್ವಾ) ಹಾಗೂ ಇತರೆ ಸಂಘಟನೆಗಳ ನೇತೃತ್ವದಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.