ADVERTISEMENT

ಕಾರ್ಮಿಕರ ಬೃಹತ್ ಪಾದಯಾತ್ರೆ: ಕೇಂದ್ರ– ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 22:00 IST
Last Updated 4 ಮಾರ್ಚ್ 2021, 22:00 IST

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಸಾವಿರಾರು ಕಾರ್ಮಿಕರು ನಗರದಲ್ಲಿ ಗುರುವಾರ ಬೃಹತ್ ಪಾದಯಾತ್ರೆ ನಡೆಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ‘ಬಜೆಟ್ ಅಧಿವೇಶನ ಚಲೋ’ ಘೋಷಣೆಯಡಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾರ್ಖಾನೆಗಳ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಪಂಚಾಯತ್ ಗುತ್ತಿಗೆ ನೌಕರರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿದ್ದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ, ಮೇಲ್ಸೇತುವೆ ಹಾಗೂ ಶೇಷಾದ್ರಿ ರಸ್ತೆ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನೆ ಸಾಗಿತು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಈ ಕುರಿತ ಘೋಷಣಾ ಫಲಕಗಳನ್ನು ಪಾದಯಾತ್ರೆಯಲ್ಲಿ ಪ್ರದರ್ಶಿಸಿದರು. ವಿಧಾನಸೌಧದತ್ತ ಹೊರಟಿದ್ದ ಪಾದಯಾತ್ರೆಯನ್ನು, ಉದ್ಯಾನದಲ್ಲಿ ಪೊಲೀಸರು ತಡೆದರು. ಉದ್ಯಾನದಲ್ಲಿ ಸೇರಿದ ಪ್ರತಿಭಟನಕಾರರು, ಬಹಿರಂಗ ಸಭೆ ನಡೆಸಿದರು.

‘ದುಡಿಯುವ ವರ್ಗವನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಬಂಡವಾಳಶಾಹಿಗಳ ಪರ ಆಡಳಿತ ನಡೆಸುತ್ತಿವೆ. ಮಿತಿ ಮೀರಿರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ರೈತರು ಹಾಗೂ ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಖಂಡಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದೂ ಪ್ರತಿಭಟನಕಾರರು ಹೇಳಿದರು. ಪಾದಯಾತ್ರೆಯಿಂದಾಗಿ ಮೆಜೆಸ್ಟಿಕ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ವಾಹನಗಳ ಸಂಚಾರವೇ ಬಂದ್ ಆಗಿತ್ತು. ಇದರಿಂದಾಗಿ ವಾಹನಗಳ ದಟ್ಟಣೆ ಉಂಟಾಗಿ, ಸಾರ್ವಜನಿಕರು ಗಂಟೆಗಟ್ಟಲೇ ನಿಂತಲೇ ನಿಲ್ಲಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.