ADVERTISEMENT

ಹೆಸರಘಟ್ಟದಲ್ಲಿ ಮೀನು ಕ್ವಾರಂಟೈನ್‌ ಘಟಕ ಸ್ಥಾಪನೆ: ಬಿ.ಎಸ್‌.ಯಡಿಯೂರಪ್ಪ

ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:31 IST
Last Updated 21 ನವೆಂಬರ್ 2020, 20:31 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಸಂಸ್ಕರಿಸಿದ ಮೀನಿನ ಖಾದ್ಯ’ಗಳನ್ನು ಬಿಡುಗಡೆ ಮಾಡಿದರು. ಶಾಸಕರಾದ ಕೆ. ರಘುಪತಿ ಭಟ್‌, ಎಸ್‌. ಕುಮಾರ್‌ ಬಂಗಾರಪ್ಪ ಇದ್ದರು.
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಸಂಸ್ಕರಿಸಿದ ಮೀನಿನ ಖಾದ್ಯ’ಗಳನ್ನು ಬಿಡುಗಡೆ ಮಾಡಿದರು. ಶಾಸಕರಾದ ಕೆ. ರಘುಪತಿ ಭಟ್‌, ಎಸ್‌. ಕುಮಾರ್‌ ಬಂಗಾರಪ್ಪ ಇದ್ದರು.   

ಬೆಂಗಳೂರು: ಅಲಂಕಾರಿಕ ಮೀನು ಉತ್ಪಾದನೆಯನ್ನು ಉತ್ತೇಜಿಸುವುದಕ್ಕಾಗಿ ಹೆಸರಘಟ್ಟ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಮೀನು ಕ್ವಾರಂಟೈನ್‌ (ಜೀವಂತ ಸಂಗ್ರಹ) ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಕಟಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಲಂಕಾರಿಕ ಮೀನು ಮರಿಗಳ ಉತ್ಪಾದನೆ ಮತ್ತು ಮಾರಾಟ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ವ್ಯಾವಹಾರಿಕ ಶಿಸ್ತು ತರಲು ಮತ್ತು ರಫ್ತು ಚಟುವಟಿಕೆ ಉತ್ತೇಜಿಸಲು ಮೀನು ಕ್ವಾರಂಟೈನ್‌ ಘಟಕವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದರು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ₹ 137.19 ಕೋಟಿ ಮೊತ್ತದ ಕ್ರಿಯಾಯೋಜನೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ತನ್ನ ಪಾಲಿನ ಮೊದಲ ಕಂತಿನ ₹ 21.02 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. 23 ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನದ ಹಂತದಲ್ಲಿದೆ ಎಂದು ತಿಳಿಸಿದರು.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ₹ 251.57 ಕೋಟಿ ಅನುದಾನ ಒದಗಿಸಲಾಗಿದೆ. ಅದರಲ್ಲಿ ₹ 200 ಕೋಟಿಯನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಒದಗಿಸಲಾಗಿದೆ. ಕರಾವಳಿಯಲ್ಲಿ ಯಾಂತ್ರೀಕೃತ ದೋಣಿ
ಗಳ ಮೂಲಕ ಮೀನುಗಾರಿಕೆ ನಡೆಸುವವರಿಗೆ ₹ 135 ಕೋಟಿಗಳಷ್ಟು ಡೀಸೆಲ್‌ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವಆರ್‌. ಅಶೋಕ, ಶಾಸಕರಾದ ಕೆ. ರಘುಪತಿ ಭಟ್‌, ಎಸ್‌. ಕುಮಾರ್‌ ಬಂಗಾರಪ್ಪ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ನಿರ್ದೇಶಕ ರಾಮಾಚಾರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.