ADVERTISEMENT

ಜಿಲ್ಲಾ ಆಸ್ಪತ್ರೆಗಳಲ್ಲಿ ನೇತ್ರ ಸಂಗ್ರಹಣಾ ಕೇಂದ್ರ ಸ್ಥಾಪನೆ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಎದುರು ನೋಡುತ್ತಿದ್ದಾರೆ ಲಕ್ಷಾಂತರ ಮಂದಿ

ವರುಣ ಹೆಗಡೆ
Published 11 ಅಕ್ಟೋಬರ್ 2019, 20:05 IST
Last Updated 11 ಅಕ್ಟೋಬರ್ 2019, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಣ್ಣಿನ ದಾನಿಗಳು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆಗೆ ಎದುರು ನೋಡುತ್ತಿರುವವರ ಸಂಖ್ಯೆಯಲ್ಲಿನ ಅಂತರ ಕಡಿಮೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿನೇತ್ರ ಸಂಗ್ರಹಣಾ ಕೇಂದ್ರ ಆರಂಭಿಸಲು ಮುಂದಾಗಿದೆ.

ಮಧುಮೇಹ, ಬಿ.ಪಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ 50 ವರ್ಷ ಮೇಲ್ಪಟ್ಟವರಲ್ಲಿ ಕಣ್ಣಿನ ಸಮಸ್ಯೆ ಹೆಚ್ಚು. ಇನ್ನೊಂದೆಡೆ ಮೊಬೈಲ್‌ನಂತಹ ಅತ್ಯಾಧುನಿಕ ಉಪಕರಣಗಳ ಅತಿಯಾದ ಬಳಕೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬರುತ್ತಿದೆ.

ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಕಣ್ಣಿನ ಸಮಸ್ಯೆಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗುವ ಜತೆಗೆ, ಮರಳಿ ದೃಷ್ಟಿ ಪಡೆಯಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಸಹ ಒಂದೇ ಸಮನೆ ಹೆಚ್ಚುತ್ತಿದೆ. ಆದರೆ, ರಾಜ್ಯದಲ್ಲಿ ಸದ್ಯ 7 ಸರ್ಕಾರಿ ಐ ಬ್ಯಾಂಕ್‌ಗಳಿರುವುದು ಕಣ್ಣುಗಳ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಸಂಗ್ರಹ ಬ್ಯಾಂಕ್‌ ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ.

ADVERTISEMENT

ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಸರ್ಕಾರಿ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ
ವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.2017–18ನೇ ಸಾಲಿನಲ್ಲಿ 4,04,563 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಗುರಿ ಇತ್ತು. ಇದರಲ್ಲಿ 3,83,497 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2018–19ನೇ ಸಾಲಿನಲ್ಲಿ ಶೇ 96.56 ರಷ್ಟು ಗುರಿ ಸಾಧಿಸಿದೆ. ಇಷ್ಟಾಗಿಯೂ ಕೂಡಾ ಪ್ರತಿ ವರ್ಷ ಲಕ್ಷಾಂತರ ಮಂದಿ ಶಸ್ತ್ರಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಇಲಾಖೆ ಮೂಲಗಳು ಹೇಳಿವೆ.

‘ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ಕಣ್ಣುಗಳನ್ನು ಸಂಗ್ರಹಿಸಬೇಕಾಗುತ್ತದೆ. ಸದ್ಯ ಹತ್ತಿರದ ಖಾಸಗಿ ಐ ಬ್ಯಾಂಕ್‌
ಗಳಿಂದ ದಾನಿಗಳ ಕಣ್ಣುಗಳನ್ನು ಪಡೆಯಲಾಗುತ್ತಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕಣ್ಣುಗಳನ್ನು ಸಂಗ್ರಹಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೇಂದ್ರ ಆರಂಭಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಬಿ.ಎನ್. ರಜನಿ ‘ಪ್ರಜಾವಾಣಿ’ಗೆ ತಿಳಿಸಿದರು.

***

5,561 - ಕಳೆದ ವರ್ಷ ರಾಜ್ಯದ ಐ ಬ್ಯಾಂಕ್‌ಗಳಲ್ಲಿ ಸಂಗ್ರಹವಾದಕಣ್ಣಿನ ಗುಡ್ಡೆಗಳು

3,90,630 -ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಸಂಖ್ಯೆ

2,31,958 - ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟ ಮಕ್ಕಳ ಸಂಖ್ಯೆ

56,487 - ಕನ್ನಡಕ ಪಡೆದ ಮಕ್ಕಳ ಸಂಖ್ಯೆ

55,272 -ಕನ್ನಡಕ ಪಡೆದ ಹಿರಿಯರ ಸಂಖ್ಯೆ

₹ 25.76 ಕೋಟಿ -ಕಳೆದ ವರ್ಷ ಕಣ್ಣಿನ ಆರೋಗ್ಯಕ್ಕೆ ಖರ್ಚಾದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.