ADVERTISEMENT

ಯಕ್ಷಗಾನ ಅಕಾಡೆಮಿ ಕಚೇರಿ ಸ್ಥಳಾಂತರವಿಲ್ಲ: ತಲ್ಲೂರು ಶಿವರಾಮ ಶೆಟ್ಟಿ ಸ್ಪಷ್ಟನೆ

ಕಲೆ, ಕಲಾವಿದರ ದೃಷ್ಟಿಯಿಂದ ಬೆಂಗಳೂರೇ ಸೂಕ್ತ: ತಲ್ಲೂರು ಶಿವರಾಮ ಶೆಟ್ಟಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:39 IST
Last Updated 16 ಏಪ್ರಿಲ್ 2025, 14:39 IST
ತಲ್ಲೂರು ಶಿವರಾಮ ಶೆಟ್ಟಿ
ತಲ್ಲೂರು ಶಿವರಾಮ ಶೆಟ್ಟಿ   

ಬೆಂಗಳೂರು: ‘ಕಲೆ, ಕಲಾವಿದರ ದೃಷ್ಟಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು. ಯಾವುದೇ ಜಿಲ್ಲೆಗೆ ಕಚೇರಿಯನ್ನು ಸ್ಥಳಾಂತರಿಸುತ್ತಿಲ್ಲ’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ಪಷ್ಟನೆ ನೀಡಿದರು.

ಬುಧವಾರ ಇಲ್ಲಿ ಸರ್ವಸದಸ್ಯರ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಸಲಾಯಿತು. ಈ ಸಮಾರಂಭದ ಆಯೋಜನೆಯ ಹಿಂದೆ ಅಕಾಡೆಮಿ ಸ್ಥಳಾಂತರದ ಉದ್ದೇಶ ಇರಲಿಲ್ಲ. ಸದಸ್ಯರು ಕೂಡ ಸ್ಥಳಾಂತರದ ಬಗ್ಗೆ ಪ್ರಸ್ತಾಪಿಸಿಲ್ಲ. ಪ್ರಶಸ್ತಿಗಳ ಘೋಷಣೆಯಂತಹ ಅಕಾಡೆಮಿ ಕಾರ್ಯಚಟುವಟಿಕೆಗಳನ್ನು ಇನ್ನುಮುಂದೆ ಕೇಂದ್ರ ಕಚೇರಿಯಲ್ಲಿಯೇ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಈ ಹಿಂದೆ ನಡೆದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ಹೇಳಿದರು.

‘ಅಕಾಡೆಮಿ ಕಚೇರಿಯನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಿದಲ್ಲಿ ಘಟ್ಟದಕೋರೆ, ಮೂಡಲಪಾಯ, ಪಡುವಲಪಾಯ, ಕೇಳಿಕೆ, ಮುಖವೀಣೆ ಕಲಾವಿದರಿಗೆ ಅನನುಕೂಲವಾಗುತ್ತದೆ. ಯಕ್ಷಗಾನ ವಿದ್ವಾಂಸರು ಸಹ ಅಕಾಡೆಮಿ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕೆಂದು ಆಗ್ರಹಿಸಿದ್ದಾರೆ. ಮಂಗಳೂರು ಅಥವಾ ಉಡುಪಿಗೆ ಅಕಾಡೆಮಿ ಕಚೇರಿ ಸ್ಥಳಾಂತರದ ಪ್ರಸ್ತಾವ ನಮ್ಮ ಮುಂದಿಲ್ಲ. ಅಲ್ಲಿಗೆ ಸ್ಥಳಾಂತರದ ಪ್ರಸ್ತಾವ ಬಂದರೂ ಅದನ್ನು ಒಪ್ಪುವುದಿಲ್ಲ’ ಎಂದರು.

ADVERTISEMENT

‘ಯಕ್ಷಗಾನದ ಎಲ್ಲ ಪ್ರಕಾರಗಳಿಗೂ ಸೂಕ್ತ ಆದ್ಯತೆ ನೀಡಲಾಗುತ್ತಿದೆ. ಮೂಡಲಪಾಯ ಸೇರಿ ಯಾವುದೇ ಪ್ರಕಾರ, ಪ್ರದೇಶದ ಕಲಾವಿದರನ್ನು ಕಡೆಗಣಿಸುತ್ತಿಲ್ಲ. ಆದ್ದರಿಂದ ಕಲಾವಿದರು ಆತಂಕಪಡಬೇಕಾಗಿಲ್ಲ’ ಎಂದು ಹೇಳಿದರು. 

‘ಈ ಸಾಲಿನಲ್ಲಿ ಯಕ್ಷಗಾನ ಸಮ್ಮೇಳನ ನಡೆಸುವ ಯೋಜನೆ ನಮ್ಮ ಮುಂದಿದ್ದು, ₹ 1 ಕೋಟಿ ಅನುದಾನದ ಅಗತ್ಯವಿದೆ. ಸರ್ಕಾರ ಹಣ ನೀಡಿದಲ್ಲಿ ಸ್ಥಳ ಗೊತ್ತುಪಡಿಸಿ, ಸಮ್ಮೇಳನ ನಡೆಸಲಾಗುವುದು’ ಎಂದರು. 

ಅಕಾಡೆಮಿ ರಿಜಿಸ್ಟ್ರಾರ್ ನಮ್ರತ ಎನ್‌. ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.