ADVERTISEMENT

ಬಸವಲಿಂಗಪ್ಪ ಸಾಮಾಜಿಕ ಪರಿವರ್ತನೆಯ ನಾಯಕ: ದಿನೇಶ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:56 IST
Last Updated 22 ಫೆಬ್ರುವರಿ 2019, 19:56 IST
ಬಿ.ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡಾರಾವ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ಪುಷ್ಪನಮನ ಸಲ್ಲಿಸಿದರು
ಬಿ.ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡಾರಾವ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ಪುಷ್ಪನಮನ ಸಲ್ಲಿಸಿದರು   

ಯಲಹಂಕ: ‘ರಾಜಕಾರಣದ ಇತಿಹಾಸದಲ್ಲಿ ದಾಖಲೆ ಬರೆದ ಬಸವಲಿಂಗಪ್ಪ ಅವರು ಸಾಮಾಜಿಕ ಪರಿವರ್ತನೆಯ ಹೋರಾಟದ ಮುಂಚೂಣಿ ನಾಯಕರಾಗಿದ್ದರು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಮರಿಸಿದರು.

ಬ್ಯಾಟರಾಯನಪುರದಲ್ಲಿ ದಿವಂಗತ ಬಿ.ಬಸವಲಿಂಗಪ್ಪ ಭವನ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಅವರು ಸಮಾಜದ ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು. ಮಲಹೊರುವ ಪದ್ಧತಿ, ಭೂಸುಧಾರಣಾ ಕಾಯಿದೆ, ಬೂಸಾ ಚಳವಳಿ ಅವರ ಕಾಲದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಿದ ಹೋರಾಟಗಳು. ಅಂತಹ ಮಹಾನ್ ನಾಯಕನ ಹೆಸರಿನಲ್ಲಿ ಈ ಭಾಗದಲ್ಲಿ ಭವನ ನಿರ್ಮಿಸುತ್ತಿರುವುದು ಶ್ಲಾಘನೀಯ ಕಾರ್ಯ' ಎಂದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಮಾತನಾಡಿ, 'ಬಿ.ಬಸವಲಿಂಗಪ್ಪ ಅವರು ಈ ರಾಜ್ಯ ಕಂಡ ನೇರ-ನಿಷ್ಠುರ ನಡೆಯ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ರಾಜ್ಯಕ್ಕೆ ಮತ್ತು ಅಂದಿನ ಯಲಹಂಕ ಕ್ಷೇತ್ರಕ್ಕೆ ಅವರ ಕೊಡುಗೆ ಸ್ಮರಣೀಯವಾದುದು. ಸದಾ ಸಾಮಾಜಿಕ ಪರಿವರ್ತನೆಯನ್ನು ಬಯಸಿದ್ದ ಅವರು, ಒಬ್ಬ ಶಾಸಕ ಮತ್ತು ಮಂತ್ರಿ ಹೇಗಿರಬೇಕೆಂದು ತೋರಿಸಿದ್ದರು’ ಎಂದು ಸ್ಮರಿಸಿದರು.

‘ಭವನ ನಿರ್ಮಾಣಕ್ಕೆ ಸರ್ಕಾರ ₹ 2.25 ಕೋಟಿ ಅನುದಾನ ನೀಡಿದೆ. ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲು ಇನ್ನೂ ಹೆಚ್ಚಿನ ಅನುದಾನ ಪಡೆದು ಸುಮಾರು ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್‌ ಕುಮಾರ್‌, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಬಿಬಿಎಂಪಿ ಸದಸ್ಯರಾದ ಮಂಜುನಾಥಬಾಬು, ಪಾರ್ಥಿಬರಾಜನ್‌, ಮಮತಾ ವೆಂಕಟೇಶ್, ಕೆ.ಎಂ.ಚೇತನ್, ಲಕ್ಷ್ಮೀಹರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಮುಖಂಡರಾದ ಬಿ.ಕೆ.ಮಂಜುನಾಥಗೌಡ, ಕೆ.ಶ್ರೀನಿವಾಸಯ್ಯ, ಕೆ.ಅಶೋಕನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.