ADVERTISEMENT

ಕೆರೆಗೆ ಹರಿಯುವ ಕೊಳಚೆ ನೀರು ತಡೆಯಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:45 IST
Last Updated 8 ಜುಲೈ 2022, 19:45 IST
ಕೊಳಚೆ ನೀರು ಕರೆಗೆ ಸೇರುತ್ತಿರುವ ಜಾಗ
ಕೊಳಚೆ ನೀರು ಕರೆಗೆ ಸೇರುತ್ತಿರುವ ಜಾಗ   

ಯಲಹಂಕ: ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲುಕುಂಟೆ ಗ್ರಾಮದ ಕೆರೆಗೆ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಮಾರಸಂದ್ರದಲ್ಲಿರುವ ‘ಪ್ರಾವಿಡೆಂಟ್ ವೆಲ್ವರ್ತ್ ಸಿಟಿ’ ಅಪಾರ್ಟ್‌ಮೆಂಟ್‌ನಿಂದ ಹರಿದುಬರುತ್ತಿರುವಕೊಳಚೆ ನೀರನ್ನು ಕೂಡಲೇ ತಡೆಗಟ್ಟ
ಬೇಕು ಎಂದು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 3360 ಮನೆಗಳಿದ್ದು, ಸುಮಾರು 10 ಸಾವಿರ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಪ್ರತಿನಿತ್ಯ ಬಳಕೆ ಮಾಡುವ 9.50 ಲಕ್ಷ ಲೀಟರ್ ನೀರಿನ ಜೊತೆಗೆ ಒಳಚರಂಡಿ ನೀರನ್ನು ಶುದ್ಧೀಕರಿಸದೆ ಕಳೆದ ಎರಡೂವರೆ ತಿಂಗಳಿನಿಂದ ಕಾಲುವೆ ಮೂಲಕ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಕೆರೆಯಲ್ಲಿ ಮಲತ್ಯಾಜ್ಯ ಶೇಖರಣೆಯಾಗಿ ಗೊಬ್ಬರವಾಗಿ ನಿಲ್ಲುತ್ತಿದೆ. ಈ ನೀರನ್ನು ಕುಡಿದ ಹಲವು ಜಾನುವಾರುಗಳು ಮೃತಪಟ್ಟಿವೆ ಎಂದು ಪಂಚಾಯಿತಿ ಸದಸ್ಯ ಕೆ.ಆರ್.ತಿಮ್ಮೇಗೌಡ ದೂರಿದರು.

ಕೊಳಚೆನೀರನ್ನು ಕೂಡಲೇ ತಡೆಗಟ್ಟಬೇಕೆಂದು ಪಂಚಾಯಿತಿಯಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾ
ಭಿವೃದ್ಧಿ ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದು, ರಾಜಾನುಕುಂಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನೀರನ್ನು ಪ್ರಯೋಗಾಲಕ್ಕೆ ಕಳಿಸಿದಾಗ, ಈ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದಿದೆ. 15 ದಿನಗಳಿಂದ ನೆಲ್ಲುಕುಂಟೆ ಮತ್ತು ಮಾರಸಂದ್ರ ಗ್ರಾಮದ ನಿವಾಸಿಗಳಿಂದ ಕೊಳಚೆನೀರನ್ನು ತಡೆಗಟ್ಟಬೇಕೆಂದು ಮನವಿಮಾಡಿ ಪಂಚಾಯಿತಿಗೆ ಹಲವಾರು ಅರ್ಜಿಗಳು ಬಂದಿವೆ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೆರೆಗೆ ಕೊಳಚೆ ನೀರು ಹರಿದುಹೋಗುತ್ತಿದ್ದ ಜಾಗವನ್ನು ಸಿಮೆಂಟ್ ಕಾಂಕ್ರೀಟ್ ಹಾಕಿ ಬಂದ್ ಮಾಡಿಸಿದ್ದಾರೆ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸೂಚಿಸಿದ್ದಾರೆ. ಆದರೂ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಈ ಬಗ್ಗೆ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಕೊಳಚೆ ನೀರನ್ನು ತಡೆಗಟ್ಟದಿದ್ದರೆ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಮಾರಸಂದ್ರ ಗ್ರಾಮದ ನಿವಾಸಿ ಗೌಡಯ್ಯ ಎಚ್ಚರಿಕೆ ನೀಡಿದರು.

ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ, ಸಂಸ್ಕರಣಾ ಘಟಕ ಕಾರ್ಯನಿರ್ವಹಿಸದೆ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಕೊಳಚೆ ನೀರು ಕೆರೆಗೆ ಸೇರಿದೆ. ದುರಸ್ತಿಮಾಡಿದ ನಂತರ ಈಗ ಘಟಕ ಕಾರ್ಯನಿರ್ವಹಿಸುತ್ತಿದೆ. ಈ ಸಮಸ್ಯೆಗೆ ಪಂಚಾಯಿತಿ ಮತ್ತು ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಚರ್ಚೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ವ್ಯವಸ್ಥಾಪಕ ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.