ಬೆಂಗಳೂರು: ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಲ್ ಕಂಫರ್ಟ್ ಲಾಡ್ಜ್‌ನಲ್ಲಿ ಪ್ರೇಮಿ ಆತ್ಮಹತ್ಯೆ ಹಾಗೂ ಉಸಿರುಗಟ್ಟಿ ಪ್ರಿಯತಮೆ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಇಬ್ಬರ ಮಧ್ಯೆ ನಡೆದ ಗಲಾಟೆಯೇ ಘಟನೆಗೆ ಕಾರಣವಾಗಿದೆ ಎಂಬುದಾಗಿ ಶಂಕಿಸಿದ್ದಾರೆ.
ಠಾಣಾ ವ್ಯಾಪ್ತಿಯ ಕಿಚನ್ ಸಿಕ್ಸ್ ಫ್ಯಾಮಿಲಿ ರೆಸ್ಟೊರೆಂಟ್ ಕಟ್ಟಡದಲ್ಲಿರುವ ಕೂಲ್ ಕಂಫರ್ಟ್ ಲಾಡ್ಜ್‌ನಲ್ಲಿ ತಂಗಿದ್ದ ಗದಗದ ರಮೇಶ್ ಬಡ್ಡಿವಡ್ಡರ್ (25) ಹಾಗೂ ಹುನಗುಂದದ ಕಾವೇರಿ ಬಡಿಗೇರ್ (22) ಅವರು ಗುರುವಾರ ರಾತ್ರಿ ಶವವಾಗಿ ಪತ್ತೆ ಆಗಿದ್ದರು. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಪೆಟ್ರೋಲ್ ಸುರಿದುಕೊಂಡು ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಾವೇರಿ ಅವರು ಶೌಚಾಲಯಕ್ಕೆ ತೆರಳಿ ಅಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದರು.
‘ಕಾವೇರಿ ಅವರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ದಂಪತಿ ನಡುವೆ ವೈಮನಸ್ಸು ಮೂಡಿ ಕಾವೇರಿ ಬೆಂಗಳೂರಿಗೆ ಬಂದಿದ್ದರು. ಯಲಹಂಕದ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಗಾರೆ ಕೆಲಸ ಮಾಡುತ್ತಿದ್ದ ರಮೇಶ್ ಅವರ ಪರಿಚಯವಾಗಿತ್ತು. ಇಬ್ಬರೂ ಸಲುಗೆಯಿಂದ ಇದ್ದರು. ಕಳೆದ ಒಂದು ವಾರದಿಂದ ಇಬ್ಬರೂ ಕೂಲ್ ಕಂಫರ್ಟ್ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
‘ಗುರುವಾರ ಮಧ್ಯಾಹ್ನದ ಸಮಯದಲ್ಲಿ ರಮೇಶ್ ಅವರು ಹೊರಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಹುಡುಗನೊಬ್ಬ ಬಂದು ಕಾವೇರಿ ಅವರನ್ನು ಮಾತನಾಡಿಸಿಕೊಂಡು ಹೋಗಿದ್ದ. ಅದನ್ನು ರಮೇಶ್ ಗಮನಿಸಿದ್ದರು. ಕೊಠಡಿಗೆ ಬಂದು ಹುಡುಗನ ಬಗ್ಗೆ ವಿಚಾರಿಸಿದ್ದರು. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಬಳಿಕ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಹೊರಗೆ ತೆರಳಿ ಬಾಟಲಿಯಲ್ಲಿ ಪೆಟ್ರೋಲ್ ತಂದು ಬೆಂಕಿ ಹಚ್ಚಿಕೊಂಡಿದ್ದರು. ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಕಾವೇರಿ ಅವರಿಗೆ ಹೊರಗೆ ತೆರಳುವುದಕ್ಕೆ ಸಾಧ್ಯವಾಗದೇ ಕೊಠಡಿಯಲ್ಲಿದ್ದ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಸ್ಪಾದ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ವಸತಿಗೃಹಕ್ಕೆ ಬರುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.