ADVERTISEMENT

ಯಲಹಂಕ | ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಕ್ಕೆ ತಡೆ

ಫಲಾನುಭವಿಗಳ ಅಳಲು * ಅಗತ್ಯ ಸಾಮಗ್ರಿ ಕೊಳ್ಳಲು ಪರದಾಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 20:19 IST
Last Updated 26 ಜುಲೈ 2020, 20:19 IST
ಯಲಹಂಕ ಅಂಚೆ ಕಚೇರಿ ಎದುರು ಪಿಂಚಣಿಗಾಗಿ ಕಾಯುತ್ತಿರುವ ವಯೋವೃದ್ಧ ಫಲಾನುಭವಿಗಳು 
ಯಲಹಂಕ ಅಂಚೆ ಕಚೇರಿ ಎದುರು ಪಿಂಚಣಿಗಾಗಿ ಕಾಯುತ್ತಿರುವ ವಯೋವೃದ್ಧ ಫಲಾನುಭವಿಗಳು    

ಯಲಹಂಕ: ಐದಾರು ತಿಂಗಳಿನಿಂದ ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನ ಸಿಗದಿರುವುದರಿಂದ ಅವಶ್ಯಕ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗದೇ ಫಲಾನುಭವಿಗಳು ಕಂಗಾಲಾಗಿದ್ದಾರೆ.

ಹಲವರಿಗೆ ಮಾತ್ರೆ ಖರೀದಿಸುವುದು ಕಷ್ಟವಾಗಿದ್ದರೆ, ಇನ್ನು ಕೆಲವರಿಗೆ ಊಟಕ್ಕೇ ತತ್ವಾರ ಎದುರಾಗಿದೆ.

ಹಣಕ್ಕಾಗಿ ಪ್ರತಿದಿನ ಬ್ಯಾಂಕ್, ಅಂಚೆ ಕಚೇರಿ ಮತ್ತು ತಹಶೀಲ್ದಾರ್‌ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಹಶೀಲ್ದಾರ್‌ ಕಚೇರಿ ಮತ್ತು ಸರ್ಕಾರಿ ಖಜಾನೆ ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎನ್ನುತ್ತಾರೆ ಫಲಾನುಭವಿಗಳು.

ADVERTISEMENT

ಫಲಾನುಭವಿಗಳಲ್ಲಿ ಬಹುತೇಕರು ವಯೋವೃದ್ಧರು ರಕ್ತದೊತ್ತಡ, ಮಧುವೇಹ, ಹೃದಯ ಸಂಬಂಧಿ ಮತ್ತಿತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ದಿನನಿತ್ಯ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ಹಣ ಬಂದಿಲ್ಲ ಎಂಬ ಖಚಿತವಾದ ಮೇಲೆ ನಿರಾಸೆಯಿಂದ ಮರಳುವ ಪರಿಸ್ಥಿತಿ ಇವರದ್ದಾಗಿದೆ.

‘ಐದು ತಿಂಗಳಿನಿಂದ ಹಣ ಬಂದಿಲ್ಲ. ಔಷಧಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಅಕ್ಕಪಕ್ಕದ ಮನೆಯವರ ಬಳಿ ಸಾಲಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಂಪಿಗೇಹಳ್ಳಿ ಗ್ರಾಮದ ಅಂಗವಿಕಲ ಪೂಜಪ್ಪ ಅಳಲು ತೋಡಿಕೊಂಡರು.

‘ಅಂಚೆ ಕಚೇರಿಗೆ ಬಂದು ವಿಚಾರಿಸಿದರೆ, ತಹಶೀಲ್ದಾರ್‌ ಕಚೇರಿಗೆ ಹೋಗಿ ಆಧಾರ್, ಪಿಂಚಣಿ ಆದೇಶಪತ್ರ ಹಾಗೂ ಪಾಸ್ ಬುಕ್ ನಕಲನ್ನು ನೀಡುವಂತೆ ಸಿಬ್ಬಂದಿ ಹೇಳಿದರು. ದಾಖಲೆ ನಕಲುಗಳನ್ನು ನೀಡಿ ಬಂದು ಒಂದೂವರೆ ತಿಂಗಳು ಕಳೆದಿದ್ದರೂ ಹಣ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೊರೊನಾ ನೆಪಹೇಳಿ, ಖಜಾನೆಗೆ ಹೋಗಿ ವಿಚಾರಿಸಿ ಎನ್ನುತ್ತಾರೆ. ನಮ್ಮಂಥವರು ಹೇಗೆ ಅಲ್ಲಿಗೆ ಹೋಗಿಬರಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಅವರು.

‘ಫಲಾನುಭವಿಗಳ ಪಾಸ್‌ಬುಕ್‌ ಪರಿಶೀಲಿಸಿ, ಅವರ ಖಾತೆಗೆ ಪಿಂಚಣಿ ಹಣ ಜಮೆ ಆಗದಿದ್ದರೆ ತಕ್ಷಣ ನೀಡಲಾಗುವುದು. ಖಾತೆಗೆ ಹಣ ಬಂದಿರದ ಬಗ್ಗೆ ದೃಢಪಡಿಸಿಕೊಂಡು ಅಂಥವರನ್ನು ವಾಪಸ್ ಕಳುಹಿಸಲಾಗುತ್ತಿದೆ’ ಎಂದು ಅಂಚೆಕಚೇರಿ ಸಿಬ್ಬಂದಿ ಸ್ವಷ್ಟಪಡಿಸಿದರು.

***

ಮೂರು ದಿನಗಳೊಳಗೆ ಅರ್ಜಿ ವಿಲೇವಾರಿ

ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಆಧಾರ್, ಪಿಂಚಣಿ ಆದೇಶಪತ್ರ ಹಾಗೂ ಪಾಸ್‌ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಲು ಸೂಚಿಸಲಾಗಿತ್ತು. ಐದು ತಿಂಗಳಿನಿಂದ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಲಾಕ್‌ಡೌನ್‌ ಇದ್ದಿದ್ದರಿಂದ ಕೆಲ ಫಲಾನುಭವಿಗಳಿಗೆ ದಾಖಲೆ ಸಲ್ಲಿಸಲು ಸಮಸ್ಯೆಯಾಗಿ ವ್ಯತ್ಯಯವಾಗಿದೆ. ಮೂರು ದಿನಗಳ ಒಳಗಾಗಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಯಲಹಂಕ ತಹಶೀಲ್ದಾರ್‌ ಎನ್. ರಘುಮೂರ್ತಿ ಹೇಳಿದರು.

****

ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು.

ಎಸ್.ಆರ್.ವಿಶ್ವನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

***

ಈ ಬಗ್ಗೆ ನಿತ್ಯವೂ ದೂರುಗಳು ಬರುತ್ತಿವೆ. ಸಮಸ್ಯೆ ಪರಿಹರಿಸುವಂತೆ ಒತ್ತಡ ತಂದಿದ್ದರೂ, ಬಗೆಹರಿದಿಲ್ಲ. ಬಡವರಿಗೆ ಹಣ ನೀಡದಷ್ಟು ಸರ್ಕಾರ ದಿವಾಳಿಯಾಗಿದೆಯೇ? ಲೂಟಿ ಹೊಡೆಯಲು ಮಾತ್ರ ಸರ್ಕಾರಕ್ಕೆ ಹಣವಿದೆ.

ಕೃಷ್ಣಬೈರೇಗೌಡ, ಶಾಸಕರು, ಬ್ಯಾಟರಾಯನಪುರ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.