ADVERTISEMENT

ನಮ್ಮ ಮೆಟ್ರೊ ಹಳದಿ ಮಾರ್ಗ: ಪ್ರತಿ ಸೋಮವಾರ ಬೇಗ ಸಂಚಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 20:12 IST
Last Updated 28 ನವೆಂಬರ್ 2025, 20:12 IST
ಹಳದಿ ಮೆಟ್ರೊ ಮಾರ್ಗ
ಹಳದಿ ಮೆಟ್ರೊ ಮಾರ್ಗ   

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ 5.05ಕ್ಕೆ ಮೊದಲ ಮೆಟ್ರೊ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಭಾನುವಾರದ ರಜೆ ಮುಗಿಸಿಕೊಂಡು ಸೋಮವಾರ ಬೆಳಿಗ್ಗೆ ಸಂಚರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿ ರೈಲು ಸಂಚಾರವನ್ನು ಸೋಮವಾರ ಬೇಗ ಆರಂಭಿಸಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ಈ ಅವಧಿಯಲ್ಲಿ ಸಂಚರಿಸುವವರ ಪ್ರಮಾಣ ಎಷ್ಟಿದೆ ಎಂದು ನೋಡಿಕೊಂಡು ಈ ಸಮಯವನ್ನೇ ಮುಂದುವರಿಸಬೇಕೇ ಬೇಡವೇ ಎಂದು ಮುಂದೆ ತೀರ್ಮಾನಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಮಾರ್ಗದ ಎರಡು ಟರ್ಮಿನಲ್‌ಗಳಾದ  ಆರ್‌.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರ ನಡುವೆ ಮಂಗಳವಾರದಿಂದ ಶನಿವಾರದವರೆಗೆ ಎಂದಿನಂತೆ ಬೆಳಿಗ್ಗೆ 6ಕ್ಕೆ ಮೊದಲ ಸಂಚಾರ ಇರಲಿದೆ. ಭಾನುವಾರ ಬೆಳಿಗ್ಗೆ 7ಕ್ಕೆ ಮೊದಲ ಸಂಚಾರ ಶುರುವಾಗುತ್ತದೆ. ಸೋಮವಾರ ಮಾತ್ರ ಬೆಳಿಗ್ಗೆ 5.05ಕ್ಕೆ ಮತ್ತು 5.35ಕ್ಕೆ ಎರಡು ಟ್ರಿಪ್‌ಗಳು ಹೆಚ್ಚುವರಿಯಾಗಿ ಇರಲಿವೆ ಎಂದು ಹೇಳಿದ್ದಾರೆ.

ADVERTISEMENT

ಹಸಿರು ಮಾರ್ಗದಲ್ಲಿ 4.15ಕ್ಕೆ ಮೆಟ್ರೊ ರೈಲು ಮೊದಲ ಟ್ರಿಪ್‌ ಆರಂಭವಾಗುತ್ತದೆ. ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮಸಂದ್ರ ಕಡೆಗೆ ತೆರಳುವವರು ಆರ್‌.ವಿ. ರಸ್ತೆಯಲ್ಲಿ ಇಳಿದು ಹಳದಿ ಮಾರ್ಗದ ರೈಲಿಗಾಗಿ ಅಧಿಕ ಹೊತ್ತು ಕಾಯುತ್ತಾರೆ. ಹಳದಿ ಮಾರ್ಗದಲ್ಲಿಯೂ ಬೆಳಿಗ್ಗೆ ಬೇಗ ರೈಲು ಸಂಚಾರ ಆರಂಭಿಸಿರುವುದರಿಂದ ಸೋಮವಾರ ಈ ಕಾಯುವಿಕೆಯನ್ನು ತಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬರಲಿದೆ ಮತ್ತೊಂದು ರೈಲು: ಹಳದಿ ಮಾರ್ಗದಲ್ಲಿ ಸದ್ಯ ಐದು ರೈಲುಗಳು ಸಂಚರಿಸುತ್ತಿವೆ. ಡಿಸೆಂಬರ್‌ ಮೊದಲ ವಾರದಲ್ಲಿ ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಕಾರ್ಯಾಗಾರದಿಂದ ಆರನೇ ರೈಲು ರವಾನೆಯಾಗಲಿದೆ. ಆ ರೈಲು ಬೋಗಿಗಳು ಹೆಬ್ಬಗೋಡಿ ಡಿಪೊಗೆ ಬಂದ ಬಳಿಕ ಎರಡು ವಾರ ಪರೀಕ್ಷೆಗಳು ನಡೆಯಲಿವೆ. ಡಿಸೆಂಬರ್‌ ಅಂತ್ಯಕ್ಕೆ ಆರನೇ ರೈಲು ಸಂಚರಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.