ADVERTISEMENT

ಭರದಿಂದ ಸಾಗಿದೆ ಯಶವಂತಪುರ ರೈಲು ನಿಲ್ದಾಣ ನವೀಕರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 14:18 IST
Last Updated 20 ಸೆಪ್ಟೆಂಬರ್ 2023, 14:18 IST
ಯಶವಂತಪುರ ರೈಲು ನಿಲ್ದಾಣದ ನವೀಕರಣ ಕಾಮಗಾರಿ ನಡೆಯುತ್ತಿದೆ
ಯಶವಂತಪುರ ರೈಲು ನಿಲ್ದಾಣದ ನವೀಕರಣ ಕಾಮಗಾರಿ ನಡೆಯುತ್ತಿದೆ   

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ನವೀಕರಣಕ್ಕೆ ಸಂಬಂಧಿಸಿದಂತೆ ಒಂದನೇ ಹಂತದ ಕಾಮಗಾರಿ ಭರದಿಂದ ಸಾಗಿದೆ. 

ನಿಲ್ದಾಣದ ಪೂರ್ವಭಾಗದಲ್ಲಿ ಅಂದರೆ ಪ್ಲಾಟ್‌ಫಾರ್ಮ್‌–1ರ ಕಡೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಹುಹಂತದ ಕಾರ್ ಪಾರ್ಕಿಂಗ್ ಹಾಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು/ಬರಲು ಅನುಕೂಲವಾಗುವ ಎಲಿವೇಟೆಡ್ ರಸ್ತೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಪ್ರಯಾಣಿಕರ ದಟ್ಟಣೆ ತಡೆಗೆ ನಿಲ್ದಾಣದ ಆಗಮನ– ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸರಾಗ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಲ್ದಾಣವು ಬೃಹತ್ ಗಾತ್ರದ ಏರ್ ಕಾನ್ಕೋರ್ಸ್‌ (14,800 ಚದರ ಮೀಟರ್) ಹೊಂದಿದೆ. ಆಹಾರ ಮಳಿಗೆಗಳು, ವಾಣಿಜ್ಯ ಮಳಿಗೆಯ ಸ್ಥಳ, ವ್ಯಾಪಾರ ಕೇಂದ್ರಗಳು ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ವಿಮಾನ ನಿಲ್ದಾಣಗಳಲ್ಲಿರುವ ಲಾಂಜ್‌ಗೆ ಸರಿ ಸಮನಾಗಿರುವಂತಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ADVERTISEMENT

ಮಳೆನೀರು ಸಂಗ್ರಹ, ಒಳಚರಂಡಿ ನೀರು ಸಂಸ್ಕರಣಾ ಘಟಕಗಳೊಂದಿಗೆ ಹಸಿರು ಕಟ್ಟಡ ಮಾನದಂಡಗಳ ಪ್ರಕಾರ ಈ ನಿಲ್ದಾಣ ನಿರ್ಮಿಸಲಾಗುತ್ತಿದೆ. ಇಂಧನ ದಕ್ಷತೆಯ ದೃಷ್ಟಿಯಿಂದ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ಪೂರ್ವ ಭಾಗದ ಕಾಮಗಾರಿ ಪೂರ್ಣಗೊಂಡ ನಂತರ, ಪಶ್ಚಿಮ ಭಾಗದ (ಮೆಟ್ರೊ ಕಡೆಗೆ) ಕೆಲಸ ಪ್ರಾರಂಭವಾಗಲಿದೆ.  ಪುನರಾಭಿವೃದ್ಧಿಪಡಿಸಿದ ನಿಲ್ದಾಣದ 3ಡಿ ಮಾದರಿಯ ಚಿತ್ರವನ್ನು ನಿಲ್ದಾಣದ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ. ನವೀಕರಣದ ನಂತರ ನಿಲ್ದಾಣ ಹೇಗಿರಲಿದೆ ಎಂಬುದರ ನೋಟವನ್ನು ಸೆರೆ– ಹಿಡಿಯಲು ಇಚ್ಚಿಸುವ ವಿದ್ಯಾರ್ಥಿಗಳು, ವಾಸ್ತುಶಿಲ್ಪಿಗಳು, ಸಾರ್ವಜನಿಕರು ಈ ನಿಲ್ದಾಣಕ್ಕೆ ಭೇಟಿ ನೀಡಿ ಮಾದರಿಯನ್ನು ವೀಕ್ಷಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಮಗಾರಿಗೆ ಚಾಲನೆ ನೀಡಿದ್ದರು. 2025ರ ಜುಲೈ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ₹ 380 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿಯ ಗುತ್ತಿಗೆಯನ್ನು ದೆಹಲಿಯ ಗಿರ್ಧಾರಿ ಲಾಲ್‌ ಕನ್‌ಸ್ಟ್ರಕ್ಷನ್ಸ್‌ ಕಂಪನಿ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.