ಕೆಂಗೇರಿ: ಜೀವನಾನುಭವ ಹೇಳಿ ಕೊಡುವ ಜನಪದ ಸಾಹಿತ್ಯ, ಅಕ್ಷರ ಕಲಿಸುವ ವಿಶ್ವವಿದ್ಯಾಲಯಕ್ಕಿಂತ ಮಿಗಿಲು ಎಂದು ಜನಪದ ಕಲಾವಿದ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.
ಯಶವಂತಪುರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆಂಗೇರಿ ಉಪನಗರದ ಗುರುರಾಜ ಸಭಾ ಭವನದಲ್ಲಿ ಆಯೋಜಿಸಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ಹಲವು ಹಕ್ಕೊತ್ತಾಯಗಳು ವ್ಯಕ್ತವಾಗುತ್ತವೆ. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಆ ನಿರ್ಧಾರಗಳ ಪೈಕಿ ಕನಿಷ್ಠ ಶೇ 10ರಷ್ಟು ಕೂಡಾ ನೆರವೇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಸ್ಪತ್ರೆ, ನಿಲ್ದಾಣಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬಳಕೆ ಆಗುವಂತಾಗಬೇಕು ಎಂದು ಮನವಿ ಮಾಡಿದರು.
ಐಟಿ–ಬಿಟಿ ಕಂಪನಿಗಳಲ್ಲಿ ಕನ್ನಡ ಕಲಿಕಾ ಶಿಬಿರ ಆಯೋಜನೆ ಆಗಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಕಲಿಕಾ ಕೇಂದ್ರ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.
‘ನೆಲದ ಮೂಲ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾಯಕಕ್ಕೆ ಯಾವುದೇ ಸರ್ಕಾರ ಉತ್ತೇಜನ ನೀಡುತ್ತಿಲ್ಲ. ಸಾಂಸ್ಕೃತಿಕ ವಲಯದ ಚಿಂತಕರ ದನಿಯನ್ನು ಅಡಗಿಸುವ ಷಡ್ಯಂತ್ರ ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ದೂರಿದರು.
ರಾಜಧಾನಿಯಲ್ಲಿ ಕನ್ನಡ ಉಳಿದರೆ ರಾಜ್ಯದಲ್ಲೂ ಕನ್ನಡ ಉಳಿಯುತ್ತದೆ ಎಂದರು.
ಕೀಳರಿಮೆ ತೊರೆದರೆ ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆ ಬೆಳವಣಿಗೆಯಾಗಲು ಸಾಧ್ಯವಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
ಸಾಹಿತಿ ನಲ್ಲೂರು ಪ್ರಸಾದ್, ಡಾ.ಗೀತಾ ರಾಮಾನುಜಂ, ಡಾ.ಡಿ.ವಿ.ಗುರುಪ್ರಸಾದ್, ನಟಿ ಭಾವನಾ, ಬಿಬಿಎಂಪಿ ಮಾಜಿ ಸದಸ್ಯ ವಿ.ವಿ.ಸತ್ಯನಾರಾಯಣ, ಕಲಾವಿದ ನಾಗರಾಜ ಮೂರ್ತಿ, ಚಿಕ್ಕರಾಜು, ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.