ADVERTISEMENT

ಯಶವಂತಪುರ ಎಪಿಎಂಸಿಗೆ ಮೂಲಸೌಕರ್ಯದ ಬರ

ಪ್ರಾಂಗಣದ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಎಲ್ಲೆಂದರಲ್ಲಿ ಕಸದ ರಾಶಿ

ಖಲೀಲಅಹ್ಮದ ಶೇಖ
Published 7 ಮಾರ್ಚ್ 2025, 19:05 IST
Last Updated 7 ಮಾರ್ಚ್ 2025, 19:05 IST
ಯಶವಂತಪುರ ಎಪಿಎಂಸಿ ಆವರಣದಲ್ಲಿ ಹಾಕಿರುವ ಕಸದ ರಾಶಿ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಯಶವಂತಪುರ ಎಪಿಎಂಸಿ ಆವರಣದಲ್ಲಿ ಹಾಕಿರುವ ಕಸದ ರಾಶಿ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ರಾಜ್ಯದಲ್ಲಿಯೇ ಅತಿಹೆಚ್ಚು ವ್ಯಾಪಾರ–ವಹಿವಾಟು ನಡೆಯುವ ಹೆಗ್ಗಳಿಕೆ ಹೊಂದಿರುವ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಮೂಲಸೌಕರ್ಯದ ಕೊರತೆಯಿಂದ ನಲುಗುತ್ತಿದೆ. ಎಪಿಎಂಸಿಯ ಪ್ರಾಂಗಣದಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ. ಸಮಸ್ಯೆಗಳ ಸರಮಾಲೆಗಳ ಮಧ್ಯೆಯೇ ನಿತ್ಯ ವ್ಯಾಪಾರ–ವಹಿವಾಟು ನಡೆಯುತ್ತಿದೆ.

ಪ್ರಾಂಗಣದ ತುಂಬಾ ಕಸದ ರಾಶಿ, ಗಾಳಿಯಲ್ಲಿ ಹಾರಾಡುವ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆ. ವೈಟ್‌ಟಾಪಿಂಗ್‌ ಹೆಸರಿನಲ್ಲಿ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಒಳಾಂಗಣ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಪರಿಣಾಮವಾಗಿ ಎಲ್ಲ ರಸ್ತೆಗಳಲ್ಲೂ ಸಂಚಾರ ದಟ್ಟಣೆಯಾಗಿ, ರೈತರು ಮತ್ತು ವರ್ತಕರು ಉತ್ಪನ್ನಗಳನ್ನು ಸಾಗಿಸಲು ಪರದಾಡುತ್ತಾರೆ. 

ಈ ಮಾರುಕಟ್ಟೆಗೆ ರಾಜ್ಯವಲ್ಲದೇ ಮಹಾರಾಷ್ಟ್ರದಿಂದಲೂ ಈರುಳ್ಳಿ ಪೂರೈಕೆಯಾಗುತ್ತಿದೆ. ಇದೇ ಮಾರುಕಟ್ಟೆಯಿಂದ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಾಗಣೆ ಮಾಡಲಾಗುತ್ತದೆ. ಹೀಗಾಗಿ ಪ್ರಾಂಗಣದ ತುಂಬಾ ಹೊರ ರಾಜ್ಯದ ಲಾರಿಗಳು ಸಾಲು ಸಾಲು ನಿಂತಿರುತ್ತವೆ. ದೂಳು, ಕಸದ ರಾಶಿಯ ನಡುವೆ ವ್ಯಾಪಾರಸ್ಥರು ನಿತ್ಯದ ವ್ಯವಹಾರ ನಡೆಸುತ್ತಾರೆ. 

ADVERTISEMENT

ಯಶವಂತಪುರ ಎಪಿಎಂಸಿಯಲ್ಲಿ 1,800ಕ್ಕೂ ಹೆಚ್ಚು ಮಂದಿ ಪರವಾನಗಿ ಪಡೆದ ವರ್ತಕರು ವಹಿವಾಟು ನಡೆಸುತ್ತಿದ್ದಾರೆ. ಸಾವಿರಾರು ಹಮಾಲರು ಕಾರ್ಯನಿರ್ವಹಿಸುತ್ತಾರೆ. ಈ ಶ್ರಮಿಕ ವರ್ಗದವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಾರ್ವಜನಿಕ ಶೌಚಾಲಯಗಳು ಬಳಕೆ ಮಾಡದಂತಹ ಸ್ಥಿತಿಯಲ್ಲಿವೆ. 

106 ಎಕರೆ ವಿಸ್ತೀರ್ಣದಲ್ಲಿರುವ ಪ್ರಾಂಗಣಕ್ಕೆ 16ಕ್ಕೂ ಹೆಚ್ಚು ಪ್ರವೇಶದ್ವಾರಗಳಿವೆ. ಕೆಲವು ಗೇಟ್‌ಗಳಲ್ಲಿ ಮಾತ್ರ ಕಾವಲುಗಾರರನ್ನು ನೇಮಿಸಲಾಗಿದೆ. ಉಳಿದೆಡೆ ಕಳ್ಳರು ಸರಾಗವಾಗಿ ಪ್ರಾಂಗಣಕ್ಕೆ ಬಂದು ಕೃಷಿ ಉತ್ಪನ್ನ ಕಳವು ಮಾಡಿದ ಉದಾಹರಣೆಗಳಿವೆ. ಅಲ್ಲಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ. ಎಪಿಎಂಸಿ ಪ್ರಾಂಗಣದಿಂದ ಹೊರಗಡೆ ತೆರಳುವ ವಾಹನಗಳಿಂದ ಗೇಟ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾವಲುಗಾರರು ಹಣ ವಸೂಲಿಗೆ ಇಳಿದಿದ್ದಾರೆ.

‘ಒಂದೇ ಸೂರಿನಡಿ ದಿನಸಿ, ಹಣ್ಣು–ತರಕಾರಿ, ತೆಂಗಿನಕಾಯಿ, ಅಕ್ಕಿ, ಬೆಳೆ ಸೇರಿದಂತೆ ಅಗತ್ಯವಿರುವ ಎಲ್ಲ ಪದಾರ್ಥಗಳಿಗೆ ಪ್ರತ್ಯೇಕ ಪ್ರಾಂಗಣದ ವ್ಯವಸ್ಥೆ ಇದೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿತ್ತು ಹೋಗಿದ್ದು, ವಾಹನ ಸಂಚಾರದಿಂದ ನಿತ್ಯ ದೂಳಿನ ಮಜ್ಜನವಾಗುತ್ತಿದೆ. ವರ್ತಕರು ಹಾಗೂ ರೈತರು ಇದರ ನಡುವೆಯೇ ವ್ಯಾಪಾರ–ವಹಿವಾಟು ನಡೆಸುವ ದುಃಸ್ಥಿತಿ ಎದುರಾಗಿದೆ’ ಎಂದು ವ್ಯಾಪಾರಿಗಳು ದೂರಿದರು. 

ಮಾರುಕಟ್ಟೆಗೆ ಬರುವ ರೈತರಿಗೆ ರಾತ್ರಿ ವಾಸ್ತವ್ಯಕ್ಕೆ ‘ರೈತ ಭವನ’ ನಿರ್ಮಿಸಲಾಗಿದ್ದರೂ ನಿರ್ವಹಣೆ ಸಮರ್ಪಕವಾಗಿಲ್ಲ. ಕೆಲವು ಕೊಠಡಿಗಳ ಕಿಟಕಿಯ ಗಾಜುಗಳು ಒಡೆದಿವೆ. ರಸ್ತೆಯ ಬದಿಯಲ್ಲೇ ಇರುವ ಭವನ ಕೊಂಪೆಯಂತೆ ಕಾಣಿಸುತ್ತಿದೆ.

ಯಶವಂತಪುರ ಎಪಿಎಂಸಿ ಆವರಣದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿರುವ ವಾಹನಗಳ ಸಾಲು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಯಶವಂತಪುರ ಎಪಿಎಂಸಿ ಆವರಣದ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಯಶವಂತಪುರ ಎಪಿಎಂಸಿ ಆವರಣದ ರಸ್ತೆಯಲ್ಲಿ ಅಕ್ಕಿ ಮೂಟೆಗಳನ್ನು ಇರಿಸಿರುವುದು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಯಶವಂತಪುರ ಎಪಿಎಂಸಿ ಆವರಣದಲ್ಲಿರುವ ವಾಹನ ನಿಲುಗಡೆ ಕಟ್ಟಡ  ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಯಶವಂತಪುರ ಎಪಿಎಂಸಿ ಆವರಣದ ರಸ್ತೆ ಕಿತ್ತು ಹೋಗಿರುವುದು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಸಿ. ಉದಯಶಂಕರ್
ಅಬ್ದುಲ್ ಖಾಲೀದ್

ವಾಹನ ನಿಲುಗಡೆ ಕಟ್ಟಡ ವ್ಯರ್ಥ ಯಶವಂತಪುರ ಎಪಿಎಂಸಿ ಆವರಣದಲ್ಲಿ ಸುಮಾರು ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಹುಮಹಡಿ ವಾಹನಗಳ ನಿಲುಗಡೆ ಕಟ್ಟಡ ಬಳಕೆಗೆ ಲಭಿಸದೇ ವ್ಯರ್ಥವಾಗುತ್ತಿದೆ. ಹತ್ತು ಅಂತಸ್ತಿನ ಕಟ್ಟಡದ ಕಾಮಗಾರಿ ಮುಕ್ತಾಯವಾಗಿ ಹಲವಾರು ವರ್ಷ ಕಳೆದಿದ್ದರೂ ಬಳಕೆಗೆ ಇಲ್ಲವಾಗಿದೆ. ಕಟ್ಟಡದ ಮುಖ್ಯದ್ವಾರಕ್ಕೆ ಬೀಗ ಹಾಕಿ ಬಂದ್‌ ಮಾಡಲಾಗಿದೆ. 750 ಕಾರುಗಳು ಹಾಗೂ 110 ಬೈಕ್‌ಗಳ ನಿಲುಗಡೆ ಅವಕಾಶವಿದೆ.

ವರ್ತಕರು ಏನಂತಾರೆ... ಇತ್ತೀಚಿನ ದಿನಗಳಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ. ವೈಟ್‌ ಟಾಪಿಂಗ್‌ ಹೆಸರಿನಲ್ಲಿ ಪ್ರಾಂಗಣದ ಮುಖ್ಯ ರಸ್ತೆಗಳನ್ನು ಅಗೆದು ಹಾಕಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಹೊರ ರಾಜ್ಯದ ವಾಹನಗಳು ಎರಡು ಮೂರು ದಿನಗಳವರೆಗೆ ಆವರಣದಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಭದ್ರತಾ ಸಿಬ್ಬಂದಿಯಿಲ್ಲದ ಪರಿಣಾಮ ಕಳ್ಳರ ಹಾವಳಿ ಹೆಚ್ಚಾಗಿದೆ. ಸಂಜೆ 6 ಗಂಟೆಯ ನಂತರ ಮಾರುಕಟ್ಟೆಗೆ ಬರುವ ರೈತರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲ. ಸಿ. ಉದಯಶಂಕರ್ ಬೆಂಗಳೂರು ಆಲೂಗಡ್ಡೆ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ –0– ಪ್ರಾಂಗಣದಲ್ಲಿ ಈರುಳ್ಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ರಾಶಿ ಹಾಕಲಾಗಿದೆ. ಅದು ಕೊಳೆತರೂ ವಿಲೇವಾರಿ ಮಾಡುತ್ತಿಲ್ಲ. ಇದು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿದೆ. ಈರುಳ್ಳಿ ಸಿಪ್ಪೆಯ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಾಕುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಆತಂಕವೂ ಇದೆ. ಆವರಣದಲ್ಲಿ ದೂಳು ಸಮಸ್ಯೆಯಿದೆ. ಕಸ ವಿಲೇವಾರಿ ಆಗುತ್ತಿಲ್ಲ. ಇರ್ಫಾನ್‌ ಅಕ್ಕಿ–ಬೆಳೆ ವರ್ತಕ –0– ಎಪಿಎಂಸಿ ಆವರಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ವಾಹನ ನಿಲುಗಡೆ ಮಾಡಲು ನಿರ್ಮಿಸಿರುವ ಕಟ್ಟಡವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಮಲ್ಲಿಕಾರ್ಜುನ್ ದ್ವಿಚಕ್ರ ವಾಹನ ಸವಾರ –0– ಎಪಿಎಂಸಿ ಪ್ರಾಂಗಣಕ್ಕೆ ಸಂಪರ್ಕಿಸುವ ಐದನೇ ಮುಖ್ಯರಸ್ತೆಯನ್ನು ವೈಟ್‌ ಟಾಪಿಂಗ್‌ ಹೆಸರಿನಲ್ಲಿ ಕಿತ್ತು ಹಾಕಿದ್ದಾರೆ. ಇದು ಕೃಷಿ ಉತ್ಪನ್ನಗಳನ್ನು ಹೊತ್ತು ಬರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ದೂಳಿನ ಮಜ್ಜನದ ನಡುವೆ ವ್ಯಾಪಾರ ಮಾಡುತ್ತಿದ್ದು ಆರೋಗ್ಯ ಹದಗೆಡುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕು. ಅಬ್ದುಲ್ ಖಾಲೀದ್ ವರ್ತಕ –0–

‘ಮೂಲಸೌಕರ್ಯ ಸುಧಾರಣೆಗೆ ಕ್ರಮ’ ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗೆ ವೇಗ ನೀಡಲಾಗುವುದು. ನಿತ್ಯ ಕಸ ವಿಲೇವಾರಿ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ಪರಿಹರಿಸಲು ಈರುಳ್ಳಿ ಆಲೂಗಡ್ಡೆ ಶುಂಠಿ ಮತ್ತು ಬೆಳ್ಳುಳ್ಳಿ ಉತ್ಪನ್ನಗಳ ವರ್ತಕರನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಹುಮಹಡಿ ವಾಹನ ನಿಲುಗಡೆ ಮಹಡಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಒಂದು ವಾರದಗೊಳಗೆ ಮೂರನೇ ಟೆಂಡರ್‌ ಆಹ್ವಾನಿಸಲಾಗುವುದು. ಪ್ರಾಂಗಣದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ರೈತರಿಗೆ ವರ್ತಕರಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು’ ಎಂದು ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.