ADVERTISEMENT

ಯೋಗೀಶಗೌಡ ಗೌಡರ ಹತ್ಯೆ ಹಿಂದೆ ರಾಜಕಾರಣಿ, ಪೊಲೀಸ್ ‘ಕೈ’ ?

ಸಿಬಿಐಯಿಂದ ಆರು ಸುಪಾರಿ ಹಂತಕರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 20:08 IST
Last Updated 1 ಮಾರ್ಚ್ 2020, 20:08 IST
ಯೋಗೀಶಗೌಡ
ಯೋಗೀಶಗೌಡ   

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿದ್ದ ಬಿಜೆಪಿಯ ಯೋಗೀಶಗೌಡ ಗೌಡರ ಹತ್ಯೆ ಸಂಬಂಧ ಆರು ಸುಪಾರಿ ಹಂತಕರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

‘ಹತ್ಯೆ ಪ್ರಕರಣದಲ್ಲಿ ಸ್ಥಳೀಯ ರಾಜಕಾರಣಿ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಪೊಲೀಸರು ಭಾಗಿಯಾಗಿರುವ ಆತಂಕಕಾರಿ ಸಂಗತಿಯನ್ನು ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ನಡೆದಿದ್ದ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು, ಕೃತ್ಯದ ನಂತರ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಇಬ್ಬರು ಹಾಗೂ ಬೆಂಗಳೂರು ಸೇರಿ ರಾಜ್ಯದ ನಾಲ್ವರ ಮೇಲೆ ನಿಗಾ ಇಟ್ಟಿದ್ದರು.

ADVERTISEMENT

ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿರುವ ಈ ಮಾಹಿತಿ ಸಿಗುತ್ತಿದ್ದಂತೆ ಸಿಬಿಐ ಅಧಿಕಾರಿಗಳು, ಸಿನಿಮೀಯ ರೀತಿಯಲ್ಲಿ
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ವಿಚಾರಣೆ ವೇಳೆ, ಸುಪಾರಿ ಪಡೆದು ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

‍ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು, ಸ್ಥಳೀಯ ಆರು ಮಂದಿಯನ್ನು ಬಂಧಿಸಿದ್ದರು. ಇದೀಗ ಸಿಬಿಐ ಅಧಿಕಾರಿಗಳು ಆರು ಮಂದಿ ಸುಪಾರಿ ಹಂತಕರನ್ನು ಬಂಧಿಸಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ಮಹತ್ವದ ಮಾಹಿತಿ ಸಂಗ್ರಹ: ‘ಪ್ರಕರಣದ ಕೂಲಂಕಷ ತನಿಖೆ ನಡೆಸಲಾಗುತ್ತಿದ್ದು, ಮಹತ್ವದ ಸಂಗತಿಗಳೇ ಬಯಲಾಗಿವೆ. ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದ್ದು, ಹಲವರ ಮೇಲೆ ಕಣ್ಣಿಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಯೋಗೀಶಗೌಡ ಅವರ ಹತ್ಯೆಗೆ ಸ್ಥಳೀಯ ಪೊಲೀಸರು ಬಂಧಿಸಿರುವ ಬಸವರಾಜ ಮುತ್ತಗಿ ಎಂಬಾತನೇ ಸುಪಾರಿ ನೀಡಿದ್ದನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಇದರ ಹಿಂದೆ ಮತ್ತಷ್ಟು ಮಂದಿ ಇರುವ ಅನುಮಾನವೂ ಇದೆ’ ಎಂದು ಮೂಲಗಳು ಹೇಳಿವೆ.

ನಿರಪರಾಧಿಗೆ ಆರೋಪಿ ಪಟ್ಟ?
ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು, ಕೆಲವು ನಿರಪರಾಧಿಗಳನ್ನು ಆರೋಪಿಯನ್ನಾಗಿ ಮಾಡಿರುವ ಸಂಶಯ ಸಿಬಿಐ ಅಧಿಕಾರಿಗಳಿಗೆ ಬಂದಿದೆ. ಈ ಬಗ್ಗೆ, ತನಿಖೆ ಮುಂದುವರಿದಿದೆ.

ಪ್ರಕರಣದಲ್ಲಿ ಬಸವರಾಜ ಮುತ್ತಗಿ, ವಿಕ್ರಮ ಬಳ್ಳಾರಿ, ಕೀರ್ತಿಕುಮಾರ್ ಕುರಹಟ್ಟಿ, ಸಂದೀಪ್ ಸವದತ್ತಿ, ವಿನಾಯಕ ಕಟಗಿ ಮತ್ತು ಮಹಾಬಲ್ಲೇಶ್ವರ ಹೊಂಗಲ್ ಎಂಬುವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಈ ಪೈಕಿ ಕೆಲವರು, ತಾವು ಈ ಪ್ರಕರಣದಲ್ಲಿ ನಿರಪರಾಧಿಗಳೆಂದು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

‘ಹತ್ಯೆಯಲ್ಲಿ ವಿನಯ ಕುಲಕರ್ಣಿ ಕೈವಾಡ’
‘ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕೈವಾಡವಿದೆ‘ ಎಂದು ಆರೋಪಿಸಿ ಯೋಗೀಶಗೌಡ ಅವರ ಸಹೋದರ ಗುರುನಾಥಗೌಡ ಮತ್ತು ತಾಯಿ ತುಂಗಮ್ಮ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಪ್ರಕರಣದಡಿ ಬಂಧಿತನಾಗಿದ್ದ ಆರೋಪಿ ಬಸವರಾಜ ಮುತ್ತಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದರು. ನಂತರದ ಬೆಳವಣಿಗೆಯಲ್ಲಿ ಹೈಕೋರ್ಟ್‌ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದ ಸುಪ್ರಿಂ ಕೋರ್ಟ್‌, ಸಿಬಿಐ ತನಿಖೆಗೆ ಹಸಿರು ನಿಶಾನೆ ತೋರಿಸಿತ್ತು.

ಅದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಚುರುಕಿನ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ
ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣದಡಿ ಬಂಧಿಸಿರುವ ಆರು ಆರೋಪಿಗಳನ್ನು ಇಲ್ಲಿನ 4ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶರ ನಿವಾಸದಲ್ಲಿ ಭಾನುವಾರ ರಾತ್ರಿ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ವಿಜಯಲಕ್ಷ್ಮಿ ಗಾಣಾಪುರ ಅವರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ನಂತರ ಆರೋಪಿಗಳನ್ನು ಸಿಬಿಐ ಅಧಿಕಾರಿಗಳೂ ಉಪ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.

ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಈ ಹಿಂದೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಸುಪ್ರಿಂ ಕೋರ್ಟ್ ಈ ತಡೆಯಾಜ್ಞೆಯನ್ನು ತೆರವುಗೊಳಿಸಿದ ಬಳಿಕ ತನಿಖೆಯನ್ನು ಸಿಬಿಐ ಚುರುಕುಗೊಳಿಸಿತ್ತು. ಕೆಲವು ದಿನಗಳ ಹಿಂದೆ ಧಾರವಾಡಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳು, ಹಲವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.